Bengaluru city: ಶಾಂತಿ ನಗರದ ತುಂಬ ಡೆಡ್ಲಿ ಗುಂಡಿಗಳು!

Published : Oct 24, 2022, 10:18 AM ISTUpdated : Oct 24, 2022, 10:25 AM IST
Bengaluru city: ಶಾಂತಿ ನಗರದ ತುಂಬ ಡೆಡ್ಲಿ ಗುಂಡಿಗಳು!

ಸಾರಾಂಶ

ಶಾಂತಿ ನಗರದ ತುಂಬ ಡೆಡ್ಲಿ ಗುಂಡಿಗಳು! ರಸ್ತೆ ಯಾವುದು, ಗುಂಡಿ ಯಾವುದು ಎಂಬ ಗೊಂದಲ ಈ ರಸ್ತೆಗಳಲ್ಲಿ ಆಸ್ಪತ್ರೆಗೆ ತೆರಳಲು ಗರ್ಭಿಣಿಯರ ಹಿಂದೇಟು

ವಿಶೇಷ ವರದಿ

ಬೆಂಗಳೂರು (ಅ.24) : ಬೃಹದಾಕಾರದ ಗುಂಡಿಗಳಿರುವ ರಸ್ತೆಗಳಲ್ಲಿನ ಆಸ್ಪತ್ರೆಗಳಿಗೆ ಬೈಕ್‌ ಮತ್ತು ಆಟೋದಲ್ಲಿ ಪ್ರಯಾಣಿಸಲು ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಶಾಂತಿನಗರದ ವ್ಯಾಪ್ತಿಯಲ್ಲಿರುವ ವಿಲ್ಸನ್‌ ಗಾರ್ಡನ್‌ ರಸ್ತೆ, ಸಿದ್ಧಯ್ಯ ರಸ್ತೆ, ಬಿಎಂಟಿಸಿ ಬಸ್‌ ಡಿಪೋ-2, ಡಿಪೋ ಮುಂಭಾಗದ ಸರ್ವಿಸ್‌ ರಸ್ತೆಗಳ ಸಾಕ್ಷಿಯಾಗಿದೆ. ಶಾಂತಿನಗರದ ಸಿದ್ಧಯ್ಯ ರಸ್ತೆ ಬಳಿ ಇರುವ ಬಿಬಿಎಂಪಿಯ ಹೆರಿಗೆ ಆಸ್ಪತ್ರೆಗೆ ಪ್ರತಿದಿನ ನೂರಾರು ಮಂದಿ ಗರ್ಭಿಣಿ, ಬಾಣಂತಿಯರು ತಪಾಸಣೆಗೆ ಆಗಮಿಸುತ್ತಾರೆ. ಈ ಆಸ್ಪತ್ರೆ ಆಗಮಿಸುವ ಬಹುತೇಕ ಮಹಿಳೆಯರು ಬಡವರು ಮತ್ತು ಮಧ್ಯಮ ವರ್ಗಕ್ಕೆ ಸೇರಿದ್ದಾರೆ. ಹಾಗಾಗಿ ಬೈಕ್‌ ಅಥವಾ ಆಟೋದಲ್ಲಿ ಆಗಮಿಸುತ್ತಾರೆ. ಆಸ್ಪತ್ರೆಗೆ ಆಗಮಿಸುವ ರಸ್ತೆಯಲ್ಲಿ ಇರುವ ಗುಂಡಿಗಳನ್ನು ನೋಡಿ ಗರ್ಭಿಣಿಯರು ಪ್ರಯಾಣ ಮಾಡುವುದಕ್ಕೆ ಹಿಂದೇಟು ಹಾಕುವ ಸ್ಥಿತಿ ಇದೆ.

Bengaluru: ಬಿಬಿಎಂಪಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಮಹಿಳೆ ಬಲಿ!

ಇನ್ನು ಶಾಂತಿನಗರದ ವಿಲ್ಸನ್‌ ಗಾರ್ಡ್‌ನ್‌ನ ಬಿಬಿಎಂಪಿಯ ಸ್ಮಶಾನ ಇರುವ ರಸ್ತೆಯಲ್ಲಿ ಗುಂಡಿ ಯಾವುದೋ ರಸ್ತೆ ಯಾವುದೋ ಎಂಬ ಸ್ಥಿತಿ ಇದೆ. ಪ್ರತಿ ಹೆಜ್ಜೆಗೆ ಒಂದೊಂದು ದೊಡ್ಡ ಗಾತ್ರದ ಗುಂಡಿಗಳಿವೆ. ಬೈಕ್‌, ಆಟೋ, ಕಾರು ಈ ಗುಂಡಿಗಳಲ್ಲಿ ಹರಸಾಹಸ ಪಟ್ಟು ಸಂಚರಿಸಬೇಕಾದ ಪರಿಸ್ಥಿತಿ ಇದೆ. ನಿತ್ಯ ಈ ರಸ್ತೆಗಳಲ್ಲಿ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತವೆ.

ರಸ್ತೆಗೆ ಕತ್ತರಿ ಗುಂಡಿ ಸೃಷ್ಟಿ

ಶಾಂತಿನಗರ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ಸಂಚಾರ ಮಾಡಿ ಗುಂಡಿ ಸೃಷ್ಟಿಯ ಜತೆಗೆ ಅನಧಿಕೃತವಾಗಿ ಮತ್ತು ಟೆಲಿಕಾಂ ಸಂಸ್ಥೆಗಳು ರಸ್ತೆ ಕತ್ತರಿಸಿ ಅದನ್ನು ವೈಜ್ಞಾನಿಕವಾಗಿ ಮುಚ್ಚದಿರುವುದರಿಂದಲೂ ಅಧಿಕ ಸಂಖ್ಯೆಯ ಗುಂಡಿ ಸೃಷ್ಟಿಯಾಗಿದೆ. ಇನ್ನು ಈ ಭಾಗದಲ್ಲಿ ಬಹುತೇಕ ರಸ್ತೆ ಗುಂಡಿಗಳು ಜಲಮಂಡಳಿ ನಿರ್ಮಿಸಿದ ಮ್ಯಾನ್‌ಹೋಲ್‌ಗಳು, ನೀರಿನ ಕೊಳವೆಗಳ ಕಾರಣದಿಂದಾಗಿ ನಿರ್ಮಾಣವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಮ್ಯಾನ್‌ಹೋಲ್‌ಗಳಲ್ಲಿ ಮಳೆಗಾಲದ ವೇಳೆ ಹೂಳು ತುಂಬಿಕೊಂಡು ಮಳೆ ಬಂದಾಗ ಉಕ್ಕಿ ಹರಿಯುತ್ತವೆ. ಮ್ಯಾನ್‌ಹೋಲ್‌ಗಳ ಮೇಲಿನ ಮುಚ್ಚುವ ಭಾಗ ರಸ್ತೆಗೆ ಸಮನಾಗಿರದೇ ಎತ್ತರ ಅಥವಾ ತಗ್ಗು ಬಿದ್ದಂತಿರುತ್ತದೆ. ಇದರ ಪಕ್ಕದಲ್ಲಿನ ರಸ್ತೆಯ ಮೇಲೆ ಮಳೆಯ ಸಂದರ್ಭದಲ್ಲಿ ವಾಹನ ಸಂಚಾರ ಮಾಡಿದಾಗ ರಸ್ತೆ ಬಹುಬೇಗನೆ ಹಾನಿಗೀಡಾಗುತ್ತದೆ. ಮತ್ತೊಂದೆಡೆ, ಮ್ಯಾನ್‌ಹೋಲ್‌ಗಳ ಕುಸಿತ ಪ್ರಕರಣಗಳೂ ಹೆಚ್ಚಾಗಿದೆ.

ಯಾಮಾರಿದ್ರೆ ಯಮಲೋಕ; ಧಾರವಾಡ ಗ್ರಾಮೀಣ ರಸ್ತೆಗಳು ಗುಂಡಿಮಯ

ನಗರದಲ್ಲಿ ಮಳೆ ಬಂದಾಗ ರಸ್ತೆಯ ಮೇಲೆ ಬಿದ್ದ ನೀರು ಸರಾಗವಾಗಿ ನೀರುಗಾಲುವೆಗೆ ಹರಿದು ಹೋಗುವುದಕ್ಕೆ ಅವಕಾಶ ಇಲ್ಲದೇ ರಸ್ತೆಯಲ್ಲಿ ನಿಲ್ಲುತ್ತದೆ. ಹಾಗಾಗಿ, ರಸ್ತೆಯ ಅಕ್ಕಪಕ್ಕದ ನೀರುಗಾಲುವೆಗಳಲ್ಲಿ ಇರುವ ಹೂಳು ತೆಗೆದು ಸ್ವಚ್ಛಗೊಳಿಸಿದರೆ ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗುವುದನ್ನು ತಡೆಗಟ್ಟಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

 

 

 

ಈವರೆಗೆ 1429 ರಸ್ತೆ ಗುಂಡಿ ಭರ್ತಿ

ರಾಜಧಾನಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದ್ದು, ಈವರೆಗೆ 1,429 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಿಬಿಎಂಪಿಯ ಎಂಟು ವಲಯಗಳ ಪೈಕಿ ಐದು ವಲಯದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ದಕ್ಷಿಣ, ಪೂರ್ವ, ಪಶ್ಚಿಮ ವಲಯ ಹಾಗೂ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರಸ್ತೆಗಳ ಗುಂಡಿ ಮುಚ್ಚಲಾಗುತ್ತಿದೆ. ಉಳಿದಂತೆ ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಶನಿವಾರ ಮಾತ್ರ ಗುಂಡಿ ಮುಚ್ಚಲಾಗಿತ್ತು. ಭಾನುವಾರ ಯಾವುದೇ ಗುಂಡಿ ಮುಚ್ಚಿಲ್ಲ.

ಭಾನುವಾರ 570 ಗುಂಡಿ ಭರ್ತಿ:

ಭಾನುವಾರ ಸಂಜೆವರೆಗೆ ಒಟ್ಟು 27 ಲೋಡ್‌ ಹಾಟ್‌ ಬಿಟುಮಿನ್‌ ಬಿಬಿಎಂಪಿಯ ಡಾಂಬರ್‌ ಮಿಶ್ರಣ ಘಟಕ ಹಾಗೂ ಖಾಸಗಿ ಘಟಕದಿಂದ ಪಡೆದು 570 ಗುಂಡಿ ಮುಚ್ಚಲಾಗಿದೆ. ಇನ್ನು ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ 27 ಲೋಡ್‌ ಡಾಂಬರ್‌ ಮಿಕ್ಸ್‌ ಪಡೆದು 550 ಗುಂಡಿ, ಶನಿವಾರ ರಾತ್ರಿ 13 ಲೋಡ್‌ ಡಾಂಬರ್‌ ಮಿಶ್ರಣ ಪಡೆದು 309 ಗುಂಡಿ ಮುಚ್ಚಲಾಗಿದೆ. ಒಟ್ಟು ಎರಡು ದಿನದಲ್ಲಿ 1,429 ಗುಂಡಿ ಮುಚ್ಚಲಾಗಿದೆ. ಭಾನುವಾರ ರಾತ್ರಿಯೂ ಗುಂಡಿ ಭರ್ತಿ ಮಾಡುವ ಕೆಲಸ ಮುಂದುವರೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಪೂರ್ವ ವಲಯದ ವ್ಯಾಪ್ತಿಗೆ ಬರುವ ಹೊರ ವರ್ತುಲ ರಸ್ತೆಯಲ್ಲಿ 40 ಗುಂಡಿ, ಹೊಸೂರು ರಸ್ತೆಯಲ್ಲಿ 15, ವಿಕ್ಟೋರಿಯಾ ರಸ್ತೆಯಲ್ಲಿ 20, ರಿಚ್‌ಮಂಡ್‌ ರಸ್ತೆಯಲ್ಲಿ 11, ಜೋಗುಪಾಳ್ಯ ವಾರ್ಡ್‌ನ ವಿವಿಧ ರಸ್ತೆಯಲ್ಲಿ 25, ಮೆಗ್ರಾತ್‌ ರಸ್ತೆ, ಪಿಕೆ ಕಾಲೋನಿಯ ಸೇರಿದಂತೆ ವಾರ್ಡ್‌ ಸಂಖ್ಯೆ 181ರಲ್ಲಿ 47 ರಸ್ತೆ ಗುಂಡಿ ಮುಚ್ಚಲಾಗಿದೆ. ಪಶ್ವಿಮ ವಲಯದ ವ್ಯಾಪ್ತಿಯ ಗಾಂಧಿನಗರದಲ್ಲಿ 23, ರಾಜಾಜಿ ನಗರದಲ್ಲಿ 45, ದಕ್ಷಿಣ ವಲಯದ ತ್ಯಾಗರಾಜನಗರದಲ್ಲಿ 15, ಜಯನಗರ 22 ಕ್ರಾಸ್‌ ರಸ್ತೆಯಲ್ಲಿ 26 ಹೀಗೆ ಒಟ್ಟು 45 ರಸ್ತೆಗಳಲ್ಲಿ 879 ರಸ್ತೆ ಗುಂಡಿ ಮುಚ್ಚಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ ಮತ್ತು ಭಾನುವಾರ ರಸ್ತೆ ಗುಂಡಿ ಮುಚ್ಚಿದ ವಿವರ

ವಲಯ ಮುಚ್ಚಿದ ಗುಂಡಿ ಸಂಖ್ಯೆ ರಸ್ತೆ ಸಂಖ್ಯೆ

  • ಪೂರ್ವ 158
  • ಪಶ್ಚಿಮ 429
  • ದಕ್ಷಿಣ 139
  • ರಸ್ತೆ ಮೂಲಸೌಕರ್ಯ ವಿಭಾಗ 153

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ