
ವರನಟ ಡಾ.ರಾಜ್ ಕುಮಾರ್‌ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ 9 ಮಂದಿಯನ್ನು ಆರೋಪ ಮುಕ್ತಗೊಳಿಸಿದೆ. ಪ್ರಕರಣ ನಡೆದು ಬರೋಬ್ಬರಿ 25 ವರ್ಷಗಳ ಬಳಿಕ ಈಗ ಪ್ರಕರಣದಲ್ಲಿ ಆರೋಪಿಗಳಿಗೆ ಮುಕ್ತಿ ಸಿಕ್ಕಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಬುಧವಾರ ಮದ್ರಾಸ್ ಹೈಕೋರ್ಟ್ ಎತ್ತಿಹಿಡಿಯಿತು. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಚೆನ್ನೈ ಪೊಲೀಸರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಪಿ.ವೇಲ್ಮುರುಗನ್ ಮತ್ತು ನ್ಯಾ.ಎಂ.ಜ್ಯೋತಿರಾಮನ್ ಅವರ ಪೀಠ ಈ ತೀರ್ಪು ಪ್ರಕಟಿಸಿದೆ.
ಸೆಪ್ಟೆಂಬರ್ 25, 2018ರಂದು ಪ್ರಕರಣದ ತೀರ್ಪು ಪ್ರಕಟವಾಗಿದ್ದು ವೀರಪ್ಪನ್ ಸಹಚರರಾದ ಎಲ್ಲಾ 9 ಮಂದಿಯನ್ನು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ನ್ಯಾಯಾಧೀಶ ಮಣಿ ಅವರು ತೀರ್ಪು ನೀಡಿದ್ದರು. ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಖುಲಾಸೆಗೊಂಡಿದ್ದರು. ಆರೋಪಿಗಳು ಮತ್ತು ವೀರಪ್ಪನ್ ನಡುವಿನ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಲು ಪೊಲೀಸ್ ಇಲಾಖೆ ಅಗತ್ಯ ಪುರಾವೆಗಳನ್ನು ನೀಡಿಲ್ಲ. ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ಅವರನ್ನು ವಿಚಾರಣೆ ನಡೆಸಿಲ್ಲ. ಮಧ್ಯಸ್ಥಿಕೆದಾರರಾಗಿ ಕಾಡಿಗೆ ಹೋದವರನ್ನು ಪೊಲೀಸರು ಪ್ರಶ್ನಿಸಿಲ್ಲ. ಆದ್ದರಿಂದ ಸೂಕ್ತ ಸಾಕ್ಷಿ ಪ್ರಸ್ತುತಪಡಿಸದ ಕಾರಣ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲ 9 ಜನರನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಈ ತೀರ್ಪುನ್ನು ಪೊಲೀಸರು ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ಇಂದು ಪ್ರಕರಣದ ಆರೋಪಿಗಳನ್ನು ಮತ್ತೆ ಖುಲಾಸೆಗೊಳಿಸಲಾಗಿದ್ದು, ಪೊಲೀಸರಿಗೆ ಹಿನ್ನೆಡೆಯಾಗಿದೆ.
2000ರ ಜುಲೈ 30ರಂದು ಕರ್ನಾಟಕದ ಗಡಿ ಭಾಗ ಈರೋಡ್ ಜಿಲ್ಲೆಯ ತಲವಾಡಿ ಬಳಿಯ ದೊಡ್ಡ ಗಾಜನೂರು (ತೊಟ್ಟಕಾಜನೂರು) ತೋಟದ ಮನೆಯಲ್ಲಿ ನಟ ರಾಜ್‌ಕುಮಾರ್ ತಂಗಿದ್ದರು. ಅಲ್ಲಿಂದ ದಂತಚೋರ ವೀರಪ್ಪನ್ ಮತ್ತು ಆತನ ಸಹಚರರು ರಾಜ್ ಕುಮಾರ್ ಅವರನ್ನು ಅಪಹರಿಸಿದ್ದರು. ಈ ಪ್ರಕರಣವು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ರಾಜ್ ಅವರ ಸಂಬಂಧಿಕರಾದ ಎಸ್ ಎ ಗೋವಿಂದರಾಜ್, ನಾಗೇಶ್ ಮತ್ತು ಸಹಾಯಕ ನಿರ್ದೇಶಕ ನಾಗಪ್ಪರನ್ನೂ ಕಿಡ್ನಾಪ್ ಮಾಡಲಾಗಿತ್ತು. ಸೆಪ್ಟೆಂಬರ್ 28ರಂದು ನಾಗಪ್ಪ ಪಾರಾಗಿದ್ದರು. ಉಳಿದವರನ್ನು ವೀರಪ್ಪನ್ 108 ದಿನ ಇರಿಸಿಕೊಂಡು ಬಳಿಕ ಬಿಡುಗಡೆ ಮಾಡಿದ್ದ. ರಾಜ್ ಬಿಡುಗಡೆಗಾಗಿ ಕೋಟ್ಯಂತರ ಹಣವನ್ನು ವೀರಪ್ಪನ್‌ಗೆ ನೀಡಲಾಗಿದೆ ಎನ್ನುವ ಆರೋಪಗಳಿದ್ದು, ಈ ಸಂಬಂಧ ಮುತ್ತುಲಕ್ಷ್ಮಿ ಮತ್ತು ವೀರಪ್ಪನ್‌ನ 25 ಬಂಧುಗಳ ವಿರುದ್ಧ 2001ರ ಸೆ.11ರಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದರು.
ಈ ಅಪಹರಣ ಪ್ರಕರಣದಲ್ಲಿ ಈರೋಡ್ ಜಿಲ್ಲೆಯ ತಲವಾಡಿ ಪೊಲೀಸರು ವೀರಪ್ಪನ್ ಮತ್ತು ಸಹಚರರಾದ ಸೇತುಕುಳಿ ಗೋವಿಂದನ್, ಚಂದ್ರಗೌಡ, ಮಲ್ಲು, ರಮೇಶ್, ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ 10 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನಂತರ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರಕರಣದ ವಿಚಾರಣೆಯು ಗೋಪಿಚೆಟ್ಟಿಪಾಳ್ಯಂ 3ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿತ್ತು.
2004ರಲ್ಲಿ ಆರೋಪಪಟ್ಟಿ ಸಲ್ಲಿಕೆಗೂ ಮುನ್ನವೇ ವೀರಪ್ಪನ್ ಮತ್ತು ಆತನ ಇಬ್ಬರು ಸಹಚರರಾದ ಸೇತುಕುಳಿ ಗೋವಿಂದನ್ ಮತ್ತು ಚಂದ್ರಗೌಡನನ್ನು ವಿಶೇಷ ಪೊಲೀಸ್ ಪಡೆಯು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿತು. ಪ್ರಕರಣದಲ್ಲಿ ಭಾಗಿಯಾಗಿದ್ದ ಮಲ್ಲು ಎಂಬ ಆರೋಪಿ ತನಿಖೆಯ ಸಮಯದಲ್ಲಿ ಸಾವನ್ನಪ್ಪಿದ್ದ. ರಮೇಶ್ ಎಂಬಾತ ತಲೆಮರೆಸಿಕೊಂಡಿದ್ದ. ಉಳಿದ 9 ಮಂದಿ ಆರೋಪಿಗಳ ಕಳೆದ 18 ವರ್ಷಗಳಿಂದ ಗೋಪಿಚೆಟ್ಟಿಪಾಳ್ಯಂ ನ್ಯಾಯಾಲಯದಲ್ಲಿ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಅಕ್ಟೋಬರ್ 18, 2004ರಲ್ಲಿ ತಮಿಳುನಾಡಿನ ವಿಶೇಷ ಕಾರ್ಯಪಡೆ ನಿರ್ವಹಿಸಿದ 'ಆಪರೇಷನ್ ಕಕೂನ್' ಹೆಸರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವೀರಪ್ಪನ್ ಮತ್ತವನ ಸಹಚರರಾದ ಸೇತುಕುಳಿ ಗೋವಿಂದನ್ ಮತ್ತು ಚಂದ್ರೇಗೌಡ ಮೃತಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ