Mann Ki Baat: 2500 ಮರ ಪೋಷಿಸುತ್ತಿರುವ ಪರಿಸರ ಪ್ರೇಮಿ ಸುರೇಶ್

By Kannadaprabha NewsFirst Published Oct 31, 2022, 9:17 AM IST
Highlights
  • ನಗರದಲ್ಲಿ ಕನ್ನಡ ಮಯ ಬಸ್‌ ನಿಲ್ದಾಣ!
  • ಸಹಕಾರ ನಗರದಲ್ಲಿರುವ ಬಸ್‌ ನಿಲ್ದಾಣ
  • ಭಾಷಾ ಪ್ರೇಮಿ ಸುರೇಶ್‌ ಕುಮಾರ್‌ ಕೊಡುಗೆ

ಬೆಂಗಳೂರು (ಅ.31) : ರಾಜಧಾನಿ ಬೆಂಗಳೂರಿನಲ್ಲಿ ಕ್ಷೀಣಿಸುತ್ತಿರುವ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಿಸರ ಉಳಿಸಿ, ಜಾಗೃತಿಗೊಳಿಸುವ ಕೈಂಕರ್ಯವನ್ನು ಸುರೇಶ್‌ಕುಮಾರ್‌ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ನಗರದಲ್ಲಿ ಹೊರ ರಾಜ್ಯ ಮತ್ತು ವಿದೇಶದಿಂದ ಆಗಮಿಸುವವ ಸಂಖ್ಯೆ ಹೆಚ್ಚಾಗಿ ಕನ್ನಡ ಭಾಷೆ, ಸಂಸ್ಕೃತಿ ನಶಿಸಿ ಹೋಗದಂತೆ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರ ನಗರದಲ್ಲಿ ಕನ್ನಡ ಮಯವಾದ ಬಸ್‌ ಶೆಲ್ಟರನ್ನು 2007ರಲ್ಲಿ ನಿರ್ಮಿಸಿದ್ದಾರೆ. ಬಸ್‌ ನಿಲ್ದಾಣಗೆ ಸುವರ್ಣ ಕರ್ನಾಟಕ ಬಸ್‌ ನಿಲ್ದಾಣ ಎಂದು ಹೆಸರಿಡಲಾಗಿದೆ. 2500ಕ್ಕೂ ಅಧಿಕ ಮರ ನೆಟ್ಟು ಪೋಷಿಸುತ್ತಿದ್ದಾರೆ.

Mann Ki Baat: ಬೆಂಗಳೂರಲ್ಲಿ ‘ಅರಣ್ಯ’ ಬೆಳೆಸಿದವಗೆ ಮೋದಿ ಶಹಬ್ಬಾಸ್‌

ಬಸ್‌ ನಿಲ್ದಾಣನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೊಯ್ಸಳ ಶೈಲಿಯ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡಿದ್ದು, ಸುಮಾರು 2 ಗಂಟೆ ಅಧ್ಯಯನ ಮಾಡುವಷ್ಟುಕನ್ನಡ ಭಾಷೆ, ಸಂಸ್ಕೃತಿ ಮಾಹಿತಿಯ ಕಣಜವನ್ನು ರೂಪಿಸಿದ್ದಾರೆ. ವರ್ಣಮಾಲೆ, ಕರ್ನಾಟಕದ ಪ್ರಸಿದ್ಧ ಸ್ಥಳ ಚಿತ್ರಗಳು, ಜಾನಪದ ಕಲೆಗಳು, ಕರ್ನಾಟಕದ ಸಂಕ್ಷಿಪ್ತ ಇತಿಹಾಸ, ಕನ್ನಡದ ಅಂಕಿಗಳು, ಚಲನಚಿತ್ರ ಮಹನೀಯರು ಸೇರಿದಂತೆ ಮೊದಲಾದ ವಿವರಗಳನ್ನು ಅಳವಡಿಕೆ ಮಾಡಲಾಗಿದೆ.

ವಿಶೇಷವೆಂದರೆ ಬಸ್‌ ನಿಲ್ದಾಣನಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಸುಪ್ರಭಾತ, ಭಕ್ತಿಗೀತೆ, ಜಾನಪದ ಗೀತೆ, ಭಾವಗೀತೆ, ಹೊಸ ಚಿತ್ರಗೀತೆ, ಸುಗಮ ಸಂಗೀತ, ರಂಗಗೀತೆ ಸೇರಿದಂತೆ ವಿವಿಧ ಗೀತ ಗಾಯನ ವ್ಯವಸ್ಥೆಯನ್ನು ಬಸ್‌ ನಿಲ್ದಾಣದಲ್ಲಿ ಮಾಡಲಾಗಿದೆ. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಗಡಿಯಾರ ಅಳವಡಿಸಲಾಗಿದೆ.

ಈ ಬಸ್‌ ನಿಲ್ದಾಣವನ್ನು ನೋಡಿದ ಬಿಬಿಎಂಪಿಯ ಅಧಿಕಾರಿಗಳು, ಡಾ ರಾಜಕುಮಾರ್‌ ಸಮಾಧಿ ಬಳಿ ಮತ್ತು ಗಂಗಾ ನಗರದಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25ಕ್ಕೂ ಈ ಮಾದರಿಯ ಬಸ್‌ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ.

2,500 ಮರ ನೆಟ್ಟು ಪೋಷಣೆ

ಕನ್ನಡದ ಭಾಷೆ, ಸಂಸ್ಕೃತಿಯ ಉಳಿಸುವ ಜತೆಗೆ ಪರಿಸರ ಉಳಿಸುವುದು ಮತ್ತು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಹಕಾರ ನಗರದ ರೈಲ್ವೆ ಸಮಾನಂತರ ರಸ್ತೆ ಸೇರಿದಂತೆ ವಿವಿಧ ರಸ್ತೆಯಲ್ಲಿ ಒಟ್ಟು 8 ರಿಂದ 9 ಕಿ.ಮೀ. ರಸ್ತೆಯ ಅಕ್ಕಪಕ್ಕದಲ್ಲಿ ಸುಮಾರು 2500ಕ್ಕೂ ಅಧಿಕ ಮರಗಳನ್ನು ಬೆಳೆಸಲಾಗಿದೆ. ಪ್ರತಿಯೊಂದು ಮರಕ್ಕೂ ಕನ್ನಡ ಕವಿಗಳ ಹೆಸರು, ಮಹನೀಯರ ಹೆಸರನ್ನು ಇಡಲಾಗಿದೆ ಎಂದು ಸುರೇಶ್‌ ಕುಮಾರ್‌ ಹೇಳಿದರು.

Mann Ki Baat: ಪರಿಸರ ಕಾಳಜಿ ಜತೆಗೆ ಕನ್ನಡದ ಅರಿವು ಮೂಡಿಸುತ್ತಿರುವ ಸುರೇಶ್‌ ಕುಮಾರ್‌ ಶ್ಲಾಘಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅಂತಹ ಮಹಾನ್‌ ನಾಯಕರು ನಾನು ಮಾಡಿದ ಸೇವೆಯನ್ನು ಗಮನಿಸಿ ಮನ್‌ಕೀ ಬಾತ್‌ನಲ್ಲಿ ಪ್ರಸ್ತಾಪ ಮಾಡುತ್ತಾರೆ ಎಂಬ ಭಾವಿಸಿರಲಿಲ್ಲ. ನಿಜಕ್ಕೂ ಮನಸ್ಸು ತುಂಬಿ ಬಂದಿದೆ.

-ಸುರೇಶ್‌ ಕುಮಾರ್‌, ಪರಿಸರ ಮತ್ತು ಕನ್ನಡ ಪ್ರೇಮಿ.

click me!