ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 22 ಸ್ಥಾನ ಗೆಲುವಿಗೆ ಬಿಜೆಪಿ ಪ್ಲಾನ್

By Web DeskFirst Published Feb 1, 2019, 12:21 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇದೇ ವೇಳೆ ಬಿಜೆಪಿ ಕೂಡ ಮೈತ್ರಿ ಸರ್ಕಾರದ ಕಚ್ಚಾಟವನ್ನು ಅಸ್ತ್ರವಾಗಿಸಿಕೊಂಡು 22 ಸ್ಥಾನಗಳಲ್ಲಿ ಗೆಲ್ಲಲು ಪ್ಲಾನ್ ರೂಪಿಸುತ್ತಿದೆ. 

ಬೆಂಗಳೂರು :  ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿನ ಕಚ್ಚಾಟವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 22 ಸ್ಥಾನ ಗಳಿಸಲು ರಾಜಕೀಯ ತಂತ್ರಗಾರಿಕೆ ಹೂಡಲು ಸಜ್ಜಾಗಿರುವ ಬಿಜೆಪಿ, ಚುನಾವಣೆ ಮುಗಿಯುವವರೆಗೆ ಅವಿರತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರಾಜ್ಯ ಪ್ರವಾಸ ಮುಕ್ತಾಯವಾದ ಬಳಿಕ ಪಕ್ಷವನ್ನು ಬೂತ್‌ಮಟ್ಟದಿಂದ ಬಲಗೊಳಿಸಲು ರಾಜ್ಯ ಬಿಜೆಪಿ ನಾಯಕರು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.

ಕರ್ನಾಟಕದ ಒಟ್ಟು 28 ಕ್ಷೇತ್ರಗಳಲ್ಲಿ  ಸದ್ಯ 22 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಪ್ಲಾನ್ ಮಾಡಿದ್ದು, 2014ರ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 9 ಸ್ಥಾನ ಪಡೆದಿದ್ದರೆ, ಜೆಡಿಎಸ್ 2 ಸ್ಥಾನ ತನ್ನದಾಗಿಸಿಕೊಂಡಿತ್ತು. 

ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವು ಕೈಗೊಂಡ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಫೆ.28ರಂದು ‘ಮೇರಾ ಬೂತ್‌ ಸಬ್ಸೆ ಮಜ್ಬೂತ್‌’ ಹೆಸರಲ್ಲಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಈ ಅಭಿಯಾನದಡಿ ಪ್ರತಿ ಬೂತ್‌ನಲ್ಲಿ ಪಕ್ಷವು 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವುದು ಹೇಗೆ ಎಂಬುದರ ಕುರಿತು ಬೆಳಕು ಚೆಲ್ಲಲಾಗುತ್ತದೆ. ಬೂತ್‌ ಮಟ್ಟದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿ ಮತದಾರರ ಓಲೈಕೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಫೆ.26ರಂದು ಪ್ರತಿ ಬೂತ್‌ನಲ್ಲಿ ‘ಕಮಲ ಜ್ಯೋತಿ’ ಬೆಳಗಿಸಲಾಗುವುದು. ಇದು ಜನತೆಯಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ಮಾ.2ರಂದು ‘ಕಮಲ ಸಂಕಲ್ಪ ರಾರ‍ಯಲಿ’ಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಬೈಕ್‌ನಲ್ಲಿ ರಾರ‍ಯಲಿ ನಡೆಯಲಿದೆ. ಇಂತಹ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಚುನಾವಣೆಗೆ ಅಣಿಯಾಗಬೇಕು ಎಂಬ ಉದ್ದೇಶದಿಂದ ಸಾಕಷ್ಟುಚರ್ಚೆಗಳನ್ನು ನಡೆಸಲಾಗಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ಈ ಅಭಿಯಾಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

‘ಫೆಬ್ರವರಿ ತಿಂಗಳಿನಿಂದ ಏ.15ರವರೆಗೆ ರಾಷ್ಟ್ರೀಯ ಪ್ರಮುಖರಿಗೆ ಬಿಡುವಿಲ್ಲದ ಕೆಲಸದಲ್ಲಿ ತೊಡಗಲಿದ್ದಾರೆ. ಅವರಿಗೆ ರಾಜ್ಯ ನಾಯಕರು ಮತ್ತು ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಬೇಕು. ಇದರೊಂದಿಗೆ ಎಲ್ಲಾ ಮೋರ್ಚಾಗಳನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಲೋಕಸಭೆ ಚುನಾವಣೆಯಲ್ಲಿ 22ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆದ್ದು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ರಾಜ್ಯದಿಂದ ಕೊಡುಗೆ ನೀಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಸಹ ಉಸ್ತುವಾರಿ ಕಿರಣ್‌ ಮಹೇಶ್ವರಿ, ಮುಖಂಡರಾದ ಅರವಿಂದ ಲಿಂಬಾವಳಿ, ಆರ್‌.ಅಶೋಕ್‌, ಗೋವಿಂದ ಕಾರಜೋಳ, ಎನ್‌.ರವಿಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ ಇತರರು ಉಪಸ್ಥಿತರಿದ್ದರು.

click me!