ಮದ್ದೂರಿನಲ್ಲಿ ಇಂದು ಬೃಹತ್ ಸಾಮೂಹಿಕ ಗಣಪತಿ ವಿಸರ್ಜನೆ, 20,000ಕ್ಕೂ ಅಧಿಕ ಜನ ನಿರೀಕ್ಷೆ, ಪೊಲೀಸರು ಹೈ ಅಲರ್ಟ್!

Published : Sep 10, 2025, 07:54 AM IST
maddur ganeshotsav

ಸಾರಾಂಶ

ಮದ್ದೂರಿನಲ್ಲಿ ಇಂದು ಬೃಹತ್ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಲಿದ್ದು, 28 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುವುದು. ಬಿಜೆಪಿ ನಾಯಕರು ಭಾಗವಹಿಸಲಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಮದ್ದೂರು (ಸೆ.10): ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇಂದು ಸಾಮೂಹಿಕ ಗಣಪತಿ ವಿಸರ್ಜನೆಗೆ ಬೃಹತ್ ಮೆರವಣಿಗೆ ಆಯೋಜನೆಗೊಂಡಿದೆ. ಹಿಂದೂ ಪರ ಸಂಘಟನೆಗಳು, ಬಿಜೆಪಿ, ಮತ್ತು ಜೆಡಿಎಸ್ ನೇತೃತ್ವದಲ್ಲಿ ನಡೆಯಲಿರುವ ಈ ಮೆರವಣಿಗೆಯಲ್ಲಿ 28 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು. ಬೆಳಗ್ಗೆ 10:30ಕ್ಕೆ ಕಾಶಿ ವಿಶ್ವನಾಥ ದೇವಸ್ಥಾನದಿಂದ ಪ್ರಾರಂಭವಾಗುವ ಈ ಮೆರವಣಿಗೆ, ಹೊಳೆಬೀದಿ, ಪೇಟೆಬೀದಿ, ಟಿಬಿ ಸರ್ಕಲ್, ಹಳೆ ಬೆಂಗಳೂರು-ಮೈಸೂರು ರಸ್ತೆಯ ಮೂಲಕ ಸಾಗಿ ಕೊಲ್ಲಿ ಸರ್ಕಲ್‌ನಲ್ಲಿ ಕೊನೆಗೊಳ್ಳಲಿದೆ. ಅಂತಿಮವಾಗಿ, ಹೊಳೆ ಆಂಜನೇಯ ದೇವಾಲಯದ ಬಳಿಯ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸುಮಾರು 20,000ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಇಂದು ಬಿಜೆಪಿ ನಾಯಕರ ಭೇಟಿ:

ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್‌ ಅಶೋಕ್, ಸಿಟಿ ರವಿ, ಪ್ರತಾಪ್ ಸಿಂಹ, ಛಲವಾದಿ ನಾರಾಯಣಸ್ವಾಮಿ, ಸುಮಲತಾ ಅಂಬರೀಶ್ ಸೇರಿದಂತೆ ಹಲವು ಬಿಜೆಪಿ ನಾಯಕರು ಮದ್ದೂರಿಗೆ ಭೇಟಿ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸುವ ಮುನ್ನ, ಕಲ್ಲೆಸೆತ ಘಟನೆಯಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿ, ಸ್ಥಳೀಯರಿಗೆ ಧೈರ್ಯ ತುಂಬಲಿದ್ದಾರೆ. ಜೊತೆಗೆ, ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡವರ ಮನೆಗಳಿಗೂ ಭೇಟಿ ನೀಡುವ ಕಾರ್ಯಕ್ರಮವಿದೆ. ಇದೇ ವೇಳೆ ಬಿ.ವೈ.ವಿಜಯೇಂದ್ರ ಅವರು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಪೊಲೀಸರಿಂದ ಬಿಗಿ ಭದ್ರತೆ, ಹೈ ಅಲರ್ಟ್:

ಮದ್ದೂರಿನಲ್ಲಿ ಯಾವುದೇ ಅಹಿತಕರ ಘಟನೆ ತಡೆಗಟ್ಟಲು ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ 5 ಎಸ್ಪಿಗಳು, 4 ಎಎಸ್ಪಿಗಳು ಸೇರಿದಂತೆ 2,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೆಎಸ್‌ಆರ್‌ಪಿ, ಡಿಎಆರ್, ರ್ಯಾಪಿಡ್ ಆಕ್ಷನ್ ಫೋರ್ಸ್ ತುಕಡಿಗಳು ಸೇರಿವೆ. ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ, ಮತ್ತು ಹಾಸನ ಜಿಲ್ಲೆಗಳಿಂದ ಪೊಲೀಸರನ್ನು ಕರೆತರಲಾಗಿದೆ. ಸೋಮವಾರದ ಘಟನೆ ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.

ಮೆರವಣಿಗೆ ಮಾರ್ಗಸೂಚಿಸಿದ ಪೊಲೀಸರು:

ಪೊಲೀಸ್ ಇಲಾಖೆ ಸೂಚಿಸಿರುವ ಮಾರ್ಗದಂತೆ, ಮೆರವಣಿಗೆ ಐಬಿ ವೃತ್ತದಿಂದ ಆರಂಭವಾಗಿ, ಪೇಟೆ ಬೀದಿ ಮೂಲಕ ಕೊಲ್ಲಿ ಸರ್ಕಲ್ ತಲುಪಲಿದೆ. 3 ಕಿಲೋಮೀಟರ್ ಉದ್ದದ ಈ ಮೆರವಣಿಗೆಯ ನಡುವೆ, ರಾಮ ಮಂದಿರ ಪಾರ್ಕ್‌ ಬಳಿ ವೇದಿಕೆಯಲ್ಲಿ ನಾಯಕರು ಭಾಷಣ ಮಾಡಲಿದ್ದಾರೆ. ಆದರೆ, ಅಂತಿಮ ಹಂತದಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡುವ ಸಾಧ್ಯತೆಯಿದೆ. ಇಂದು ಮದ್ದೂರು, ಮಳವಳ್ಳಿ, ಮತ್ತು ಮಂಡ್ಯ ತಾಲೂಕುಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಗಮನಾರ್ಹ ಅಂಶ

ಮದ್ದೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪಿತವಾಗಿರುವ ಎಲ್ಲಾ ಗಣೇಶ ಮೂರ್ತಿಗಳನ್ನು ಮದ್ದೂರಿಗೆ ತರಲು ಬಿಜೆಪಿ ನಾಯಕರು ಕರೆ ನೀಡಿದ್ದಾರೆ. ಈ ಬೃಹತ್ ಕಾರ್ಯಕ್ರಮವು ಶಾಂತಿಯುತವಾಗಿ ನಡೆಯಲು ಎಲ್ಲಾ ಸಿದ್ಧತೆಗಳು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌