
ಬೆಂಗಳೂರು (ಮಾ.29): ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ(ಐಇಡಿ) ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್‌ನ ತಪ್ಪೊಪ್ಪಿಗೆ ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಿಶೇಷ ನ್ಯಾಯಾಲಯ ಮಾನ್ಯ ಮಾಡಿದ್ದು, ಬರುವ ಏ.10ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಮೂರು ತಿಂಗಳ ಹಿಂದೆಯೇ ಆರೋಪಿ ಶಾರೀಕ್ ತಾನು ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಇದೀಗ ನ್ಯಾಯಾಲಯ ಪುರಸ್ಕರಿಸಿದೆ. ಈ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿ 2024ರಲ್ಲಿ ಆರೋಪಿಗಳಾದ ಶಾರೀಕ್ ಮತ್ತು ಸೈಯದ್ ಯಾಸೀನ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪಿ ಶಾರೀಕ್ ತಾನು ನಿರಾಪರಾಧಿ. ಯಾವುದೇ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ವಾದಿಸಿದ್ದ. ಆದರೆ, ಕಳೆದ ಡಿಸೆಂಬರ್‌ನಲ್ಲಿ ತನ್ನ ವಕೀಲರ ಮುಖಾಂತರ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಬಳಿಕ ನ್ಯಾಯಾಲಯ ಮೂರು ತಿಂಗಳ ಕಾಲ ವಿಚಾರಣೆ ನಡೆಸಿದ್ದು, ನ್ಯಾಯಾಲಯದಲ್ಲಿಯೂ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತಪ್ಪೊಪ್ಪಿಗೆ ಅರ್ಜಿಯನ್ನು ಮಾನ್ಯ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರ ನ.19ರಂದು ಸಂಜೆ 4.40 ಸುಮಾರಿಗೆ ಶಾರೀಕ್ ಆಟೋದಲ್ಲಿ ತೆರಳುವಾಗ ಕುಕ್ಕರ್ ಸ್ಫೋಟಗೊಂಡಿತ್ತು.
ಸ್ಫೋಟದ ರಭಸಕ್ಕೆ ಶಾರೀಕ್ ಹಾಗೂ ಆಟೋ ಚಾಲಕ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಪೊಲೀಸರು, ಶಾರೀಕ್‌ನನ್ನು ಬಂಧಿಸಿದ್ದರು.
ಈ ಕೃತ್ಯದ ಹಿಂದೆ ಐಸಿಸ್ ಉಗ್ರ ಸಂಘಟನೆ ನಂಟು ಕಂಡು ಬಂದ ಹಿನ್ನೆಲೆಯಲ್ಲಿ ಎನ್‌ಐಎ ತನಿಖಾ ಅಖಾಡಕ್ಕೆ ಇಳಿದಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು.
ಆರೋಪಿ ಮೊಹಮ್ಮದ್ ಶಾರೀಕ್ ರಾಜ್ಯದ ಧರ್ಮಸ್ಥಳ, ಕದ್ರಿ ಮಂಜುನಾಥ ದೇವಾಲಯ, ತಮಿಳುನಾಡಿನ ವೇಲೂರಿನ ದೇವಾಲಯ, ಕನ್ಯಾಕುಮಾರಿ ಸೇರಿ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಕದ್ರಿ ಮಂಜುನಾಥಸ್ವಾಮಿ ದೇವಾಲಯದ ಬಳಿ ಕುಕ್ಕರ್ ಬಾಂಬ್ ಸ್ಫೋಟಿಸಲು ಆಟೋದಲ್ಲಿ ಹೊರಟಿದ್ದ. ಈ ಕುಕ್ಕರ್ ಬಾಂಬ್‌ಗೆ 90 ನಿಮಿಷ ಟೈಮ್ ಫಿಕ್ಸ್ ಮಾಡುವ ಬದಲು 9 ನಿಮಿಷಕ್ಕೆ ತಪ್ಪಾಗಿ ಟೈಮ್ ಫಿಕ್ಸ್ ಮಾಡಿದ್ದ. ಹೀಗಾಗಿ ಆ ಕುಕ್ಕರ್ ಬಾಂಬ್ ಮಾರ್ಗ ಮಧ್ಯೆಯೇ ಆಟೋದಲ್ಲಿ ಸ್ಫೋಟಗೊಂಡಿತ್ತು ಎಂಬ ಅಂಶವನ್ನು ಎನ್‌ಐಎ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಶಾರೀಕ್, ಐಸಿಎಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಶಿವಮೊಗ್ಗ ಐಸಿಸ್ ಮಾಡ್ಯುಲ್ ಸದಸ್ಯನಾಗಿದ್ದ. ಈತ 2020ರಲ್ಲಿ ಮಂಗಳೂರಿನ ಗೋಡೆ ಬರಹ ಹಾಗೂ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದಾನೆ. ಇದೀಗ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾತ್ರ ತಪ್ಪೊಪ್ಪಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ