200 ಟನ್‌ ಮೆಕ್ಕೆಜೋಳದ ರಾಶಿ ಅಡಿ ಸಿಲುಕಿದ 10 ಕಾರ್ಮಿಕರು: ಆಮ್ಲಜನಕ ಪೂರೈಕೆ, ರಕ್ಷಣೆ ಮಾಡಲು ಸಾಹಸ!

By Kannadaprabha NewsFirst Published Dec 5, 2023, 4:00 AM IST
Highlights

ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್‌ ಏಕಾಏಕಿ ಜೋಳ ಕುಸಿದಿದ್ದರಿಂದ ಅದರ ರಾಶಿಯೊಳಗೆ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವ ದಾರುಣ ಘಟನೆ ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್‌ ಗೋದಾಮಿನಲ್ಲಿ ಸೋಮವಾರ ಸಂಜೆ ನಡೆದಿದೆ. 
 

ವಿಜಯಪುರ (ಡಿ.05): ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್‌ ಏಕಾಏಕಿ ಜೋಳ ಕುಸಿದಿದ್ದರಿಂದ ಅದರ ರಾಶಿಯೊಳಗೆ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವ ದಾರುಣ ಘಟನೆ ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್‌ ಗೋದಾಮಿನಲ್ಲಿ ಸೋಮವಾರ ಸಂಜೆ ನಡೆದಿದೆ. ಕಾರ್ಮಿಕರಿಗೆ ಆಮ್ಲಜನಕ ಪೂರೈಕೆ ಆರಂಭಿಸಲಾಗಿದೆ. ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರೆಲ್ಲರೂ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. 

ಈಗಾಗಲೇ ನಾಲ್ಕು ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಅವರೆಲ್ಲರನ್ನೂ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ರಕ್ಷಣಾ ಕಾರ್ಯ ಮುಂದುವರಿದಿದೆ. ಸೋಮವಾರ ಸಂಜೆಯ ವೇಳೆ ಸಂಸ್ಕರಣಾ ಘಟಕದಲ್ಲಿ ಮೆಕ್ಕೆ ಜೋಳದ ಸ್ಟೋರೇಜ್‌ ಯಂತ್ರ ಕುಸಿಯಿತು. ಪರಿಣಾಮ ಕೆಳಗೆ ಕಾರ್ಯ ನಿರ್ವಹಿಸುತ್ತಿದ್ದ 14ಕ್ಕೂ ಅಧಿಕ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಈ ಪೈಕಿ ನಾಲ್ವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಇನ್ನುಳಿದವರ ರಕ್ಷಣೆಗಾಗಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.

ಕಾಂಗ್ರೆಸ್‌ಗೆ ಪ್ರತ್ಯುತ್ತರ ಕೊಡೊ ಶಕ್ತಿ ಜೆಡಿಎಸ್‌-ಬಿಜೆಪಿ ಮೈತ್ರಿಗಿದೆ: ಎಚ್.ಡಿ.ದೇವೇಗೌಡ

ಘಟನೆ ನಡೆದದ್ದು ಹೇಗೆ?: ಗೋದಾಮಿನಲ್ಲಿ ನಾಲ್ಕು ಸ್ಟೋರೇಜ್‌ಗಳಿದ್ದು, ಒಂದು ಸ್ಟೋರೇಜ್‌ನಲ್ಲಿ 120 ಟನ್ ಸಂಗ್ರಹಣೆ ಮಾಡುವ ಸಾಮರ್ಥ್ಯವಿದೆ. ಒಟ್ಟು ನಾಲ್ಕು ಸ್ಟೋರೇಜ್‌ಗಳಲ್ಲಿ 480 ಟನ್ ಗೋವಿನಜೋಳ ಸಂಗ್ರಹಣೆ ಮಾಡಬಹುದಾಗಿದೆ. ಆದರೆ, ನಿಗದಿತ ಪ್ರಮಾಣಕ್ಕಿಂತ ಅಧಿಕ ಗೋವಿನಜೋಳ ಸಂಗ್ರಹಣೆ ಮಾಡಿರುವುದೇ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಸೋಮವಾರ ಸಂಜೆಯ ವೇಳೆ ಗೋದಾಮಿನಲ್ಲಿ ಮೆಕ್ಕೆಜೋಳದ ಮೂಟೆ ತುಂಬುವ ವೇಳೆ, ಭಾರ ಹೆಚ್ಚಾಗಿ ಮೆಕ್ಕೆಜೋಳದ ಸ್ಟೋರೇಜ್‌ ಯಂತ್ರ ಕುಸಿಯಿತು. 

ಈ ವೇಳೆ, ಸ್ಟೋರೇಜ್ ಕೆಳಗೆ 25 ಕಾರ್ಮಿಕರು ಗೋವಿನಜೋಳವನ್ನು ಚೀಲಕ್ಕೆ ತುಂಬುತ್ತಿದ್ದರು. ಯೂನಿಟ್‌ ಕುಸಿಯುತ್ತಿರುವುದನ್ನು ಕಂಡ ಕೆಲ ಕಾರ್ಮಿಕರು ಸ್ಥಳದಿಂದ ಓಡಿ ಹೋಗಿ ತಮ್ಮನ್ನು ತಾವು ರಕ್ಷಿಸಿಕೊಂಡರೆ ಇನ್ನುಳಿದ 14ಕ್ಕೂ ಅಧಿಕ ಜನರು ಒಮ್ಮಿಂದೊಮ್ಮೆಲೇ ಕುಸಿದುಬಿದ್ದ ರಾಶಿಗಟ್ಟಲೇ ಗೋವಿನ ಜೋಳದಡಿ ಸಿಲುಕಿದರು. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್, ಮೆಕ್ಕೆಜೋಳದ ಅಡಿ ಸಿಲುಕಿಕೊಂಡಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 10 ಜನರು ಒಳಗೆ ಸಿಲುಕಿಕೊಂಡಿರುವ ಕುರಿತು ಮಾಹಿತಿ ಇದೆ. 

ಗೋದಾಮಿನ ಹಿಂಭಾಗದಿಂದ ಈಗಾಗಲೇ ಕಾರ್ಮಿಕರ ಜೊತೆ ಮಾತನಾಡಿದ್ದು, ಉಸಿರಾಟದ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಆದರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಆಮ್ಲಜನಕ ಪೂರೈಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಕಾರ್ಮಿಕರ ರಕ್ಷಣೆಗಾಗಿ ಎಸ್‌ಡಿಆರ್‌ಎಫ್‌ ತಂಡಗಳ ಸಂಪರ್ಕ ಮಾಡಲಾಗಿದ್ದು, ಕಲಬುರಗಿ ಹಾಗೂ ಬೆಳಗಾವಿಯಿಂದ ತಂಡದವರು ಆಗಮಿಸಲಿದ್ದಾರೆ. ಹೆಚ್ಚಿನ ಅವಶ್ಯಕತೆ ಬಿದ್ದರೆ ಹೈದರಾಬಾದ್‌ನಿಂದ ಕೂಡ ರಕ್ಷಣಾ ತಂಡವನ್ನು ಕರೆಯಿಸಿಕೊಳ್ಳಲಾಗುತ್ತದೆ ಎಂದರು. ರಾಜಗುರು ಇಂಡಸ್ಟ್ರೀಸ್‌ನಲ್ಲಿ 150ಕ್ಕೂ ಅಧಿಕ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸಿನ ಸುಳ್ಳು ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ: ಪ್ರಲ್ಹಾದ್ ಜೋಶಿ

ಭರದಿಂದ ಸಾಗಿದ ರಕ್ಷಣಾ ಕಾರ್ಯ: ಈ ಮಧ್ಯೆ, ಕಾರ್ಮಿಕರನ್ನು ರಕ್ಷಿಸಲು 4 ಜೆಸಿಬಿ ಹಾಗೂ 4 ಕ್ರೇನ್‌ಗಳಿಂದ ಸಂಜೆ 7ರಿಂದ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ, ಹೋಮ್‌ ಗಾರ್ಡ್ಸ್‌ ಸೇರಿದಂತೆ 100ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ. ಸ್ಥಳದಲ್ಲಿ 10 ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

click me!