
ಮಂಗಳೂರು(ಡಿ.21): ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದ ತನಿಖಾ ವೈಫಲ್ಯ ಖಂಡಿಸಿ ಕಳೆದ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ, ಮಂಗಳೂರು ಪೊಲೀಸರು ಕೇವಲ ಮುಸ್ಲಿಂ ಸಂಘಟನೆಗಳನ್ನು ಗುರಿಯಾಗಿಸುತ್ತಿದ್ದಾರೆ ಎಂದು SDPI ಮಾಡಿದ್ದ ಆರೋಪಕ್ಕೆ ಈಗ ನಗರ ಪೊಲೀಸ್ ಆಯುಕ್ತರು ಅಂಕಿ-ಅಂಶಗಳ ಸಹಿತ ಸ್ಪಷ್ಟಪಡಿಸಿದ್ದಾರೆ.
ಕಳೆದ ಶುಕ್ರವಾರ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ SDPI ರಾಷ್ಟ್ರೀಯ ನಾಯಕ ರಿಯಾಜ್ ಫರಂಗೀಪೇಟೆ, ಮಂಗಳೂರು ಪೊಲೀಸರು ಪಕ್ಷಪಾತಿ ಧೋರಣೆ ತಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಪ್ರತಿಭಟನೆಗೆ ಅನುಮತಿ ನೀಡಲು ಮುಸ್ಲಿಂ ಸಂಘಟನೆಗಳಿಂದ ಮಾತ್ರ ಬಾಂಡ್ (ಮುಚ್ಚಳಿಕೆ) ಬರೆಸಿಕೊಳ್ಳಲಾಗುತ್ತಿದೆ, ಆದರೆ ಹಿಂದೂ ಸಂಘಟನೆಗಳಿಗೆ ಇಂತಹ ಯಾವುದೇ ನಿಯಮ ಅನ್ವಯಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
SDPI ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ, ಪೊಲೀಸರು ಯಾವುದೇ ಧರ್ಮದ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈವರೆಗೆ ಒಟ್ಟು 895 ಜನರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, ಅದರಲ್ಲಿ 521 ಜನರು ಹಿಂದೂಗಳು, 351 ಮುಸ್ಲಿಮರು ಹಾಗೂ ಇತರ ಧರ್ಮದವರು 30 ಜನರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರೌಡಿಶೀಟರ್‌ಗಳ ಪಟ್ಟಿ ಬಾಂಡ್ ವಿವರ ನೀಡಿದ ಕಮಿಷನರ್:
ಬಾಂಡ್ ಬರೆಸಿಕೊಂಡವರ ವಿವರಗಳನ್ನು ನೀಡಿದ ಆಯುಕ್ತರು, ಹಿಂದೂಗಳ ಪೈಕಿ 474 ರೌಡಿಶೀಟರ್‌ಗಳು ಹಾಗೂ 57 ಹಳೆಯ ಅಪರಾಧಿಗಳಿದ್ದಾರೆ. ಮುಸ್ಲಿಮರ ಪೈಕಿ 321 ರೌಡಿಶೀಟರ್‌ಗಳು ಹಾಗೂ 30 ಹಳೆಯ ಅಪರಾಧಿಗಳಿದ್ದಾರೆ. ಕೇವಲ SDPI ಮಾತ್ರವಲ್ಲದೆ, ಭಜರಂಗದಳದಿಂದಲೂ ಪ್ರತಿಭಟನೆ ಮತ್ತು ಮೆರವಣಿಗೆಗಾಗಿ 2 ಲಕ್ಷ ರೂಪಾಯಿ ಬಾಂಡ್ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಂಡ್ ಉಲ್ಲಂಘನೆ ಮತ್ತು ಹಣ ಮುಟ್ಟುಗೋಲು
ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ ಒಟ್ಟು 10 ರಿಂದ 15,000 ರೂಪಾಯಿ ಬಾಂಡ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಾಂಡ್ ಉಲ್ಲಂಘನೆ ಮಾಡಿದವರಲ್ಲಿ ಹಿಂದೂಗಳು 39, ಮುಸ್ಲಿಮರು 13 ಮತ್ತು ಇತರ ಇಬ್ಬರು ಸೇರಿದ್ದಾರೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಪೊಲೀಸ್ ಆಯುಕ್ತರು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ