ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ನಿಷೇಧ ವಿರೋಧಿಸಿ, ಅತಿಥಿಗಳಿಗೆ ಬಾಡೂಟ ಬಡಿಸಲು ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಬಾಡೂಟ ಬಳಗದ ಉದ್ದೇಶ ಮಾಂಸಹಾರದ ಪ್ರಾತಿನಿಧ್ಯ ಇರಬೇಕೆಂಬುದಾಗಿದೆ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಮಂಡ್ಯ (ಡಿ.19): ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ನಿಷೇಧ ವಿರೋಧಿಸಿ ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಬಾಡೂಟ ಬಡಿಸಲು ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನಕ್ಕೆ ಬುಧವಾರದಿಂದ ಚಾಲನೆ ನೀಡಲಾಗಿದೆ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಡೂಟ, ಬಾಡೂಟದ ಬಳಗವನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಯತ್ನ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರದ ಆಗ್ರಹ ಎಂಬ ತಪ್ಪು ಸಂದೇಶ ರವಾನೆಯಾಗುತ್ತಿದೆ. ಆದರೆ, ನಾವು ಮಾಂಸಹಾರದ ಪ್ರಾತಿನಿಧ್ಯ ಇರಬೇಕೆಂಬುದು ಬಳಗದ ಉದ್ದೇಶವಾಗಿದೆ ಎಂದರು.
undefined
ಮೊದಲು ಸಮ್ಮೇಳನದಲ್ಲಿ ತಂಬಾಕು, ಮದ್ಯಪಾನ ಹಾಗೂ ಮಾಂಸಹಾರ ನಿಷೇಧ ಎಂಬ ಹೇಳಿಕೆ ವಿರುದ್ಧ ಇದು ಪ್ರಾರಂಭವಾಗಿದೆ. ಮಾಂಸಹಾರಕ್ಕೆ ಯಾವುದೇ ರೀತಿಯಲ್ಲಿ ನಿಷೇಧವಿಲ್ಲ. ಆದರೂ ಅದನ್ನು ಕೀಳಾಗಿ, ಅಸ್ಪೃಶ್ಯತೆಯಿಂದ ಕಾಣುತ್ತಿದ್ದು, ಇದನ್ನು ಹೋಗಲಾಗಡಿಸುವ ಪ್ರಯತ್ನ ನಮ್ಮದಾಗಿದೆ ಎಂದು ಹೇಳಿದರು.
ಮಂಡ್ಯ ಸಾಹಿತ್ಯ ಸಮ್ಮೇಳನ : ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರಿ ಮಾರ್ಗದಲ್ಲಿ ಬದಲಾವಣೆ
ಸಮ್ಮೇಳನದಲ್ಲಿ ಒಂದು ಮೊಟ್ಟೆ ಹಾಗೂ ಒಂದು ತುಂಡು ಮಾಂಸ ನೀಡುವುದರಲ್ಲಿ ಸಮಸ್ಯೆ ಏನಿದೆ. ಬಾಡೂಟಕ್ಕೆ ಅವಕಾಶ ನೀಡದಿದ್ದರೆ ಇಂದಿನಿಂದ ಕೋಳಿ ಮತ್ತು ಮೊಟ್ಟೆ ಸಂಗ್ರಹಿಸಿ ದಾಸ್ತಾನು ಮಾಡಲಾಗುತ್ತಿದೆ ಎಂದು ತಿಳಿಸಿದರು. ವಿಚಾರವಾದಿ ಸಂತೋಷ್ ಮಾತನಾಡಿ, ಆಹಾರ ಸಮಿತಿ ಬಾಡೂಟ ಅನುಷ್ಠಾನಕ್ಕೆ ಮುಂದಾದರೆ ನಾವು ಸಂಗ್ರಹಿಸಿದ ಕುರಿ, ಕೋಳಿ, ಧಾನ್ಯಗಳನ್ನು ಸಮಿತಿಗೆ ಸಲ್ಲಿಸುತ್ತೇವೆ. ಅನುಷ್ಠಾನಗೊಳಿಸದಿದ್ದರೆ ಸಮ್ಮೇಳನ ಸ್ಥಳದ ಆಸುಪಾಸಿನಲ್ಲಿ ಖಂಡನಾ ಸಭೆ ನಡೆಸಿ ಸಾಹಿತ್ಯ ಅತಿಥಿಗಳಿಗೆ ಮೊಟ್ಟೆ, ಮಾಂಸದ ತುಂಡು ನೀಡುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಸುದ್ದಿಗೋಷ್ಠಿ ಎಂ.ಬಿ.ನಾಗಣ್ಣಗೌಡ, ಸಮಾನ ಮನಸ್ಕರ ವೇದಿಕೆ ಲಕ್ಷ್ಮಣ್ ಚೀರನಹಳ್ಳಿ, ಸಿಐಟಿಯು ಸಿ.ಕುಮಾರಿ, ಮನ್ನೂರ್, ವಕೀಲ ಶಿವಶಂಕರ್, ಧನುಷ್ ಇದ್ದರು.-