
ಬೆಂಗಳೂರು (ಡಿ.1): ಬೆಂಗಳೂರಿನ 15 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಇ-ಮೇಲ್ ಮೂಲಕ ಅಪರಿಚಿತರು ಬೆದರಿಕೆ ಹಾಕಿದ್ದು, ಬಸವೇಶ್ವರ ನಗರದಲ್ಲಿ ನ್ಯಾಫಲ್ ಸ್ಕೂಲ್, ವಿದ್ಯಾಶಿಲ್ಪ ಸ್ಕೂಲ್ ಸೇರಿ 7 ಶಾಲೆಗೆ ಬೆದರಿಕೆ ಹಾಕಲಾಗಿದೆ. ಮಿಕ್ಕಂತೆ ಸದಾಶಿವನಗರ, ಯಲಹಂಕ ಸೇರಿ ಹಲವು ಕಡೆಗಳಲ್ಲಿರುವ ಶಾಲೆಗೆ ಬೆದರಿಕೆ ಕರೆ ಬಂದಿದೆ. ಹೀಗಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳನ್ನು ಮನೆಗೆ ವಾಪಸ್ ಕಳಿಸುವಂತೆ ಪೋಷಕರು ಕಣ್ಣೀರಿಡುತ್ತಿರುವ ದೃಶ್ಯ ಕಂಡುಬಂತು.
ಬನ್ನೇರುಘಟ್ಟ ಸಮೀಪದ ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್, ಗ್ರೀನ್ ಹುಡ್ ಹೈ ಸ್ಕೂಲ್, ಸಿಂಗೇನಾ ಅಗ್ರಹಾರ ಸಮೀಪದ ಎಬಿನೇಜರ್ ದೊಮ್ಮಸಂದ್ರ ಬಳಿಕ ಇನ್ವೆಂಚರ್ ಇಂಟರ್ನ್ಯಾಷನಲ್ ಶಾಲೆ, ಬಸವೇಶ್ವರ ನಗರದ ವಾಣಿ ವಿದ್ಯಾಕೇಂದ್ರ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ.
ಯಲಹಂಕದ ಒಂದು ಶಾಲೆಗೂ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಚಾರ ತಿಳಿದು ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ. ಬಾಂಬ್ ಬೆದರಿಕೆಯಿಂದ ಪೋಷಕರು ಆತಂಕದಲ್ಲಿದ್ದು, ಮಕ್ಕಳನ್ನು ಶಾಲೆಯಿಂದ ಪೋಷಕರು ಮನೆಗೆ ಕರೆದೊಯ್ಯುತ್ತಿದ್ದಾರೆ.
ಸದಾಶಿವನಗರದ ನೀವ್ ಸ್ಕೂಲ್ ನಲ್ಲಿ ಕೂಡ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದೆ. ಡಿಸಿಎಂ ಡಿಕೆ ಶಿವಕುಮಾರ್ ಮನೆ ಎದುರಿಗೆ ಈ ಸ್ಕೂಲ್ ಇದೆ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಬಂದು ಪೋಷಕರು ವಾಪಸ್ ಕರೆದುಕೊಂಡು ಹೋಗುತ್ತಿದ್ದಾರೆ. ಪೊಲೀಸರು ಬಂದು ಶಾಲಾ ಸಿಬ್ಬಂದಿಗಳನ್ನ ಹೊರಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸದಾಶಿವ ನಗರ ಮಾತ್ರವಲ್ಲ ನೀವ್ ಶಾಲೆಯ ಐದು ಶಾಲೆಗಳಲ್ಲೂ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದೆ. ಬೆಳಗ್ಗೆ 6 ಗಂಟೆಗೆ ಶಾಲೆಯ ಇಮೇಲ್ ಗೆ ಮೆಸೇಜ್ ಬಂದಿದೆ. ಸದಾಶಿವನಗರ, ವೈಟ್ ಫೀಲ್ಡ್, ಕೋರಮಂಗಲ ಸೇರಿದಂತೆ ಐದು ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಸದಾಶಿವನಗರದ ನೀವ್ ಶಾಲೆಯಲ್ಲಿ ಒಟ್ಟು 150 ಮಕ್ಕಳು ಓದುತ್ತಿದ್ದಾರೆ. ಬೆದರಿಕೆ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ಬಾಂಬ್ ಬೆದರಿಕೆ ಬೆನ್ನಲ್ಲೇ ಮನೆ ಎದುರಿನ ಶಾಲೆಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಪೊಲೀಸರ ಜೊತೆಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.
23ನೇ ಪ್ರಯತ್ನದಲ್ಲಿ ಎಂಎಸ್ಸಿ ಗಣಿತ ಪರೀಕ್ಷೆ ಪಾಸ್ ಮಾಡಿದ ಸೆಕ್ಯುರಿಟಿ ಗಾರ್ಡ್!
ಸ್ಥಳಕ್ಕೆ ಬಸವೇಶ್ವನಗರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನ್ಯಾಫಲ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಈ ಬಗ್ಗೆ ಹೇಳಿಕೆ ನೀಡಿ, ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಎಲ್ಲಾ ಶಾಲೆಗಳಲ್ಲಿ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸುತ್ತಿದೆ. ಈ ಹಿಂದೆಯೂ ಸಹ ಈ ರೀತಿ ಬೆದರಿಕೆ ಕರೆ ಬಂದಿತ್ತು. ಬಹುಶಃ ಇದು ಸುಳ್ಳು ಬಾಂಬ್ ಬೆದರಿಕೆ ಅನ್ನಿಸುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಕಳೆದೊಂದು ವರ್ಷದಿಂದ ನಿರಂತರ ಬೆದರಿಕೆ ಕರೆ ಬರುತ್ತಿದ್ದು ಒಂದು ವರ್ಷದಿಂದ ಆರೋಪಿ ಬಂಧನ ಆಗಿಲ್ಲ. ಇನ್ನು ಕಳೆದ ವರ್ಷ ಒಂದೇ ದಿನ 30 ಶಾಲೆಗೆ ಬೆದರಿಕೆ ಇ- ಮೇಲ್ ಮೂಲಕ ಬೆದರಿಕೆ ಕರೆ ಬಂದಿತ್ತು. ಆದರೆ ಇನ್ನೂ ಕೂಡ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕದ ವಿಚಾರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ