#WorkFromHome: ಆನ್‌ಲೈನ್‌ನಲ್ಲೇ ಮಂತ್ರಪಠಣ ! ಶ್ರಾದ್ಧಕರ್ಮ..!!

By Kannadaprabha NewsFirst Published Apr 20, 2020, 4:25 PM IST
Highlights

ಕೊರೋನಾ ವೈರಸ್ ಮಹಾಮಾರಿ ನಿಯಂತ್ರಿಸಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಬೇರೆ ದಾರಿ ಇಲ್ಲದ ಜನ ಸಾಮಾನ್ಯರು ಮನೆಯಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದರೆ, ಅನೇಕ ಮಂದಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮನೆಯಿಂದಲೇ ತಮ್ಮ ಕೆಲಸ ನಿರ್ವಹಿಸಲು ಹೊಸ ಹಾದಿ ಕಂಡು ಹುಡುಕಿದ್ದಾರೆ. ಹೀಗಿರುವಾಗ ವರ್ಕ್‌ ಫ್ರಂ ಹೋಂನ ಕೆಲ ಅನುಭವಗಳು ಇಲ್ಲಿವೆ. 

* ಆನ್‌ಲೈನ್‌ನಲ್ಲೇ  ಮಂತ್ರಪಠಣ ! ಶ್ರಾದ್ಧಕರ್ಮ..!!

ಜನಸಮೂಹ ಸೇರಬಾರದೆಂಬ ಕಟ್ಟುನಿಟ್ಟಿನ ನಿಯಮ ಪಾಲಿಸಲೇಬೇಕು, ಇದರಲ್ಲಿ ಎರಡು ಮಾತಿಲ್ಲ. ಆದರೆ, ಧರ್ಮ ಕಾರ್ಯಗಳಿಗೂ ಧಕ್ಕೆಯಾಗಬಾರದು ಅನ್ನೋ ಸದುದ್ದೇಶದಿಂದ ಆನ್‌ಲೈನ್ನ್‌ನಲ್ಲೇ ಮಂತ್ರಪಠಣ ಹಾಗೂ ಪಾಠ ಪ್ರವಚನಗಳನ್ನು ಮಾಡಲಾಗುತ್ತಿದೆ. ಪ್ರತಿದಿನ ವೀಡಿಯೋ ಕಾಲ್ ಮೂಲಕ ಬ್ರಹ್ಮಸೂತ್ರಭಾಷ್ಯ, ಮಹಾಭಾರತ ತಾತ್ಪರ್ಯ ನಿರ್ಣಯ ಪಾಠ ಮಾಡುತ್ತಿದ್ದೇನೆ. ಪೂಜೆಗಳನ್ನೂ ಸಹ ಕೆಲವರು ಆನ್‌ಲೈನ್‌ನಲ್ಲೇ ವೀಕ್ಷಿಸ್ತಾರೆ. ಅನೇಕ ಭಕ್ತರು ಜ್ವಾಯಿನ್ ಆಗ್ತಾರೆ. ಪ್ರತಿವರ್ಷದಂತೆ ಸಂಸ್ಕೃತ ಪಾಠಗಳ ಶಿಬಿರವನ್ನೂ ಸಹ ಹೀಗೆಯೇ ನಡೆಸುವ ಇರಾದೆಯಿದೆ. ಕೆಲವೊಮ್ಮೆ ತೀರ ಅನಿವಾರ್‍ಯ ಸಂದರ್ಭದಲ್ಲಿ ಶ್ರಾದ್ಧಕರ್ಮಾದಿಗಳನ್ನೂ ಸಹ ಮಾಡಿಸಿದ ಉದಾಹರಣೆಗಳಿವೆ. ಮಠಾಽಶರಾದ ಶ್ರೀಸತ್ಯಾತ್ಮತೀರ್ಥರೂ ಸಹ ದಿನಾಲೂ ಸಂಜೆ ಆನ್‌ಲೈನ್ನ್‌ಲ್ಲೇ ಪ್ರವಚನ ನೀಡ್ತಾರೆ. ಮುಂಬೈನಿಂದ ಸತ್ಯಧಾನ ವಿದ್ಯಾಪೀಠದ ನಮ್ಮ ಗುರುಗಳಾದ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ದಿನಾಲೂ ನಮ್ಮಂತಹ ಸಾವಿರಾರು ಶಿಷ್ಯರಿಗೆ ಆಪ್ ಮೂಲಕ ಪಾಠ ಮಾಡ್ತಾರೆ. ಸರ್ಕಾರದ ಆದೇಶವೂ ಪಾಲನೆಯಾಗಬೇಕು, ಧರ್ಮಕಾರ್ಯಯೂ ಸಾಗಬೇಕಲ್ಲವೇ..

- ಪಂಡಿತ್ ನರಸಿಂಹಾಚಾರ್ಯ ಪುರಾಣಿಕ್, ಅರ್ಚಕರು, ಯಾದಗಿರಿ.

* ಸೇಲ್ಸ್ ಆಗ್ತಿಲ್ಲ, ಟ್ರೈನಿಂಗ್ ಮಾಡ್ತಿದ್ದೇವೆ

ನಾನು ಡೆನ್ಮಾರ್ಕ್ ಮೂಲದ ಪಂಪ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತೇನೆ. ಮಾರಾಟ, ಮಾರುಕಟ್ಟೆ ವಿಭಾಗದ ಕೆಲಸ ನನ್ನದು. ತಾಂತ್ರಿಕ ವಿಚಾರಗಳ ಚರ್ಚೆ, ದರ ಸಮಾಲೋಚನೆ, ಸ್ಥಳಕ್ಕೆ ಭೇಟಿ ನೀಡಿ ಸಲಹೆ ನೀಡುವುದು ನನ್ನ ವೃತ್ತಿ. ಇದಕ್ಕೆ ಬಹಳಷ್ಟು ಸುತ್ತಾಟ, ಮುಖಾಮುಖಿ ಭೇಟಿ ಆಗಬೇಕಿರುತ್ತದೆ. ಲಾಕ್ ಡೌನ್ ಆದಾಗಿನಿಂದ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದೇನೆ. ಆದರೆ, ಈ ಕೆಲಸಕ್ಕೆ ಮನೆಯಿಂದ ಮಾಡುವುದಾದರೂ ಏನು? ಆರಂಭದಲ್ಲಿ ಏನೂ ತೋಚುತ್ತಿರಲಿಲ್ಲ. ಕಡೆಗೆ ನಾವೆಲ್ಲ ಭವಿಷ್ಯದ ಸಿದ್ಧತೆಗಳನ್ನು ಚರ್ಚಿಸಿದೆವು. ನಮ್ಮ ಕ್ಷೇತ್ರದ ಹೊಸ ವಿಚಾರ ತಿಳಿಯಲು ನಿರ್ಧರಿಸಿದೆವು. ನಮಗೆ ಗ್ರಾಹಕರೇ ದೇವರು. ಅವರನ್ನೂ ಜತೆಗೆ ಸೇರಿಸಿಕೊಂಡೆವು. ಪಂಪ್ ಗಳ ಮೂಲಭೂತ ತಾಂತ್ರಿಕತೆಯಿಂದ ಹಿಡಿದು ಅತ್ಯಾಧುನಿಕ ಆವಿಷ್ಕಾರಗಳನ್ನು ಕಲಿಯುತ್ತಾ, ಕಲಿಸುತ್ತಿದ್ದೇವೆ. ಆನ್ ಲೈನ್ ನೆರವಿನಿಂದ ಇದಾಗುತ್ತಿದೆ. ಒಟ್ಟಿನಲ್ಲಿ ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇವೆ. ಅಲ್ಲದೆ, ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತಿದ್ದೇವೆ.

- ತೇಜಸ್ವಿ.ಕೆ.ಭಟ್, ಸೇಲ್ಸ್ ಮ್ಯಾನೇಜರ್, ಗ್ರಂಡ್ಫೋಸ್, ಮೈಸೂರು

* ಮೊಬೈಲ್‌ನಲ್ಲೇ ಗ್ರಾಹಕರನ್ನು ಒಪ್ಪಿಸೋದು ಸವಾಲು

ಮೊದಲಾದರೆ ನಾವು ಗ್ರಾಹಕರನ್ನು ನೇರವಾಗಿ ಭೇಟಿಯಾಗುತ್ತಿದ್ದೆವು. ನಮ್ಮ ಸಂಸ್ಥೆಯಾದ ಐಸಿಐಸಿಐ ಪ್ರುಡೆನ್ಶಿಯನ್‌ ಲೈಫ್‌ ಇನ್ಶೂರೆನ್ಸ್‌ನ ವಿವಿಧ ಪ್ರಾಡಕ್ಟ್ಗಳ ಕುರಿತು ಸೂಕ್ತ ಮಾರ್ಗದರ್ಶನ ಕೊಡುತ್ತಿದ್ದೆವು. ನಂತರ ಅವರು ತಮಗೆ ಸೂಕ್ತವೆನಿಸಿದ ಯೋಜನೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಗೊಂದಲಗಳಿದ್ದರೆ ಕಚೇರಿಗೆ ಬಂದು ಪರಿಹರಿಸಿಕೊಂಡೋ, ಸರಿಪಡಿಸಿಕೊಂಡೋ ಹೋಗುತ್ತಿದ್ದರು. ಆದರೆ, ಲಾಕ್‌ಡೌನ್‌ ನಂತರ ಕೇವಲ ಆನ್‌ಲೈನ್‌ನಲ್ಲೇ ವ್ಯವಹರಿಸಬೇಕಿದೆ. ಇದರಿಂದ ಕೆಲ ಸಮಸ್ಯೆಗಳಾಗುತ್ತಿವೆ. ಇಂಟರ್‌ನೆಟ್‌ ವೇಗದಲ್ಲಿ ಏರುಪೇರಾಗುವುದರಿಂದ ಸಹಜವಾಗಿ ತೊಂದರೆಗಳಾಗುತ್ತಿವೆ. ಕೆಲಸಗಳೂ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ. ಇದರ ಜತೆಗೆ, ಕೇವಲ ಮೊಬೈಲ್‌ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಒಪ್ಪಿಸುವ ಸವಾಲು ಇದೆ.

- ಅಕ್ಷಯ ಗಜಾಕೋಶ, ಘಟಕ ವ್ಯವಸ್ಥಾಪಕ, ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಇನ್ಶೂರೆನ್ಸ್‌, ವಿಜಯಪುರ

 

click me!