ಲಾರಿ ಡ್ರೈವರ್ ರೂಪದ ದೇವರನ್ನೊಮ್ಮೆ ನೋಡಿ: ಪ್ರಯಾಣಿಕರ ಜೀವ ಉಳಿಸಿದ್ಹೇಗೆ?

By Web DeskFirst Published Dec 29, 2018, 8:47 PM IST
Highlights

ಬಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70 ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದ ಇಳಿಜಾರಿನಲ್ಲಿ ನಡೆದಿದೆ.

ಕಾರವಾರ(ಡಿ.29): ದೇವರು ಎಲ್ಲ ಕಡೆ ಇದ್ದಾನೆ. ಅವಶ್ಯಕತೆ ಬಿದ್ದಾಗ ಬೇರೆ ಬೇರೆ ರೂಪದಲ್ಲಿ ಆತ ಅವತರಿಸುತ್ತಾನೆ ಅಂತಾರೆ. ಈ ಮಾತು ಅಕ್ಷರಶಃ ನಿಜ ನೋಡಿ.

ಬಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70 ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದ ಇಳಿಜಾರಿನಲ್ಲಿ ನಡೆದಿದೆ.

ಲಾರಿ ಚಾಲಕ ಈರಣ್ಣ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕ ಕತ್ತಿ ಕಾನಾಪುರ್ ತಮ್ಮ ಜೀವದ ಹಂಗನ್ನೇ ತೊರೆದು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ  70 ಜನರ ಪ್ರಾಣ ಕಾಪಾಡಿದ್ದಾರೆ.  ಬ್ರೇಕ್ ಫೇಲ್ ಆಗಿದ್ದ ಬಸ್ಸನ್ನು ಪದೇ ಪದೇ ತನ್ನ ಲಾರಿಗೆ ಗುದ್ದಿಸಿಕೊಂಡು ಪ್ರಯಾಣಿಕರನ್ನು ಅಪಾಯದಿಂದ ರಕ್ಷಿಸಿದ್ದಾರೆ.

ಗದಗದಿಂದ ಕಾರವಾರ ಕಡೆಗೆ ಹೋಗುತ್ತಿದ್ದ ಬಸ್ ಅರಬೈಲ್  ಪ್ರದೇಶದ ಇಳಿಜಾರಿನಲ್ಲಿ ಬ್ರೇಕ್ ಫೇಲ್ ಆಗಿದೆ. ಇದರಿಂದಾಗಿ ಬಸ್  ಕಂದಕಕ್ಕೆ ಬಿದ್ದು  ದೊಡ್ಡ ಅನಾಹುತಾಗುವ ಸಾಧ್ಯತೆ ಹೆಚ್ಚಾಗಿತ್ತು.

ಇಂತಹ ಕಠಿಣ ಸಂದರ್ಭದಲ್ಲಿ ಬಸ್ ಚಾಲಕ ಮುಂದೆ ಚಲಿಸುತ್ತಿದ್ದ ಲಾರಿಗೆ ಎರಡು ಬಾರಿ ಡಿಕ್ಕಿ ಹೊಡೆದಿದ್ದಾನೆ. ಬಸ್ ನ ಬ್ರೇಕ್ ಫೇಲ್ ಆಗಿದೆ ಎಂದು ಅಂದಾಜಿಸಿದ ಲಾರಿ ಚಾಲಕ  ಪದೇ ಪದೇ ಡಿಕ್ಕಿ ಹೊಡೆಸಿಕೊಳ್ಳುತ್ತಲೇ ನಿಧಾನವಾಗಿ ಬಂದಿದ್ದಾನೆ. ನಂತರ ಬಸ್ಸಿನ ವೇಗ ಕಡಿಮೆಯಾಗಿದೆ. ಹೀಗೆ ಸತತ ನಾಲ್ಕು ಕಿಲೋ ಮೀಟರ್ ವರೆಗೂ  ಸಾಗಿದ ನಂತರ ಬಸ್ ನಿಂತಿದೆ.

ಕರ್ತವ್ಯ ನಿಷ್ಠೆ ಹಾಗೂ ಸಮಯ ಪ್ರಜ್ಞೆಯಿಂದಾಗಿ  70 ಜನರ  ಜೀವ ಉಳಿಸಿದ ಚಾಲಕರ  ಕಾರ್ಯದ ಬಗ್ಗೆ  ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.
 

click me!