ವಾಣಿಜ್ಯ ತೆರಿಗೆ ವಂಚಕರಿಗೆ ಲೋಕಾ ಭರ್ಜರಿ ಶಾಕ್‌: ಕರ್ನಾಟಕದ 37 ಕಡೆ ಏಕಕಾಲಕ್ಕೆ ದಾಳಿ

By Kannadaprabha NewsFirst Published Dec 28, 2022, 7:03 AM IST
Highlights

13 ವಾಣಿಜ್ಯ ತೆರಿಗೆ ಕಚೇರಿ ಸೇರಿ ರಾಜ್ಯದ 37 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ, ಕೋಟ್ಯಂತರ ರು. ತೆರಿಗೆ ವಂಚಿಸಿರುವ ಬಗ್ಗೆ ದಾಖಲೆ ವಶ, 150 ಪೊಲೀಸರಿಂದ ಕಾರ್ಯಾಚರಣೆ. 

ಬೆಂಗಳೂರು(ಡಿ.28):  ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ, ತಂಬಾಕು ಉತ್ಪನ್ನಗಳ ತಯಾರಕರು ಹಾಗೂ ಮಾರಾಟಗಾರರಿಗೆ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದು, ರಾಜ್ಯಾದ್ಯಂತ 13 ವಾಣಿಜ್ಯ ತೆರಿಗೆ ಕಚೇರಿಗಳು ಸೇರಿ 37 ಸ್ಥಳಗಳಲ್ಲಿ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ವಾಣಿಜ್ಯ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ತಂಬಾಕು ಉತ್ಪನ್ನಗಳ ಮಾರಾಟಗಾರರು ಶಾಮೀಲಾಗಿ ರಾಜ್ಯ ಸರ್ಕಾರಕ್ಕೆ ಎಸಗಿದ್ದ ‘ತೆರಿಗೆ ವಂಚನೆ’ ಬಗ್ಗೆ ನ.25ರಂದು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸುದ್ದಿವಾಹಿನಿಯು ‘ಕವರ್‌ ಸ್ಟೋರಿ’ಯಲ್ಲಿ ರಹಸ್ಯ ಕಾರ್ಯಾಚರಣೆ ಮೂಲಕ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈ ವರದಿ ಆಧರಿಸಿ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರು, ಸರ್ಕಾರಕ್ಕೆ ಆದಾಯ ಮೋಸ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದರು.

ದ.ಕ ಜಿಲ್ಲೆಯ ಮರಳು ಅಡ್ಡೆಗಳಿಗೆ ಲೋಕಾಯುಕ್ತ ದಾಳಿ: 40 ಲಕ್ಷ ಮೌಲ್ಯದ ಸೊತ್ತು ವಶ

ಈ ಆದೇಶದ ಬೆನ್ನಲ್ಲೇ ಕಾರ್ಯಾಚರಣೆಗಿಳಿದ 150 ಪೊಲೀಸರು, ತೆರಿಗೆ ವಂಚಕರಿಗೆ ನಡುಕ ಹುಟ್ಟಿಸಿದ್ದಾರೆ. ದಾಳಿ ವೇಳೆ ಜಿಎಸ್‌ಟಿ ಪಾವತಿಸದೆ ಸರ್ಕಾರಕ್ಕೆ ಕೋಟ್ಯಂತರ ರು. ವಂಚಿಸಿರುವ ಸಂಬಂಧ ದಾಖಲೆಗಳು ಪತ್ತೆಯಾಗಿದ್ದು, ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ವಾಣಿಜ್ಯ ತೆರಿಗೆ ಇಲಾಖೆಗೆ ಲೋಕಾಯುಕ್ತ ಪೊಲೀಸರು ಸೂಚಿಸಿದ್ದಾರೆ.

ಹೇಗಿತ್ತು ಆಪರೇಷನ್‌?:

ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಹಾಗೂ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್‌ ಕುಮಾರ್‌ ಠಾಕೂರ್‌ ಮಾರ್ಗದರ್ಶನದಲ್ಲಿ 7 ಎಸ್ಪಿಗಳು, 16 ಡಿವೈಎಸ್ಪಿಗಳು, 25 ಇನ್ಸ್‌ಪೆಕ್ಟರ್‌ಗಳು ಹಾಗೂ ಪೊಲೀಸರು ಸೇರಿ 150 ಪೊಲೀಸರ ತಂಡ ತೆರಿಗೆ ವಂಚನೆ ಜಾಲದ ಮೇಲೆ ಕಾರ್ಯಾಚರಣೆ ನಡೆಸಿದೆ.

ಬೆಂಗಳೂರಿನ ಚಾಮರಾಜಪೇಟೆಯಯದ್ದೂ ಸೇರಿ ಬೆಂಗಳೂರಿನ 9 ವಾಣಿಜ್ಯ ತೆರಿಗೆ ಕಚೇರಿಗಳಲ್ಲಿ ತಪಾಸಣೆ ನಡೆದಿದೆ. ಅಲ್ಲದೆ 24 ತಂಬಾಕು ಉತ್ಪನ್ನಗಳ ತಯಾರಕರು, ಮಾರಾಟಗಾರರು ಹಾಗೂ ಪಾನ್‌ ಮಸಾಲ ವಿತರಕರು ಮತ್ತು 20 ಗೋದಾಮುಗಳಲ್ಲಿ ದಾಖಲೆಗಳನ್ನು ಶೋಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ವೇಳೆ ವಾಣಿಜ್ಯ ತೆರಿಗೆ ಅಧಿಕಾರಿಗಳ ಜತೆ ಸೇರಿ ವ್ಯಾಪಾರಿಗಳು ಅಪಾರ ಮೊತ್ತದ ತೆರಿಗೆ ವಂಚನೆ ಮಾಡಿರುವುದಕ್ಕೆ ಪುರಾವೆಗಳು ಲಭ್ಯವಾಗಿವೆ. ಅಲ್ಲದೆ ಉದ್ಯಮಿಗಳು ತಂಬಾಕು ಉತ್ಪನ್ನಗಳ ವ್ಯವಹಾರ ಸಂಬಂಧ ಸೂಕ್ತವಾಗಿ ಲೆಕ್ಕಪತ್ರ ನಿರ್ವಹಣೆ ಮಾಡದಿರುವುದು ಬಯಲಾಗಿದೆ. ಕಚ್ಚಾ ವಸ್ತುಗಳ ಖರೀದಿ ಹಾಗೂ ಉತ್ಪಾದನೆ ವೆಚ್ಚ ಹೀಗೆ ಪ್ರತಿಯೊಂದರಲ್ಲಿ ಸಹ ಲೆಕ್ಕ ದೋಷ ಕಂಡು ಬಂದಿದೆ. ಇದೂ ಜಿಎಸ್‌ಟಿ ನಿಯಮಾವಳಿಗಳ ಸ್ಪಷ್ಟಉಲ್ಲಂಘನೆ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

21 ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಲೋಕಾ ಶಾಕ್‌: ಏಕಕಾಲದಲ್ಲಿ 50 ಅಧಿಕಾರಿಗಳ ದಾಳಿ

‘ತೆರಿಗೆ ವಂಚನೆ ಕೃತ್ಯದಲ್ಲಿ ಸಿಟಿಓಗಳ (ವಾಣಿಜ್ಯ ತೆರಿಗೆ ಅಧಿಕಾರಿಗಳ) ಕರ್ತವ್ಯಲೋಪ ಪತ್ತೆಯಾಗಿದೆ. ಅಲ್ಲದೆ ಗೋದಾಮುಗಳಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಸಂಗ್ರಹಣೆ ಮಾಡಿರುವ ಬಗ್ಗೆ ಕಾನೂನು ಕ್ರಮ ಕೈಗೊಂಡು ಬಳಿಕ ವರದಿ ಸಲ್ಲಿಸುವಂತೆ ಸ್ಥಳೀಯ ಸಿಟಿಓಗಳಿಗೆ ಸೂಚಿಸಿದ್ದೇವೆ. ರಾಜ್ಯ ವ್ಯಾಪ್ತಿ 20 ಗೋದಾಮುಗಳ ಮೇಲೆ ದಾಳಿ ನಡೆಸಲಾಯಿತು. ಅಲ್ಲಿ ಕೂಡ ತಂಬಾಕು ಉತ್ಪನ್ನಗಳ ಖರೀದಿ, ಮಾರಾಟ ಹಾಗೂ ದಾಸ್ತಾನು ಬಗ್ಗೆ ಸೂಕ್ತವಾದ ದಾಖಲೆಗಳ ನಿರ್ವಹಣೆ ಮಾಡದಿರುವುದು ಕಂಡು ಬಂದಿದೆ. ಅಲ್ಲದೆ ಕೆಲವರು ಜಿಎಸ್‌ಟಿ ಪಾವತಿಸದೆ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ಸಿಟಿಓ ಕಚೇರಿಗಳಿಗೆ ಜಿಎಸ್‌ಟಿ ನೋಂದಣಿ ಸಂಖ್ಯೆಯನ್ನು ಕೂಡ ಕೆಲವು ವ್ಯಾಪಾರಿಗಳು ನೀಡಿಲ್ಲ’ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ತೆರಿಗೆ ವಂಚನೆ ಜಾಲದ ಮೇಲೆ ನಡೆದಿರುವ ಕಾರ್ಯಾಚರಣೆಯು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವವರಿಗೆ, ಹಿಂದೇಟು ಹಾಕುವವರಿಗೆ ಮತ್ತು ಸುಳ್ಳು ಜಿಎಸ್‌ಟಿ ಪಾವತಿದಾರರಿಗೆ ಸ್ಪಷ್ಟ ಸಂದೇಶವಾಗಿದೆ ಅಂತ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 

click me!