ತಾಲೂಕಿನ ನೆರಿಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಮಳೆ ಸುರಿದಿದ್ದು ನೆರಿಯ ಸೇತುವೆ ಮತ್ತೆ ಮುಳುಗಡೆಯಾಗಿದ್ದು ಜನರು ಆತಂಕದಲ್ಲಿದ್ದಾರೆ. ನೆರಿಯ ಗ್ರಾಮದ ಕಾಟಾಜೆ, ಪುಲ್ಲಾಜೆ ಪರಿಸರದಲ್ಲಿ ಭಾರೀ ನೀರು ಹರಿದು ಬಂದಿದ್ದು ತೋಟಗಳು ಗದ್ದೆಗಳು ಜಲಾವೃತಗೊಂಡಿದೆ.
ಬೆಳ್ತಂಗಡಿ (ಅ.09): ತಾಲೂಕಿನ ನೆರಿಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಮಳೆ ಸುರಿದಿದ್ದು ನೆರಿಯ ಸೇತುವೆ ಮತ್ತೆ ಮುಳುಗಡೆಯಾಗಿದ್ದು ಜನರು ಆತಂಕದಲ್ಲಿದ್ದಾರೆ. ನೆರಿಯ ಗ್ರಾಮದ ಕಾಟಾಜೆ, ಪುಲ್ಲಾಜೆ ಪರಿಸರದಲ್ಲಿ ಭಾರೀ ನೀರು ಹರಿದು ಬಂದಿದ್ದು ತೋಟಗಳು ಗದ್ದೆಗಳು ಜಲಾವೃತಗೊಂಡಿದೆ. ಭಾರೀ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ನದಿಯಲ್ಲಿ ಹರಿದು ಬಂದಿದೆ. ಮಂಗಳವಾರ ರಾತ್ರಿಯ ವೇಳೆ ಇದೇ ರೀತಿಯಲ್ಲಿ ನೆರಿಯ ಹೊಳೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು . ಇದೀಗ ಬುಧವಾರ ಮತ್ತೆ ಪ್ರವಾಹದಂತೆ ನದಿಯಲ್ಲಿ ನೀರು ಬಂದಿರುವುದು ಜನರಲ್ಲಿ ಭಯ ಮೂಡಿಸಿದೆ.
ಮಧ್ಯಾಹ್ನ ನೆರಿಯ ಪ್ರದೇಶದಲ್ಲಿ ಸಾಮಾನ್ಯ ಮಳೆ ಮಾತ್ರ ಸುರಿದಿದೆ. ಆದರೂ ನದಿಯಲ್ಲಿ ಹಾಗೂ ತೊರೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಏರಿಕೆಯಾಗಿದೆ. ಘಾಟಿಯಲ್ಲಿಯೂ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದಿದೆ. ಚಾರ್ಮಾಡಿ ಘಾಟಿಯ ಮೇಲ್ಬಾಗದಿಂದ ಹರಿದು ಬಂದ ನೀರು ನೇರವಾಗಿ ನೆರಿಯ ಹಳ್ಳವನ್ನು ಸೇರುತ್ತಿದ್ದು ಘಾಟಿಯ ಮೇಲ್ಬಾಗದಲ್ಲಿ ಸುರಿದ ಮಳೆಯಿಂದಾಗಿ ನೆರಿಯದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ನೆರಿಯ ಗ್ರಾಮದ ಹಲವೆಡೆ ತೋಟಗಳಿಗೆ ಗದ್ದೆಗಳಿಗೆ ನೀರು ನುಗ್ಗಿದ್ದು ನಷ್ಟಗಳ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದುಬರವೇಕಾಗಿದೆ
ಲಘು ಪ್ರಮಾಣದ ಗುಡ್ಡ ಕುಸಿತ: ಚಾರ್ಮಾಡಿ ಘಾಟಿ ಪರಿಸರದಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಭಾರಿ ಗಾಳಿ,ಮಳೆ ಸುರಿದಿದೆ. ಇದರ ಪರಿಣಾಮ ಘಾಟಿಯ ಮೂರನೇ ತಿರುವಿನ ಬಳಿ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಮರಗಳು ಉರುಳಿ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತವು ಉಂಟಾಗಿದೆ. ಮರಗಳು ರಸ್ತೆಗೆ ಬಿದ್ದ ಪ್ರದೇಶದಲ್ಲಿ ಒಂದು ವಾಹನ ಮಾತ್ರ ಸಂಚರಿಸುವಷ್ಟು ಜಾಗ ಇದ್ದು ಬೇಕಾಬಿಟ್ಟಿ ವಾಹನಗಳನ್ನು ನುಗ್ಗಿಸಿದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು. ಘಾಟಿ ಪ್ರದೇಶದಲ್ಲಿ ನಿರಂತರ ಎರಡು ತಾಸಿಗಿಂತ ಅಧಿಕಕಾಲ ಮಳೆ ಸುರಿದ ಕಾರಣ ಘಾಟಿ ರಸ್ತೆ ನದಿಯಂತಾಗಿತ್ತು. ಘಾಟಿ ಪ್ರದೇಶದಲ್ಲಿರುವ ಹಲವಾರು ಜಲಪಾತಗಳು ರಸ್ತೆ ತನಕವು ಧುಮ್ಮಿಕ್ಕಿದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸಿಎಂ ಬದಲಾವಣೆ ಬಗ್ಗೆ ಯಾವ ಚರ್ಚೆ ನಡೆದಿಲ್ಲ: ಸಚಿವ ಕೃಷ್ಣ ಭೈರೇಗೌಡ
ಜಲಪಾತಗಳಿಂದ ರಸ್ತೆಗೆ ಬಿದ್ದ ನೀರು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ಹಳ್ಳದಂತೆ ಹರಿಯಿತು. ಗುಡ್ಡ ಕುಸಿತ ಹಾಗೂ ಮರ ಉರುಳಿರುವ ಕುರಿತು ಸ್ಥಳೀಯರಾದ ಚಾರ್ಮಾಡಿ ಹಸನಬ್ಬ ಹಾಗು ಇತರರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಮರ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ಇಲ್ಲಿ ಯಾವುದೇ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ.