
ಹಾವೇರಿ (ಡಿ.13): ಸುಮಾರು 20 ವರ್ಷಗಳ ಹಿಂದೆಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿದ್ದ ಅಜ್ಜ-ಅಜ್ಜಿಯನ್ನು ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಒಂದುಗೂಡಿಸಿ, ಅವರ ಬದುಕಿಗೆ ಹೊಸ ಬೆಳಕು ನೀಡಿದೆ. ಈ ಭಾವನಾತ್ಮಕ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಕೋರ್ಟ್ ಆವರಣದಲ್ಲಿ ನಡೆದಿದೆ.
ಶಿಗ್ಗಾವಿ ಕೋರ್ಟ್‌ನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ನಾಲ್ಕು ಜೋಡಿಗಳನ್ನು ನ್ಯಾಯಾಧೀಶರು ಹಾಗೂ ವಕೀಲರು ಯಶಸ್ವಿಯಾಗಿ ಮನವೊಲಿಸಿ ಮತ್ತೆ ಒಂದು ಮಾಡಿದ್ದಾರೆ. ಈ ನಾಲ್ಕು ಜೋಡಿಗಳ ಪೈಕಿ ಲ್ಯಾವನಗೌಡ ಪೊಲೀಸಗೌಡ (80 ವರ್ಷ) ಮತ್ತು ಅವರ ಪತ್ನಿ ಚಿನ್ನವ್ವ ಪೊಲೀಸಗೌಡ (75 ವರ್ಷ) ಅವರ ಪ್ರಕರಣ ಪ್ರಮುಖವಾಗಿದೆ. ಸುಮಾರು 20 ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಹಿರಿಯ ನ್ಯಾಯಾಧೀಶರಾದ ಸುನೀಲ್ ತಳವಾರ ಮತ್ತು ಕಿರಿಯ ನ್ಯಾಯಾಧೀಶರಾದ ಅಶ್ವಿನಿ ಚಂದ್ರಕಾಂತ್ ಅವರ ಸಮ್ಮುಖದಲ್ಲಿ, ನ್ಯಾಯಾಧೀಶರು ಮತ್ತು ವಕೀಲರು ನಿರಂತರ ಮಾತುಕತೆ ನಡೆಸಿ ದಂಪತಿಗಳ ಮನವೊಲಿಕೆಗೆ ಮುಂದಾದರು. ಅಂತಿಮವಾಗಿ ವಯೋವೃದ್ಧ ದಂಪತಿ ಸೇರಿದಂತೆ ನಾಲ್ಕು ಜೋಡಿಗಳು ತಮ್ಮ ಮನಸ್ಸು ಬದಲಾಯಿಸಿ ಮತ್ತೆ ಒಂದಾಗಲು ನಿರ್ಧರಿಸಿದರು. ಈ ವೇಳೆ, ಪರಸ್ಪರ ಹಾರ ಹಾಕಿಸಿ, ಸಿಹಿ ತಿನ್ನಿಸುವ ಮೂಲಕ ಜೋಡಿಗಳನ್ನು ಭಾವನಾತ್ಮಕವಾಗಿ ಒಂದು ಮಾಡಲಾಯಿತು.
ಕಾನೂನು ಪ್ರಕ್ರಿಯೆಯಲ್ಲಿದ್ದ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿ, ಮುರಿದು ಹೋದ ಸಂಸಾರಗಳನ್ನು ಮತ್ತೆ ಜೋಡಿಸುವಲ್ಲಿ ಲೋಕ್ ಅದಾಲತ್ ಯಶಸ್ವಿಯಾಗಿದ್ದು, ನ್ಯಾಯಾಲಯದ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ