8,125 ಚದರ ಮೀಟರ್ BDA ನಿವೇಶನದ ವಿವಾದ; ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

Kannadaprabha News   | Kannada Prabha
Published : Sep 19, 2026, 06:38 AM IST
Siddartha vihara trust

ಸಾರಾಂಶ

ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಡಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ವಿವರಣೆ ನೀಡುವಂತೆ ಲೋಕಾಯುಕ್ತ ಎಸ್‌ಪಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

 ಬೆಂಗಳೂರು (ಸೆ.19): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌(Siddhartha Vihara Trust)ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ(ಬಿಡಿಎ) ಅಕ್ರಮವಾಗಿ ನಾಗರಿಕ ಸೌಕರ್ಯ(ಸಿಎ) ನಿವೇಶನ ಪಡೆದ ಆರೋಪದ ಖಾಸಗಿ ದೂರಿನ ತನಿಖೆ ಸಂಬಂಧ ವಿವರಣೆ ನೀಡುವಂತೆ ಬೆಂಗಳೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ(ಎಸ್ಪಿ) ನಗರದ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್‌ ನ್ಯಾಯಾಲಯ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು ಲೋಕಾಯುಕ್ತ ಎಸ್‌ಪಿಗೆ ನೋಟಿಸ್

ವಿಜಯರಾಘವ ಮರಾಠೆ ಎಂಬುವವರು ನೀಡಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು, ಬೆಂಗಳೂರು ಲೋಕಾಯುಕ್ತ ಎಸ್ಪಿಗೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 175(3) ಅಡಿ ನೋಟಿಸ್‌ ಜಾರಿಗೊಳಿಸಿ ಅ.6ಕ್ಕೆ ವಿಚಾರಣೆ ಮುಂದೂಡಿತು.

ವಿಜಯರಾಘವ ಮರಾಠೆ ಅವರು ಮೊದಲಿಗೆ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲಿಲ್ಲ. ಹೀಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ದೂರುದಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ (ಅಫಿಡೆವಿಟ್‌) ತಾಂತ್ರಿಕ ದೋಷಗಳ ಕಾರಣ ಮುಂದಿಟ್ಟು ಲೋಕಾಯುಕ್ತ ತನಿಖೆಗೆ ಆದೇಶಿಸುವ ಬದಲು ಬಿಎನ್‌ಎಸ್‌ಎಸ್‌ ಸೆಕ್ಷನ್‌ 223ರ ಅಡಿ ತಾನೇ ವಿಚಾರಣೆ ನಡೆಸುವುದಾಗಿ ತಿಳಿಸಿ ಆದೇಶಿಸಿತ್ತು.

ಹೈಕೋರ್ಟ್‌ ಆದೇಶದಲ್ಲೇನಿದೆ?

ಈ ಆದೇಶವನ್ನು ದೂರುದಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಮಾಣಪತ್ರದಲ್ಲಿ ದೋಷಗಳಿದ್ದಲ್ಲಿ ಸರಿಪಡಿಸಲು ದೂರುದಾರರಿಗೆ ಅವಕಾಶ ನೀಡುವಂತೆ ಸೂಚಿಸಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಲೋಕಾಯುಕ್ತ ಎಸ್ಪಿಗೆ ಈ ದೂರು ಸಂಬಂಧ ವಿವರಣೆ ನೀಡುವಂತೆ ನೋಟಿಸ್‌ ಜಾರಿ ಮಾಡಿದೆ.

ಸಿದ್ಧಾರ್ಥ ವಿಹಾರ ಟ್ರಸ್ಟ್ ಪ್ರಕರಣದ ವಿವರ:

ಸಿದ್ಧಾರ್ಥ ವಿಹಾರ ಟ್ರಸ್ಟ್ ಜಾತ್ಯತೀತ ಸಂಸ್ಥೆ. ಆದರೂ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಬಿಡಿಎಗೆ ಅರ್ಜಿ ಸಲ್ಲಿಸುವಾಗ ಪರಿಶಿಷ್ಟ ಜಾತಿ(ಎಸ್ಸಿ) ಕೋಟಾದಡಿ ಸುಳ್ಳು ಮಾಹಿತಿ ನೀಡಿ ಕಾನೂನುಬಾಹಿರವಾಗಿ ಬನಶಂಕರಿಯಲ್ಲಿ 8,125 ಚದರ ಮೀಟರ್ ವಿಸ್ತೀರ್ಣದ ಸಿಎ ನಿವೇಶನ ಪಡೆದುಕೊಂಡಿದೆ. ಮಲ್ಲಿಕಾರ್ಜುನ್​ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ ತಮ್ಮ ಪ್ರಭಾವ ಬಳಸಿ ಈ ನಿವೇಶನ ಮಂಜೂರು ಮಾಡಿಸಿದ್ದಾರೆ. ಬಳಿಕ ಬಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ಲೀಸ್ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಪಡೆದಿದ್ದಾರೆ ಎಂದು ವಿಜಯರಾಘವ ಮರಾಠೆ ಖಾಸಗಿ ದೂರಿನಲ್ಲಿ ಆರೋಪಿಸಿದ್ದರು.

ಬಳಿಕ ಬಿಟಿಎಂ ಲೇಔಟ್‌ನಲ್ಲಿ ಸುಮಾರು 130 ಕೋಟಿ ರು. ಮೌಲ್ಯದ ಪರ್ಯಾಯ ನಿವೇಶನವನ್ನು ಕೇವಲ 10 ದಿನಗಳಲ್ಲಿ ಈ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ. ಹೀಗಾಗಿ ಕಾನೂನುಬಾಹಿರವಾಗಿ ಸಿಎ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ರಾಧಾ ಬಾಯಿ, ಪುತ್ರರಾದ ರಾಹುಲ್‌ ಖರ್ಗೆ, ಪ್ರಿಯಾಂಕ್‌ ಖರ್ಗೆ, ಅಳಿಯ ರಾಧಾಕೃಷ್ಣ, ಸಚಿವ ಎಂ.ಬಿ.ಪಾಟೀಲ್‌ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Amit Shah Karnataka Visit: ರಾಜ್ಯಕ್ಕೆ ಇಂದು ಅಮಿತ್ ಶಾ; ಯಾವ ಜಿಲ್ಲೆಗೆ ಭೇಟಿ? ಏನೇನು ಕಾರ್ಯಕ್ರಮ, ಇಲ್ಲಿದೆ ಡೀಟೇಲ್ಸ್
ಸಾಮಾಜಿಕ ಪಿಂಚಣಿ 5 ತಿಂಗಳಿಂದ ಸ್ಥಗಿತ: ಅಂಗವಿಕಲರು ಸೇರಿ 18 ಲಕ್ಷ ಮಂದಿಗೆ ಸಮಸ್ಯೆ, ಹೊಸ ಅರ್ಜಿ ಸಲ್ಲಿಕೆಗೂ ತೊಂದರೆ