ಲೋಕಸಭಾ ಚುನಾವಣೆ : ಮೈತ್ರಿಯಲ್ಲಿ ಜೆಡಿಎಸ್‌ಗೆ ಈ 7 ಕ್ಷೇತ್ರಗಳು

By Web DeskFirst Published Feb 19, 2019, 9:13 AM IST
Highlights

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವಿದ್ದು, ಕಾಂಗ್ರೆಸ್ ಲೋಕಸಭಾ ಚುನಾವಣೆ ವೇಳೆ 7 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಅಣಿಯಾಗಿದೆ. 

ಬೆಂಗಳೂರು: ಲೋಕಸಭಾ ಚುನಾವಣೆಗೆ ಜೆಡಿಎಸ್ 12 ಸ್ಥಾನ ಕೇಳುತ್ತಿರಬಹುದು.  ಆದರೆ, ಕಾಂಗ್ರೆಸ್ ಮಾತ್ರ ಏಳು ಸ್ಥಾನವನ್ನಷ್ಟೇ ಬಿಟ್ಟುಕೊಡಲು ಅಣಿಯಾಗಿದೆ. ಫೆ.18ರಂದು ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಇಂತಹದೊಂದು ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ. 

ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹಾಲಿ ಸಂಸದರ ಕ್ಷೇತ್ರಗಳನ್ನು ಸೀಟು ಹಂಚಿಕೆ ಚರ್ಚೆಯಿಂದ ಹೊರಗಿಡಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹಾಲಿ ಗೆದ್ದಿರುವ 10 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು. ಸೀಟು ಹಂಚಿಕೆ ಚರ್ಚೆ ಏನಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲ್ಲದ ಕ್ಷೇತ್ರಗಳಿಗೆ ಸೀಮಿತವಾಗಿರಬೇಕು ಎಂಬುದು ಸಭೆಯಲ್ಲಿ ಮಾತನಾಡಿದ ಬಹುತೇಕ ನಾಯಕರ ಅಭಿಮತವಾಗಿತ್ತು
ಎಂದು ಮೂಲಗಳು ಹೇಳಿವೆ. 

ಈ ಚರ್ಚೆಯ ಪ್ರಕಾರ ಜೆಡಿಎಸ್ ಹಾಲಿ ಗೆದ್ದಿರುವ ಕ್ಷೇತ್ರಗಳಾದ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳು ಜೆಡಿಎಸ್ ಪಾಲಿಗೆ ಇರುತ್ತವೆ. ಶಿವಮೊಗ್ಗ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಟ್ಟು ಕೊಡಲಾಗಿತ್ತು. ಅದು ಮುಂದುವರೆಯಲಿದೆ. ಇದರ ಹೊರತಾಗಿ, ಬೆಂಗಳೂರು ಉತ್ತರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ಮಾನಸಿಕವಾಗಿ ಸಜ್ಜಾಗಿದೆ. ಉಳಿದಂತೆ ಉತ್ತರ ಕರ್ನಾಟಕದಲ್ಲಿ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದೆ. ಬಹುತೇಕ ಧಾರವಾಡ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಹುದು ಎಂಬುದು ಕಾಂಗ್ರೆಸ್‌ನ ನಿಲುವು ಎನ್ನಲಾಗಿದೆ.

ಜೆಡಿಎಸ್ ಬಹಿರಂಗವಾಗಿ 12 ಕ್ಷೇತ್ರಗಳಿಗೆ ಬೇಡಿಕೆಯಿಟ್ಟಿದ್ದರೂ 9 ಕ್ಷೇತ್ರಗಳಿಗೆ ಪಟ್ಟು ಹಿಡಿಯಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಮಾತ್ರ ಏಳು ಸ್ಥಾನಗಳನ್ನು ಬಿಟ್ಟುಕೊಡಲು ಸಜ್ಜಾಗಿದೆ. ಹೀಗಾಗಿ ಉಳಿದ ಎರಡು ಕ್ಷೇತ್ರಗಳ ಬಗ್ಗೆ ಚೌಕಾಸಿ ನಡೆಯಬೇಕಿದೆ.

click me!