ಕೋಮು ವೈಷಮ್ಯ ಸೃಷ್ಟಿಸಲು ಮಂಗಳೂರು ಸ್ಫೋಟ: ಡಿಜಿಪಿ ಪ್ರವೀಣ್‌ ಸೂದ್‌

By Kannadaprabha News  |  First Published Nov 24, 2022, 10:10 AM IST

ಬಾಂಬ್‌ ಸ್ಫೋಟವಾದಾಗ ಧರ್ಮಗಳ ನಡುವೆ ದ್ವೇಷ ಹುಟ್ಟುತ್ತದೆ. ಈ ಮೂಲಕ ದೇಶವನ್ನು ಅಸ್ಥಿರಗೊಳಿಸುವ, ಕೋಮು ಸೌಹಾರ್ದತೆಯನ್ನು ಕದಡಿಸುವ ಉದ್ದೇಶ ಇಂಥ ಭಯೋತ್ಪಾದನಾ ಕೃತ್ಯಗಳ ಹಿಂದೆ ಇರುತ್ತದೆ ಎಂದ ಪ್ರವೀಣ್‌ ಸೂದ್‌ 


ಮಂಗಳೂರು(ನ.24):  ಸಮಾಜದಲ್ಲಿ ಧರ್ಮಗಳ ನಡುವೆ ವೈಮನಸ್ಸು ಜಾಸ್ತಿ ಮಾಡುವ ಉದ್ದೇಶ ಬಾಂಬ್‌ ಸ್ಫೋಟ ಪ್ರಕರಣದ ಹಿಂದಿತ್ತು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್‌ ಸ್ಫೋಟವಾದಾಗ ಧರ್ಮಗಳ ನಡುವೆ ದ್ವೇಷ ಹುಟ್ಟುತ್ತದೆ. ಈ ಮೂಲಕ ದೇಶವನ್ನು ಅಸ್ಥಿರಗೊಳಿಸುವ, ಕೋಮು ಸೌಹಾರ್ದತೆಯನ್ನು ಕದಡಿಸುವ ಉದ್ದೇಶ ಇಂಥ ಭಯೋತ್ಪಾದನಾ ಕೃತ್ಯಗಳ ಹಿಂದೆ ಇರುತ್ತದೆ ಎಂದರು.

ಮಂಗಳೂರು ಬ್ಲಾಸ್ಟ್‌ ಆರೋಪಿ ಶಾರಿಕ್‌ಗೆ ಪಿಎಫ್ಐ ಸಂಪರ್ಕ..?

Tap to resize

Latest Videos

ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತಿ ಅಗತ್ಯವಾಗಿದೆ. ಆತನ ವಿಚಾರಣೆ ಬಳಿಕ ಮತ್ತಷ್ಟುಸತ್ಯ ಹೊರಗೆ ಬರಲಿದೆ. ಎನ್‌ಐಎ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜತೆಗೆ ಆರಂಭದಿಂದಲೂ ಇವೆ. ಅಧಿಕೃತವಾಗಿ ಸದ್ಯದಲ್ಲೇ ಈ ಪ್ರಕರಣ ಎನ್‌ಐಎಗೆ ಹಸ್ತಾಂತರ ಆಗಲಿದೆ ಎಂದು ಅವರು ಹೇಳಿದರು.

ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವು ಜನರನ್ನ ವಶಕ್ಕೆ ಪಡೆಯುತ್ತೇವೆ. ಆದರೆ ಅವರೆಲ್ಲರೂ ಆರೋಪಿಗಳೇ ಆಗಿರಲ್ಲ. ತನಿಖೆಗೆ ಮಾಹಿತಿಗಾಗಿ ಕರೆಸುತ್ತೇವೆ ಅಷ್ಟೇ. ಆದರೆ ಮಾಧ್ಯಮದವರು ಅವರನ್ನು ಅಪರಾಧಿಗಳಂತೆ ಬಿಂಬಿಸಬಾರದು ಎಂದು ಡಿಜಿಪಿ ಪ್ರವೀಣ್‌ ಸೂದ್‌ ಮನವಿ ಮಾಡಿದರು.

ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ಬಳ್ಳಾರಿ ಲಿಂಕ್: ಸಂಡೂರು ನಿವಾಸಿಯ ಸಿಮ್ ಬಳಸಿದ ಶಾರೀಕ್

ಪ್ರಕರಣದಲ್ಲಿ ಕ್ರಿಪ್ಟೊಕರೆನ್ಸಿ, ಬಿಟ್‌ ಕಾಯಿನ್‌ ಬಳಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರೋಪಿಗಳಿಗೆ ಹಣಕಾಸಿನ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಅದರ ಬಗ್ಗೆ ಹೆಚ್ಚಿನದೇನೂ ಹೇಳಲಾಗದು. ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈ ಹಂತದಲ್ಲಿ ಏನೇ ಹೇಳಿದರೂ ತನಿಖೆಗೆ ಬಾಧಕವಾಗಲಿದೆ ಎಂದು ಅವರು ಹೇಳಿದರು.

ಐಡಿ ದಾಖಲೆ ಬಗ್ಗೆ ಎಚ್ಚರ

ಮನೆ ಬಾಡಿಗೆ ನೀಡುವ ಸಂದರ್ಭ ಸ್ಥಳೀಯ ಪೊಲೀಸ್‌ ಠಾಣೆಗಳಿಂದ ಪರಿಶೀಲನೆ ನಡೆಸುವಂತೆ ಸಾರ್ವಜನಿಕರಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ವಾಹನ ಮಾರಾಟ ಸಂದರ್ಭ ಕೂಡ ವಾಹನದ ದಾಖಲೆ ಸಂಪೂರ್ಣ ಟ್ರಾನ್ಸ್‌ಫರ್‌ ಆಗುವಂತೆ ನೋಡಿಕೊಳ್ಳಬೇಕು. ಮಾತ್ರವಲ್ಲದೆ ಆಧಾರ್‌ ಕಾರ್ಡ್‌, ಪಾಸ್‌ಪೋರ್ಚ್‌ ಸೇರಿದಂತೆ ಯಾವುದೇ ರೀತಿಯ ಗುರುತಿನ ಚೀಟಿ ಕಳೆದು ಹೋದಾಗ ಈ ಬಗ್ಗೆ ಸ್ಥಳೀಯ ಠಾಣೆಗಳಿಗೆ ಅಥವಾ ಸದ್ಯ ಲಭ್ಯ ಇರುವ ಇ-ಲಾಸ್ಟ್‌ ಆ್ಯಪ್‌ ಮೂಲಕ ದೂರು ಸಲ್ಲಿಸಿದರೆ ನಿಮ್ಮ ಗುರುತಿನ ಚೀಟಿ ಈ ರೀತಿ ದುರುಪಯೋಗ ಆಗುವುದನ್ನು ತಪ್ಪಿಸಬಹುದು ಎಂದು ಡಿಜಿಪಿ ಪ್ರವೀಣ್‌ ಸೂದ್‌ ತಿಳಿಸಿದರು.

ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರಿನ 8 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ನಾಲ್ವರನ್ನು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಆರೋಪಿಗಳು ಅಂತ ಇದುವರೆಗೆ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಅಂತ ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ. 
 

click me!