ಮೀಸಲು ಏರಿಕೆಗೆ ರಾಜ್ಯ ಒಲವು| 50%ಗಿಂತ ಹೆಚ್ಚು ಮೀಸಲಾತಿ ಬೇಕು: ಸಂಪುಟ ನಿರ್ಣಯ| ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ನಿರ್ಧಾರ| ವಿವಿಧ ಜಾತಿಗಳಿಂದ ಮೀಸಲಾತಿಗೆ ಬೇಡಿಕೆ ಬರುತ್ತಿರುವಾಗಲೇ ಸರ್ಕಾರದ ಮಹತ್ವದ ತೀರ್ಮಾನ| ಮೀಸಲು ಏರಿಕೆ ಬಗ್ಗೆ ಎಲ್ಲಾ ರಾಜ್ಯಗಳ ಅಭಿಪ್ರಾಯ ಕೇಳಿದ್ದ ಸುಪ್ರೀಂಕೋರ್ಟ್| ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ರಾಜ್ಯದ ಅಭಿಪ್ರಾಯ ಸಲ್ಲಿಕೆ ಸಾಧ್ಯತೆ
ಬೆಂಗಳೂರು(ಮಾ.23): ರಾಜ್ಯದ ವಿವಿಧ ಸಮುದಾಯಗಳು ಮೀಸಲಾತಿ ನೀಡುವಂತೆ ಬೇಡಿಕೆ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಒಟ್ಟಾರೆ ಶೇ.50ರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಸಮುದಾಯಗಳು ಮೀಸಲಾತಿ ನೀಡಬೇಕೆಂದು ಮನವಿ ಅರ್ಪಿಸುತ್ತಿರುವ ಜೊತೆಗೆ ಬದಲಾದ ಪರಿಸ್ಥಿತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಹಲವು ಸಮುದಾಯಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡಬೇಕು ಮತ್ತು ಕಾನೂನಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂಬುದರ ಕುರಿತು ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ.
ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸಬೇಕು ಎಂದು ಇಂದಿರಾ ಸಾಹನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಮೀಸಲಾತಿ ಪ್ರಮಾಣವನ್ನು ವಿಶೇಷ ಸಂದರ್ಭದಲ್ಲಿ ಪರಾಮರ್ಶೆ ಮಾಡಲು ಅವಕಾಶವೂ ಇದೆ. ಇದರ ಆಧಾರದ ಮೇಲೆ ಹಲವು ರಾಜ್ಯಗಳು ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿವೆ. ಆದರೆ ಕೆಲವು ರಾಜ್ಯಗಳು ಕೈಗೊಂಡಿರುವ ಈ ಕ್ರಮಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಮೀಸಲಾತಿಯ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ಮಾಡಬೇಕು ಎಂದು ದೇಶದಲ್ಲಿ ತೀವ್ರ ಒತ್ತಡ ಇರುವ ಕಾರಣ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಕೇಳಿದೆ. ಈ ನಿಟ್ಟಿನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಪಂಚಮಸಾಲಿ ಸಮುದಾಯ, ಪರಿಶಿಷ್ಟಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಕುರುಬ ಸಮುದಾಯ ಆಗ್ರಹಿಸುತ್ತಿದ್ದರೆ, ವಾಲ್ಮೀಕಿ ಸಮುದಾಯವು ಎಸ್‌ಟಿ ಮೀಸಲಾತಿಯ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಬೇಕು ಎಂಬ ಒತ್ತಾಯ ಮಾಡುತ್ತಿದೆ. ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸುತ್ತಿದೆ.