
ವರದಿ - ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.3) : ಮಹಾರಾಷ್ಟ್ರದ ಗಡಿ ಭಾಗದ 42ಕ್ಕೂ ಅಧಿಕ ಹಳ್ಳಿಗಳಲ್ಲಿದ್ದ ಕನ್ನಡ ಭಾಷಿಕರ ಪ್ರದೇಶಗಳ ಅಭಿವೃದ್ಧಿ ಮಾಡುವಲ್ಲಿ ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿತ್ತು. ಆದರೆ, ಇತ್ತೀಚೆಗೆ ತಾನೇ ಸೃಷ್ಟಿಸಿದ ಗಡಿ ವಿವಾದದಿಂದ ಮಹಾರಾಷ್ಟ್ರವನ್ನೇ ತೊರೆಯುವ ನಿರ್ಧಾರ ಮಾಡಿವೆ. ಈ ಹಿನ್ನೆಲೆಯಲ್ಲಿ ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ, ಈಗ ತುರ್ತಾಗಿ ಗಡಿ ಭಾಗದ ಕನ್ನಡ ಭಾಷಿಕರ ಗ್ರಾಮಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳನ್ನು ನಿಯೋಜನೆ ಮಾಡಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಿನ ಗಡಿ ವಿವಾದ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳ ಬಹುತೇಕ ಕನ್ನಡ ಭಾಷಿಕ ಹಳ್ಳಿಗಳು ತಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಪ್ರತಿಭಟನೆಯ ಬಿಸಿ ಮಹಾರಾಷ್ಟ್ರ ರಾಜ್ಯಕ್ಕೆ ತಟ್ಟುತ್ತಿರುವಂತೆಯೇ ಎಚ್ಚೆತ್ತುಕೊಂಡಿರುವ ಸಾಂಗ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಗಡಿ ಭಾಗದ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಡಿ ಭಾಗವಾದ ತಿಕ್ಕುಂಡಿ ಗ್ರಾಮಕ್ಕೆ ಸಾಂಗ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ಈ ಮೂಲಕ ಕನ್ನಡ ಭಾಷಿಕರ ಗ್ರಾಮಗಳ ಜನರ ಮೊದಲ ಗೆಲವು ಸಂಭವಿಸಿದೆ.
ಮಹಾರಾಷ್ಟ್ರ ನೀರು ಕೊಡ್ತಿಲ್ಲ ಎಂದ ಜತ್‌ಗೆ ಕರ್ನಾಟಕದಿಂದ ಜಲ..!
ಉಡಗಿ ಗ್ರಾಮಸ್ಥರಿಂದ ಕರ್ನಾಟಕ ಸೇರಲು ಹೋರಾಟ: ಗಡಿ ವಿವಾದ ಆರಂಭವಾದಂದಿನಿಂದ ಮಹಾರಾಷ್ಟ್ರ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಗಡಿ ಭಾಗದ ಹಳ್ಳಿಗಳಲ್ಲಿ ರಾಜ್ಯದ ಸುತ್ತಲಿನ ಅಲ್ಪ ಭಾಷಿಕ ಪ್ರದೇಶಗಳು ಮಹಾರಾಷ್ಟ್ರ ಬಿಡುವ ನಿರ್ಣಯ ತೆಗೆದುಕೊಳ್ಳುತ್ತಿವೆ. ಜತ್ತದಿಂದ ಪ್ರಾರಂಭವಾದ ಈ ಚಳುವಳಿ ಅಕ್ಕಲಕೋಟೆ, ಸೊಲ್ಲಾಪುರದಿಂದ ಹಿಡಿದು ನಾಸಿಕದಲ್ಲಿಯ ಗುಜರಾತಿ ಭಾಷಿಕರು, ನಾಂದೇಢ ಜಿಲ್ಲೆಯ ತೆಲಗು ಭಾಷಿಕರು ನಮ್ಮ ಪ್ರದೇಶಗಳು ನೆರೆಯ ರಾಜ್ಯಗಳಿಗೆ ಜೋಡಿಸಿ ಎಂಬ ಕೂಗು ಹಾಕುತ್ತಿವೆ. ಇನ್ನು ಕರ್ನಾಟಕ ಗಡಿ ಭಾಗದ ಜನರಿಂದ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುವ ಆಂದೋಲನವೇ ಆರಂಭವಾಗಿದೆ. ಹಲವು ಹಳ್ಳಿಗಳಲ್ಲಿ ಈ ಕುರಿತು ಠರಾವು ಪಾಸು ಮಾಡಲಾಗುತ್ತಿದೆ. ಈಗ ಮತ್ತೊಂದು ಗಡಿ ಭಾಗದ ಹಳ್ಳಿ ಉಡಗಿ ಗ್ರಾಮದ ಜನರು ಕೂಡ ಮಹಾರಾಷ್ಟ್ರ ಸರ್ಕಾದರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ತಮ್ಮನ್ನೂ ಕರ್ನಾಟಕಕ್ಕೆ ಸೇರಿಸಬೇಕು ಎಂದು ನಿರ್ಧಾರ ಕೈಗೊಳ್ಳುತ್ತಿದ್ದಾರೆ.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಡಿ: ಸಿಎಂ ಬೊಮ್ಮಾಯಿ
ಸಾಂಗ್ಲಿ ಜಿಲ್ಲಾಧಿಕಾರಿಗೆ ಹಲವು ಬೇಡಿಕೆಯಿಟ್ಟ ತಿಕ್ಕುಂಡಿ ಗ್ರಾಮಸ್ಥರು:
1. ವ್ಯವಸಾಯ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನ ಶಾಶ್ವತವಾಗಿ ಬಗೆಹರಿಸಬೇಕು.
2.ಯತ್ನಾಳ ಸೀಮೆಯಿಂದ ಗುಡ್ಡಾಪುರದವರೆಗಿನ ರಸ್ತೆಯನ್ನು ನಾಲ್ಕು ಪಥಗಳ ಹೆದ್ದಾರಿಯನ್ನಾಗಿ ಪರಿವರ್ತಿಸಬೇಕು.
3. ಶಾಲೆ - ಪಾಸ್ ವ್ಯವಸ್ಥೆಯನ್ನು ಮಾಡಬೇಕು.
4.ಬಸ್ ದರ ಕಡಿಮೆ ಮಾಡಬೇಕು.
5. ಕರ್ನಾಟಕ ಸರ್ಕಾರದಿಂದ ಕೃಷಿಕರಿಗೆ ಸಿಗುವ 50 ಸಾವಿರ ರೂ. ಅನುದಾನ ನಮಗೂ ಸಿಗುವಂತೆ ಮಾಡಬೇಕು.
6. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಖಾಯಂ ಎಂಬಿಬಿಎಸ್ ವೈದ್ಯರನ್ನ ನಿಯೋಜನೆ ಮಾಡಬೇಕು.
7. ಕೃಷಿಗೆ 10 ಹೆಚ್.ಪಿ. ವರೆಗೆ ಉಚಿತವಾಗಿ ವಿದ್ಯುತ್ ನೀಡಬೇಕು.
ಕಲಬುರಗಿ: ಮಹಾರಾಷ್ಟ್ರ ಗಡಿಯಲ್ಲಿ ಕರ್ನಾಟಕಕ್ಕೆ ಸೇರುವ ಕೂಗು ನಿಲ್ತಿಲ್ಲ..!
ಕರ್ನಾಟಕ ಸಿಎಂ ನಮ್ಮ ಬೆಂಬಲಕ್ಕೆ ಬರಬೇಕು:
ಕರ್ನಾಟಕ ಸರ್ಕಾರ ಆದಷ್ಟು ಬೇಗ ಬಂದು ಗಡಿನಾಡಿನ ಕನ್ನಡಿಗರ ಬೆಂಬಲಕ್ಕೆ ನಿಲ್ಲಬೇಕು ಎಂದು ಮಹಾರಾಷ್ಟ್ರ ಕನ್ನಡಿಗರು ಮನವಿ ಮಾಡುತ್ತಿದ್ದಾರೆ. ಸ್ವತಂತ್ರ ಸಿಕ್ಕು ಇಲ್ಲಿವರೆಗೆ ಗಡಿಭಾಗದ ಹಲವು ಗ್ರಾಮಗಳಿಗೆ ರಸ್ತೆಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನಾಲ್ಕು ದಿನಕ್ಕೊಮ್ಮೆ ಕುಡಿಯಲು ನೀರು ಬರುತ್ತದೆ. ಮಹಾರಾಷ್ಟ್ರ ಸರ್ಕಾರ ನಮಗೆ ಮಲತಾಯಿ ಧೋರಣೆ ತೋರುತ್ತಿದೆ. ಇಲ್ಲಿ ಸರ್ಕಾರಿ ಆಸ್ಪತ್ರೆಯೂ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಏಕೆಂದರೆ ಇದು ಇಂದಲ್ಲ ನಾಳೆ ಕರ್ನಾಟಕಕ್ಕೆ ಸೇರುತ್ತದೆ ಎಂದು ಇಲ್ಲಿಯ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ