ಬೆಂಗಳೂರನ್ನೇ ದೆಹಲಿ ಮಾಡಿ| ಟ್ರ್ಯಾಕ್ಟರ್‌ಗಳನ್ನೇ ಟ್ಯಾಂಕ್‌ಗಳಾಗಿಸಿ ಹೋರಾಡಿ| ಬ್ಯಾರಿಕೇಡ್ ಮುರಿಯಿರಿ| ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಸಮಾವೇಶದಲ್ಲಿ ರೈತರಿಗೆ ಟಿಕಾಯತ್ ಕರೆ
ಬೆಂಗಳೂರು(ಮಾ.23): ಕೇಂದ್ರ ಕೃಷಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಟ್ರ್ಯಾಕ್ಟರ್‌ಗಳನ್ನೇ ಟ್ಯಾಂಕ್‌ಗಳನ್ನಾಗಿಸಿಕೊಂಡು ಬೆಂಗಳೂರಿನಲ್ಲಿ ಹೋರಾಟ ನಡೆಸಿ. ಬೆಂಗಳೂರನ್ನು ಇನ್ನೊಂದು ದೆಹಲಿಯನ್ನಾಗಿ ಮಾಡಿ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಹಾಗೂ ದೆಹಲಿ ರೈತ ಹೋರಾಟದ ಮುಂಚೂಣಿ ನಾಯಕ ರಾಕೇಶ್ ಸಿಂಗ್ ಟಿಕಾಯತ್ ರಾಜ್ಯದ ರೈತರಿಗೆ ಕರೆ ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆ, ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಸಂಯುಕ್ತ ಹೋರಾಟ ಸಮಿತಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಸಂಘಟಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪೊಲೀಸರ ಬ್ಯಾರಿಕೇಡ್, ಗೋಡೆಗಳನ್ನು ಲೆಕ್ಕಿಸದೆ ಮುನ್ನುಗ್ಗಿ. ಬ್ಯಾರಿಕೇಡ್‌ಗಳನ್ನು ಮುರಿಯುವುದನ್ನು ಕಲಿಯದಿದ್ದರೆ ಈ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಯಶಸ್ವಿಯಾಗುವುದಿಲ್ಲ. ರೈತರ ಜಮೀನನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಹೇಳಿದರು.
ರೈತರು ಆಹಾರ ಧಾನ್ಯಗಳನ್ನು ವಿಧಾನ ಸೌಧದಲ್ಲಿ ಮಾರಾಟ ಮಾಡಬೇಕು. ಪೊಲೀಸರು ಬಂಧಿಸಿದರೆ ಠಾಣೆಯಲ್ಲೇ ಆಹಾರ ಧಾನ್ಯ ಮಾರಾಟ ಮಾಡಿ ಹೋರಾಟ ಮುಂದುವರಿಸಿ. ಹಸಿವಿನ ವ್ಯಾಪಾರವನ್ನು ಪ್ರಾರಂಭಿಸಲು ದೊಡ್ಡ ಕಂಪನಿಗಳು ತಂತ್ರ ಹೂಡಿವೆ. ದೇಶದಲ್ಲಿ ಮೊದಲು ದಾಸ್ತಾನು ಕೇಂದ್ರಗಳನ್ನು ತೆರೆದು ಆ ಬಳಿಕ ಕಾನೂನು ರೂಪಿಸಲಾಗಿದೆ ಎಂದು ಟಿಕಾಯತ್ ತಿಳಿಸಿದರು.
ರೈತ ಮುಖಂಡ ಯುಧವೀರ್ ಸಿಂಗ್ ಮಾತನಾಡಿ, ಕೇಂದ್ರದಲ್ಲಿರುವ ಮೋದಿ ಸರ್ಕಾರ ಕೋಮುವಾದಿ ಅಜೆಂಡಾ ಬಳಸಿಕೊಂಡು ದೇಶವನ್ನು ಆಳುತ್ತಿದೆ. ಧರ್ಮ ಎಂಬುದು ನಮ್ಮ ದೇಶದ ದೌರ್ಬಲ್ಯ. ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತಿದ್ದಾರೆ. ರಾಮ ಯಾರದ್ದೋ ಒಬ್ಬರ ಆಸ್ತಿ ಅಲ್ಲ. ರಾಮ ರೈತರ, ಬಡವರ, ಶ್ರಮದ ದೇವರು ಎಂದು ಹೇಳಿದರು.
ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಆಗಮಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ಮನವಿ ಪತ್ರ ಸ್ವೀಕರಿಸಿ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರೈತ ಹೋರಾಟದ ರಾಷ್ಟ್ರೀಯ ನಾಯಕ ದರ್ಶನ್ ಪಾಲ್, ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಜಿ.ಸಿ. ಬಯ್ಯಾರೆಡ್ಡಿ, ಎಸ್.ಆರ್. ಹಿರೇಮಠ, ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಕೆ.ವಿ. ಭಟ್, ದೇವಿ, ಜಯಣ್ಣ, ನಟ ಚೇತನ್ ಮುಂತಾದವರು ಭಾಗವಹಿಸಿದರು. ಪ್ರತಿಭಟನಾ ಮೆರವಣಿಗೆಗೆ ಸುನಿತಾ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಮಾ.26ಕ್ಕೆ ಭಾರತ ಬಂದ್
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಮಾಚ್‌ರ್ 26 ರಂದು ನಾಲ್ಕು ತಿಂಗಳು ತುಂಬಲಿರುವ ಹಿನ್ನೆಲೆಯಲ್ಲಿ ಅಂದು ಸಂಯುಕ್ತ ಕಿಸಾನ್ ಮೋರ್ಚಾ ನಡೆಸಲು ಉದ್ದೇಶಿಸಿರುವ ಭಾರತ್ ಬಂದ್‌ಗೆ ಸಂಯುಕ್ತ ಹೋರಾಟ ಸಮಿತಿ ಬೆಂಬಲ ಸೂಚಿಸಿದೆ. ಪ್ರತಿಭಟನಾ ಸಮಾರಂಭದಲ್ಲಿ ಹೋರಾಟದ ಸಂಯೋಜಕ, ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಲು ಶ್ರಮಿಸುವುದಾಗಿ ಹೇಳಿದರು.