ರಾಗಿ ರೈತರಿಗೆ ವರ್ತಕರು, ಅಧಿಕಾರಿಗಳ ಧೋಖಾ?: ಕೃಷಿ ಇಲಾಖೆಗೆ ರೈತರ ದೂರು

By Govindaraj SFirst Published Jan 5, 2023, 5:01 AM IST
Highlights

ಬಡ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ನೆರವಾಗಬೇಕಿದ್ದ ಅಧಿಕಾರಿಗಳೇ ವರ್ತಕರೊಂದಿಗೆ ಸೇರಿ ಪಹಣಿ ಗೋಲ್ಮಾಲ್‌ ನಡೆಸಿ ಅಮಾಯಕ ರೈತರನ್ನು ವಂಚಿಸುತ್ತಿದ್ದಾರೆ ಎಂದು ರಾಜ್ಯದ ಸಣ್ಣ ರೈತರು ಆರೋಪಿಸಿದ್ದು, ಈ ಬಗ್ಗೆ ಕೃಷಿ ಇಲಾಖೆಯಲ್ಲಿ ದೂರನ್ನು ದಾಖಲಿಸಿದ್ದಾರೆ. 

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜ.05): ಬಡ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ನೆರವಾಗಬೇಕಿದ್ದ ಅಧಿಕಾರಿಗಳೇ ವರ್ತಕರೊಂದಿಗೆ ಸೇರಿ ಪಹಣಿ ಗೋಲ್ಮಾಲ್‌ ನಡೆಸಿ ಅಮಾಯಕ ರೈತರನ್ನು ವಂಚಿಸುತ್ತಿದ್ದಾರೆ ಎಂದು ರಾಜ್ಯದ ಸಣ್ಣ ರೈತರು ಆರೋಪಿಸಿದ್ದು, ಈ ಬಗ್ಗೆ ಕೃಷಿ ಇಲಾಖೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹಳ್ಳಿಯೊಂದರ ರೈತ ಮಹಿಳೆಯೊಬ್ಬರು ತಮ್ಮ ಜಮೀನಿನ ಸರ್ವೇ ಸಂಖ್ಯೆ 41ರಲ್ಲಿ ಬೆಳೆದಿದ್ದ ರಾಗಿಯನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಎಫ್‌ಐಡಿ (ಫ್ರೂಟ್ಸ್‌ ಐಡಿ) ಪಡೆಯಲು ಹೋಗಿದ್ದಾರೆ. 

ಆದರೆ ಅವರ ಜಮೀನಿನ ಪಹಣಿ ಬೇರೊಬ್ಬರ ಎಫ್‌ಐಡಿಗೆ ಲಿಂಕ್‌ ಆಗಿರುವುದು ಬೆಳಕಿಗೆ ಬಂದು ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. ರಾಜ್ಯದ ಹಲವೆಡೆ ಈ ರೀತಿಯ ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಮುಗ್ಧರು, ವಿಧವೆಯರನ್ನೇ ಗುರಿ ಮಾಡಿಕೊಂಡು ನಡೆಸಲಾಗುತ್ತಿರುವ ಈ ಭ್ರಷ್ಟಾಚಾರದಲ್ಲಿ ವರ್ತಕರ ಜೊತೆ ಸೈಬರ್‌ ಸೆಂಟರ್‌ನವರು, ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ) ಸಿಬ್ಬಂದಿ, ಕೃಷಿ, ತೋಟಗಾರಿಕೆ, ಕಂದಾಯ ಮತ್ತಿತರ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷವೂ ಈ ದಂಧೆ ಎಗ್ಗಿಲ್ಲದೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ

ರಾಗಿ ಮಾರಾಟ ಮಾಡಲು ಎಫ್‌ಐಡಿ ತೆಗೆದುಕೊಳ್ಳಲು ಹೋದರೆ, ‘ನಿಮ್ಮ ಪಹಣಿ ಬೇರೆಯವರ ಎಫ್‌ಐಡಿಗೆ ಲಿಂಕ್‌ ಆಗಿದೆ. ನಿಮ್ಮ ರಾಗಿ ಮಾರಾಟಕ್ಕೆ ಅವಕಾಶವಿಲ್ಲ’ ಎಂದು ಹೇಳಿ ಹಿಂದಕ್ಕೆ ಕಳುಹಿಸಲಾಗುತ್ತಿದೆ. ಪರಿಣಾಮ ಬಡ ರೈತರು ತಾವು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಲಾಗದೆ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ರೈತರ ಪಹಣಿಗಳಿಗೆ ‘ಫ್ರೂಟ್ಸ್‌’ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ನಕಲಿ ಎಫ್‌ಐಡಿ ಸೃಷ್ಟಿಸಿ ಹಣ ದೋಚಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಏನಿದು ಹಗರಣ?: ಖರೀದಿ ಕೇಂದ್ರಗಳಲ್ಲಿ ದೊಡ್ಡ ರೈತರಿಗೆ ರಾಗಿ ಮಾರಲು ಅವಕಾಶವಿಲ್ಲ. ಸಣ್ಣ ರೈತರಿಗೆ ಮಾತ್ರ 20 ಕ್ವಿಂಟಲ್‌ವರೆಗೂ ರಾಗಿ ಮಾರಾಟದ ಅವಕಾಶವಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ರಾಗಿಗೆ 2000 ರು. ದರ ಇದ್ದರೆ, ಖರೀದಿ ಕೇಂದ್ರಗಳಲ್ಲಿ 3,578 ರು. ನೀಡಲಾಗುತ್ತದೆ. ಈ ಹಣ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಸಂದಾಯವಾಗುತ್ತದೆ. ಹೀಗಾಗಿ ದೊಡ್ಡ ರೈತರಿಂದ ರಾಗಿ ಖರೀದಿಸುವ ವ್ಯಾಪಾರಿಗಳು, ಅದನ್ನು ಸಣ್ಣ ರೈತರ ಹೆಸರಿನಲ್ಲಿ ಮಾರಾಟ ಮಾಡಲು ನಕಲಿ ದಾಖಲೆ ಸೃಷ್ಟಿಸುತ್ತಿದ್ದು, ಇದರಲ್ಲಿ ಅಧಿಕಾರಿ ವರ್ಗವೂ ಪಾಲ್ಗೊಂಡಿದೆ. ತನ್ಮೂಲಕ ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಭಾರೀ ಹಣ ಸಂಪಾದಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ವಂಚನೆ ಹೇಗೆ?: ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಬೇಕಾದರೆ ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ಎಫ್‌ಐಡಿ ಸೃಷ್ಟಿಸುವುದು ಕಡ್ಡಾಯ. ಎಫ್‌ಐಡಿ ಸೃಷ್ಟಿಗೆ ಜಮೀನಿನ ಪಹಣಿ, ಆಧಾರ್‌, ಬ್ಯಾಂಕ್‌ ಪಾಸ್‌ ಬುಕ್‌ ಮಾಹಿತಿ ಅಗತ್ಯವಾಗಿದೆ. ಈ ದಾಖಲೆಗಳನ್ನೇ ಬಳಸಿಕೊಂಡು ಸೈಬರ್‌ ಸೆಂಟರ್‌, ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿ ಅಮಾಯಕ ರೈತರ ಹೆಸರಲ್ಲಿ ಎಫ್‌ಐಡಿ ಸೃಷ್ಟಿಸುತ್ತಿದ್ದಾರೆ. ಬಳಿಕ ಎಫ್‌ಐಡಿಗೆ ರೈತರ ಬದಲು ವ್ಯಾಪಾರಿಗಳ ಬ್ಯಾಂಕ್‌ ಖಾತೆ ನಂಬರ್‌ ನಮೂದಿಸಿ ರಾಗಿ ಮಾರಿದ ಹಣ ಅವರ ಖಾತೆಗೆ ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಣ್ಣ ರೈತರು ತಾವು ಬೆಳೆದ ರಾಗಿ ಮಾರಾಟಕ್ಕೆ ಹೋಗುವ ವೇಳೆಗೆ ಅವರ ಹೆಸರಿನಲ್ಲಿ ರಾಗಿ ಖರೀದಿಸಿದ ದಾಖಲೆಗಳು ಸೃಷ್ಟಿಯಾಗಿ ಅವರು ವಂಚನೆಗೆ ಒಳಗಾಗುತ್ತಿದ್ದಾರೆ.

ಅಧಿಕಾರಿಗಳ ಸಾಥ್‌?: ಎಫ್‌ಐಡಿ ಸೃಷ್ಟಿವೇಳೆ ಸಣ್ಣ ವ್ಯತ್ಯಾಸವಿದ್ದರೂ ಅಧಿಕಾರಿ ಲಾಗಿನ್‌ಗೆ ಬಂದಾಗ ಒಪ್ಪುವುದಿಲ್ಲ. ಸೈಬರ್‌ ಸೆಂಟರ್‌, ಸಾಮಾನ್ಯ ಸೇವಾ ಕೇಂದ್ರ ಸಿಬ್ಬಂದಿ ಸೃಷ್ಟಿಸಿದ ಎಫ್‌ಐಡಿಗಳಿಗೆ ಕೃಷಿ, ತೋಟಗಾರಿಕೆ, ಕಂದಾಯ ಮತ್ತಿತರ ಇಲಾಖೆಯ ಕೆಳ ಹಂತದ ಸಿಬ್ಬಂದಿ ಒಪ್ಪಿಗೆ ನೀಡಿದರೆ ಮಾತ್ರ ಅದು ಮಾನ್ಯವಾಗಲಿದೆ. ಹೀಗಿರುವಾಗ ಯಾರದೋ ಹೆಸರಿನ ಪಹಣಿಗೆ ಇನ್ಯಾರದ್ದೋ ದಾಖಲೆ ನೋಂದಾಯಿಸಲು ಹೇಗೆ ಅವಕಾಶ ನೀಡಲಾಗಿದೆ? ಅಧಿಕಾರಿಗಳ ನೆರವು ಇಲ್ಲದಿದ್ದರೆ ಈ ವಂಚನೆ ಸಾಧ್ಯವಿಲ್ಲ ಎಂಬ ಮಾತು ಕೇಳಿಬಂದಿದೆ.

ಟೋಕನ್‌ ಪಡೆಯದಿದ್ದರೆ ಸಂಕಷ್ಟ: ಖರೀದಿ ಕೇಂದ್ರಕ್ಕೆ ರಾಗಿ ಮಾರಾಟಕ್ಕೂ ಮುಂಚೆ ರೈತರಿಗೆ ಮೂರ್ನಾಲ್ಕು ವಾರ ಮೊದಲೇ ಟೋಕನ್‌ ಕೊಡಲಾಗುತ್ತದೆ. ಟೋಕನ್‌ ನೀಡುವ ಪ್ರಕ್ರಿಯೆ ನಿಲ್ಲಿಸಿದ ಕೆಲ ದಿನಗಳ ನಂತರ ಹಿರಿತನದ ಆಧಾರದಲ್ಲಿ ರಾಗಿ ಸರಬರಾಜು ಮಾಡಬೇಕಾಗುತ್ತದೆ. ಟೋಕನ್‌ ಪ್ರಕ್ರಿಯೆ ಆರಂಭವಾಗಿ ಬಹಳ ದಿನಗಳಾದರೂ ಟೋಕನ್‌ ಪಡೆಯದವರ ಮಾಹಿತಿ ಪಡೆದು ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ರಿಷಬ್‌ ಶೆಟ್ಟಿ ರಾಯಭಾರಿ

ಏನು ಆರೋಪ?: ರೈತರು ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಲು ಖರೀದಿ ಕೇಂದ್ರದಿಂದ ಎಫ್‌ಐಡಿ ಪಡೆದುಕೊಳ್ಳಬೇಕು. ಆದರೆ ಅನೇಕರು ಎಫ್‌ಐಡಿ ಪಡೆಯಲು ಹೋದಾಗ ಮೊದಲೇ ಅವರ ಜಮೀನಿನ ಪಹಣಿಗೆ ಬೇರೆಯವರ ಎಫ್‌ಐಡಿ ಲಿಂಕ್‌ ಆಗಿರುವುದು ಕಂಡುಬರುತ್ತಿದೆ. ಅಂದರೆ ಮುಗ್ಧ ರೈತರ ಹೆಸರಿನಲ್ಲಿ ವರ್ತಕರು ಅಥವಾ ಇತರ ಖಾಸಗಿ ವ್ಯಕ್ತಿಗಳು ತಮ್ಮಲ್ಲಿರುವ ರಾಗಿಯನ್ನು ಹೆಚ್ಚಿನ ಬೆಲೆಗೆ ಸರ್ಕಾರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ನಕಲಿ ಎಫ್‌ಐಡಿ ಸೃಷ್ಟಿಸುತ್ತಿರುವುದು ಕೃಷಿ ಇಲಾಖೆಯ ಗಮನಕ್ಕೆ ಬಂದಿಲ್ಲ. ನಕಲಿ ಎಫ್‌ಐಡಿ ಸೃಷ್ಟಿಸಲು ಸಹಕರಿಸಿದ್ದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಡಾ.ಜಿ.ಟಿ.ಪುತ್ರ, ಕೃಷಿ ಇಲಾಖೆ ನಿರ್ದೇಶಕ

click me!