Women Reservation Bill: ಸ್ವಾರ್ಥ, ಅಪಸ್ವರವಿಲ್ಲದೆ ಮಹಿಳಾ ಮೀಸಲಾತಿ ಜಾರಿಯಾಗಲಿ

Ravi Janekal   | Kannada Prabha
Published : Apr 18, 2026, 08:06 AM IST
Let women s reservation be implemented without selfishness or discord malavika avinashh

ಸಾರಾಂಶ

ರಾಜಕಾರಣಿಗಳು ಶಕ್ತಿ ದೇವತೆಗಳ ಆರಾಧಿಸುವುದಕ್ಕೂ, ರಾಜಕೀಯದಲ್ಲಿ ಮಹಿಳೆಯರ ಪ್ರವೇಶಕ್ಕೆ ದಶಕಗಳ ಕಾಲ ಅಡ್ಡಿಪಡಿಸಿದ್ದಕ್ಕೂ ಇರುವ ವಿಪರ್ಯಾಸವನ್ನು ಈ ಲೇಖನ ಚರ್ಚಿಸುತ್ತದೆ. ಅಂಬೇಡ್ಕರ್‌ರಿಂದ ಹಿಡಿದು, ಪಿ.ವಿ.ನರಸಿಂಹ ರಾವ್‌ ಮತ್ತು ಮೋದಿಯವರ ಕಾಲದವರೆಗೆ ಮಹಿಳಾ ಮೀಸಲಾತಿಯ ಐತಿಹಾಸಿಕ ಹಾದಿ ವಿವರಿಸುತ್ತದೆ.

ಮಾಳವಿಕಾ ಅವಿನಾಶ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷೆ

ತಂಜಾವೂರಿನ ಬೃಹದೀಶ್ವರ ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಎಡಕ್ಕೆ ಶ್ರೀ ವಾರಾಹಿ ಕಂಗೊಳಿಸುತ್ತಾಳೆ. ಆ ಅದ್ಭುತ ದೇವಾಲಯವನ್ನು ನಿರ್ಮಿಸಿದ ಸಾಮ್ರಾಟ ರಾಜ ರಾಜ ಚೋಳ, ವಾರಾಹಿಗೆ ಕೈಮುಗಿದೇ ಯುದ್ಧಕ್ಕೆ ತೆರಳುತಿದ್ದ ಎಂಬುದು ಇತಿಹಾಸ. ತಿಳಿದವರಿಗೆ ಗೊತ್ತು ವಾರಾಹಿ, ತಂತ್ರ ಮಾರ್ಗದಲ್ಲಿ ಪೂಜಿಸಲ್ಪಡುವ ಶಕ್ತಿ ದೇವತೆ ಎಂದು.

ಛತ್ರಪತಿ ಶಿವಾಜಿ ಮಹಾರಾಜರು ಕೂಡ ಮೊರೆ ಹೋಗುತ್ತಿದ್ದುದು ಶಕ್ತಿ ಪೀಠಗಳಲ್ಲಿ ಒಂದಾದ ತುಳಜಾಪುರದ ಭವಾನಿಯನ್ನು. ನಮ್ಮ ಕದಂಬರು ಬನವಾಸಿಯ ಭುವನೇಶ್ವರಿಯನ್ನು ನಂಬಿದ್ದರು. ಯದು ವಂಶದ ಒಡೆಯರಿಗೆ ಚಾಮುಂಡಿಯೇ ಸರ್ವಸ್ವ. ಅಂದಿನ ಸಾಮ್ರಾಟರು, ಯೋಧರಿಂದ ಇಂದಿನ ರಾಜಕಾರಣಿಗಳವರೆಗೆ ಎಲ್ಲರೂ ‘ಶಾಕ್ತೇಯರು’, ಅರ್ಥಾತ್ ಶಕ್ತಿಯ ಆರಾಧಕರು ಎಂಬುದು ರಾಜಕಾರಣಿಯಾಗಿ ನಾನು ಕಂಡುಕೊಂಡ ಸತ್ಯ.

ಅಸ್ಸಾಂನ ಕಾಮಾಕ್ಯ, ಬೆಂಗಳೂರಿನ ರಾಜರಾಜೇಶ್ವರಿ, ಮಧುರೈ ಮೀನಾಕ್ಷಿ/ರಾಜ ಮಾತಂಗಿ, ದೆಹಲಿಯ ಛತ್ತರ್‌ಪುರದ ಕಾತ್ಯಾಯಿನಿಯಂತಹ ದೇವಾಲಯಗಳಿಗೆ ಅನೇಕರು ಮೊರೆ ಹೋಗುವುದು ಸಾರ್ವಜನಿಕ ಜ್ಞಾನ. ನನಗೆ ಅಚ್ಚರಿಯೆನಿಸಿದ್ದೇನೆಂದರೆ, ಹೀಗೆ ಶಕ್ತಿಯನ್ನು ಆರಾಧಿಸುವ ರಾಜಕಾರಣಿಗಳು, ಮಹಿಳೆಯರ ರಾಜಕೀಯ ಭೂಮಿಕೆಗೆ ಇಷ್ಟು ದಶಕಗಳ ಕಾಲ ಅಡ್ಡಿಪಡಿಸಿದ್ದೇಕೆ ಎಂಬುದು?

ಸಂವಿಧಾನ ಶಿಲ್ಪಿ ಅಂಬೇಡ್ಕರರಿಂದಾಗಿ 1952ರ ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ಮಹಿಳೆಯರೂ ಪುರುಷರಂತೆಯೇ ಮತದಾನ ಮಾಡಿದ್ದರು. ಅಮೆರಿಕದಲ್ಲಿ ಸ್ವಾತಂತ್ರ್ಯ ಬಂದು ಮಹಿಳೆಯರು ಮತದಾನ ಮಾಡಲು 200 ವರ್ಷ ಕಾಯಬೇಕಿತ್ತು. ನಮ್ಮನ್ನಾಳಿದ ಬ್ರಿಟಿಷರೇ ಮತದಾನದ ಹಕ್ಕು ನೀಡಲು ಮಹಿಳೆಯರನ್ನು ದಶಕಗಳ ಕಾಲ ಕಾಯಿಸಿದರು.

ಭಾರತೀಯ ಮಹಿಳೆಯೇ ಧನ್ಯ:

ಅಂಬೇಡ್ಕರ್‌ ಅವರು ಬದುಕಿದ ಈ ನೆಲದಲ್ಲಿ ಹುಟ್ಟಿದ ಭಾರತೀಯ ಮಹಿಳೆಯೇ ಧನ್ಯ. ನಮ್ಮ ಸಂವಿಧಾನವನ್ನು ಜಾರಿಗೊಳಿಸಿದ ಕಾನ್‌ಸ್ಟಿಟ್ಯುಯೆಂಟ್‌ ಅಸೆಂಬ್ಲಿಯಲ್ಲಿ 15 ಮಂದಿ ಮಹಿಳೆಯರಿದ್ದರು ಎಂಬುದೂ ಸ್ಮರಿಸಿಕೊಳ್ಳಬೇಕಾದ ಸತ್ಯ. 1952ರಲ್ಲೇ ಮತದಾನದ ಹಕ್ಕು ಸಿಕ್ಕಿದ್ದರೂ ಚುನಾವಣಾ ರಾಜಕೀಯದಲ್ಲಿ ತೊಡಗುವುದು ಮಹಿಳೆಗೆ ಸುಲಭವಿರಲಿಲ್ಲ. ಸಹಜವಾಗಿಯೇ ಪುರುಷ ಪ್ರಧಾನ ಸಮಾಜದಲ್ಲಿ ಕಷ್ಟ. ಅದರಲ್ಲೂ ಜಾತಿ, ಹಣದ ರಾಜಕಾರಣದಲ್ಲಿ ಸಾಮಾನ್ಯ ಮಹಿಳೆಗೆ ಕಾಲೂರಲೂ ಅವಕಾಶವಿರಲಿಲ್ಲ.

ಕಾಂಗ್ರೆಸ್ಸಿನಲ್ಲಿ ಸರ್ವೋಚ್ಚ ಪ್ರಧಾನಿ ಸ್ಥಾನ, ಸಂಘಟನೆಯ ಅಧ್ಯಕ್ಷೆ ಸ್ಥಾನ ಒಂದು ಕುಟುಂಬಕ್ಕೆ ಮೀಸಲು, ಹಾಗಾಗಿ ನಾನು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಎಲ್ಲ ಅಡೆತಡೆಗಳನ್ನೂ ಮೆಟ್ಟಿ ನಿಂತು, ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಬಂದು, ಟಿಕೆಟ್ ಪಡೆದು, ಗೆದ್ದು, ಸ್ವಂತ ಪರಿಶ್ರಮದಿಂದ ಬೆಳೆದು ಅತ್ಯುನ್ನತ ಪದವಿಗಳನ್ನು ಅಲಂಕರಿಸಿದ ಸುಷ್ಮಾ ಸ್ವರಾಜ್, ಉಮಾ ಭಾರತಿ, ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ, ಸುಮಿತ್ರಾ ಮಹಾಜನ್, ಮೋಟಮ್ಮ ರಂಥ ಅನೇಕ ಮಹಿಳೆಯರ ಸಾಧನೆಯನ್ನು ನೋಡಿದಾಗ ಮನಸ್ಸು, ಹೃದಯಗಳು ತುಂಬಿ ಬರುತ್ತವೆ.

ಸಂವಿಧಾನದ 73ನೇ ತಿದ್ದುಪಡಿ ಮೂಲಕ ಪಿ.ವಿ.ನರಸಿಂಹ ರಾಯರು ಪ್ರಧಾನಿಯಾಗಿದ್ದ ಕಾಲದಲ್ಲಿ 33% ಮಹಿಳಾ ಮೀಸಲಾತಿಯನ್ನು ಪಂಚಾಯತಿಗಳಲ್ಲಿ/ಸ್ಥಳೀಯ ಸಂಸ್ಥೆಗಳಾದ ನಗರ-ಪುರ ಸಭೆಗಳಲ್ಲಿ 1992ರಲ್ಲಿ ಜಾರಿಗೊಳಿಸಲಾಯಿತು. ಸಾಮಾನ್ಯ ಮಹಿಳೆಯರ ಪಾಲಿಗೆ ಭಾಗ್ಯದ ಬಾಗಿಲೇ ತೆರೆದಂತಾಯಿತು. ಅಲ್ಲಿಯವರೆಗೆ, ಹೆಂಡತಿಯನ್ನು ಕಸಕ್ಕಿಂತ ಕೀಳಾಗಿ ನೋಡುತ್ತಿದ್ದ ಗಂಡ, ಓದು- ಬರಹ ಗೊತ್ತಿಲ್ಲದ ಗ್ರಾಪಂ ಅಧ್ಯಕ್ಷೆ-ಹೆಂಡತಿಯ ಬಳಿ ಸಹಿ ಪಡೆದೇ ಪಾಸ್ಪೋರ್ಟ್ ಮಾಡಿಸಿಕೊಳ್ಳುವ ವಿನೋದ ಪ್ರಸಂಗದಂಥವು ಹಲವು ನಡೆದು ಹೋದವು. ಮೊನ್ನೆಯ ಭಾಷಣದಲ್ಲಿ ಪ್ರಧಾನಿಗಳು ಉಲ್ಲೇಖಿಸಿದ ಗುಜರಾತಿನ ಪ್ರಸಂಗ ಅದರಲ್ಲಿ ಅತಿ ವಿನೋದದ್ದು. ಒಂದು ಗ್ರಾಪಂನಲ್ಲಿನ 13 ಸ್ಥಾನಗಳನ್ನೂ ಪುರುಷರು ಸ್ಪರ್ಧೆಯೇ ಮಾಡದೆ ಮಹಿಳೆಯರಿಗೆ ಬಿಟ್ಟುಕೊಟ್ಟಿದ್ದಾರೆ. ಆ ಎಲ್ಲ ಮಹಿಳೆಯರು ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ಅವರನ್ನು ಕಾಣಲು ಬಂದಾಗ, ಎಲ್ಲರಂತೆ ಇವರೂ ಅನುದಾನಕ್ಕೆ ಬಂದಿರುವುದೆಂದುಕೊಂಡು ಏನು ಬೇಕು ಎಂದರಂತೆ ಮೋದಿ. ನಮಗೇನೂ ಬೇಡ. ನಿಮ್ಮನ್ನು ಕಾಣುವ ಆಸೆಯಷ್ಟೆ ಎಂದು ಉತ್ತರ ಕೊಟ್ಟರಂತೆ ಸದಸ್ಯೆಯರು. ಶಾಲೆ, ರಸ್ತೆ, ಕಾರ್ಖಾನೆಯಂಥ ಯಾವುದನ್ನೋ ತರುತ್ತೇವೆ ಎನ್ನುತ್ತಾರೆ ಅಂದುಕೊಂಡು, ಹೇಗೆ ಹಳ್ಳಿಯನ್ನು ಸುಧಾರಿಸುತ್ತೀರಾ? ನಿಮ್ಮ ಯೋಜನೆ ಏನು ಎಂದಾಗ, ನಮ್ಮ ಹಳ್ಳಿಯಲ್ಲಿ ಒಬ್ಬರೂ ಬಡವರಾಗಿ ಉಳಿಯಬಾರದು. ಅದೇ ನಮ್ಮ ಧ್ಯೇಯ ಎಂದರಂತೆ. ಭುವನದ ಯಾವ ಆರ್ಥಿಕ ತಜ್ಞನೂ ನೀಡಲಾರದ ಸರಳ ಉತ್ತರವನ್ನು ಹೈಸ್ಕೂಲ್‌ ದಾಟದ ತಾಯಿಯೊಬ್ಬರು ಕೊಟ್ಟರು. ಆಕೆಯ ಉತ್ತರ ಮಹಿಳೆಯರ ಸಾಮರ್ಥ್ಯದ ಮತ್ತೊಂದು ಆಯಾಮ ತೆರೆದಿಟ್ಟಿತು ಎಂದು ಪ್ರಧಾನಿಗಳು ಸ್ಮರಿಸಿಕೊಂಡರು.

ಸ್ತ್ರೀಯರಿಗೆ ಮೀಸಲಾತಿ ಕೊಟ್ಟರೆ ಹೆಂಡತಿಯನ್ನು ಮುಂದೆ ನಿಲ್ಲಿಸಿ ಪುರುಷರೇ ಆಡಳಿತ ಮಾಡುತ್ತಾರೆಂಬ ಅಪಸ್ವರ ಪಂಚಾಯತಿಗಳಲ್ಲಿ ಮೀಸಲಾತಿ ಬಂದಾಗಲೂ ಎದ್ದಿತ್ತು. ಆದರೆ ಕ್ರಮೇಣ ಹೆಚ್ಚು ಓದದ, ಅನುಕೂಲಸ್ಥರಲ್ಲದ, ಸಾಮಾನ್ಯರಿಗೂ ಅಧಿಕಾರ ಸಿಗತೊಡಗಿ, ಇಂದು ಹಲವು ಮಹಿಳಾ ಅಧ್ಯಕ್ಷರು, ಮೇಯರುಗಳು ಆಡಳಿತಾತ್ಮಕವಾಗಿ ಅದ್ಭುತಗಳನ್ನು ಜರುಗಿಸಿ ತೋರಿಸಿದ್ದಾರೆ.

ಮಹಿಳೆಯರ ನಾಯಕತ್ವದಲ್ಲಿ ಅಭಿವೃದ್ಧಿ:

ಕರ್ನಾಟದ ಮಟ್ಟಿಗೆ ಮಹಿಳೆಯರಿಗಿದ್ದ ಶೇ.33 ಮೀಸಲಾತಿಯನ್ನು ಶೇ.50ಕ್ಕೆ ಏರಿಸಿದ ಕೀರ್ತಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೇರುತ್ತದೆ. ಆ ಪ್ರಯುಕ್ತ ಅನೇಕ ಮಹಿಳೆಯರು, ಬೆಂಗಳೂರು ಸಮೇತವಾಗಿ ನಗರಗಳಲ್ಲಿ ಮಹಾಪೌರರು, ಜಿಲ್ಲಾ-ತಾಲೂಕು-ಗ್ರಾಪಂ ಆದಿಯಾಗಿ ಅಧ್ಯಕ್ಷರಾಗುವ ಭಾಗ್ಯ ಪಡೆದಿದ್ದಾರೆ.

Women’s development-ಮಹಿಳೆಯರ ಅಭಿವೃದ್ಧಿ ಮಾತ್ರವಲ್ಲ, Women led development-ಮಹಿಳೆಯರ ನಾಯಕತ್ವದಲ್ಲಿ ಅಭಿವೃದ್ಧಿ ಎನ್ನುವುದು ಮೋದಿಯವರ ಮಂತ್ರ. 2047ರ ವಿಕಸಿತ ಭಾರತದಲ್ಲಿ ಮಹಿಳೆಯರು ಪ್ರಧಾನ ಭೂಮಿಕೆ ವಹಿಸಬೇಕೆಂಬುದು ಅವರ ದೂರದೃಷ್ಟಿ.

ಯಾವ ರೀತಿ ಭಾರತೀಯ ಮಹಿಳೆ ಮನೆಯಲ್ಲಿ ತನ್ನ ಆತ್ಮಗೌರವ ಉಳಿಸುವ ಶೌಚಾಲಯಕ್ಕಾಗಿ, ಹೊಗೆಯಿಂದ ಮುಕ್ತಿ ಪಡೆಯಲು ಉಜ್ವಲಾ ಗ್ಯಾಸಿಗಾಗಿ, ನಲ್ಲಿ ನೀರಿಗಾಗಿ, ತನ್ನ ಹೆಸರಿನಲ್ಲಿ ಸರ್ಕಾರಿ ಮನೆಗಾಗಿ, ತ್ರಿವಳಿ ತಲಾಕಿನಿಂದ ಮುಕ್ತಿ ಪಡೆಯಲು, ಜಮ್ಮು ಕಾಶ್ಮೀರದ ಮಹಿಳೆಯಾಗಿ ಹೊರ ರಾಜ್ಯದವರನ್ನು ಮದುವೆಯಾದರೂ ಆಸ್ತಿಯಲ್ಲಿ ಹಕ್ಕು ಪಡೆಯಲು, ಬ್ಯಾಂಕ್ ಖಾತೆ ಪಡೆಯಲು ಜನ್ ಧನ್‌ಗಾಗಿ, ಷ್ಯೂರಿಟಿ ಇಲ್ಲದೆ ಸಾಲ ಪಡೆಯಲು ಮುದ್ರಾಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 5 ಲಕ್ಷ ರು.ವರೆಗಿನ ಆಯುಷ್ಮಾನ್ ಭಾರತ್‌ಗಾಗಿ, ಸ್ಟಾರ್ಟ್ ಅಪ್ ಶುರು ಮಾಡಲು, ಸೈನಿಕ ಶಾಲೆಯಲ್ಲಿ ಭರ್ತಿಯಾಗಲು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪ್ರವೇಶ ಪಡೆಯಲು, ರಾಷ್ಟ್ರದ ಹೆಮ್ಮೆಯ ರಿಪಬ್ಲಿಕ್ ಡೇ ಪರೇಡ್‌ ಮುನ್ನಡೆಸಲು, ಫಾಸ್ಟ್ ಟ್ರ್ಯಾಕ್ ಕೋರ್ಟುಗಳಿಂದ ನ್ಯಾಯ ಪಡೆಯಲು, ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಗುವವರನ್ನು ಗಲ್ಲಿಗೇರಿಸಲು, ಈ ರಾಷ್ಟ್ರದ ವಿದೇಶಾಂಗ, ರಕ್ಷಣಾ, ವಿತ್ತ ಮಂತ್ರಿಯಾಗಲು…ನರೇಂದ್ರಮೋದಿ ಎಂಬ ಯುಗಪುರುಷನಿಗಾಗಿ ಕಾಯಬೇಕಾಯಿತೋ…ಅಂತೆಯೇ ಇಂದು ವಿಧಾನಸಭೆ, ಸಂಸತ್ ಸಭೆಯಲ್ಲಿ ಶೇ.33ರ ಮಹಿಳಾ ಮೀಸಲಾತಿ ಪಡೆಯಲೂ ಮೋದಿ ಅವರಿಗಾಗಿಯೇ ಕಾಯಬೇಕಾಯಿತು.

2023ರಲ್ಲೇ ಈ ಐತಿಹಾಸಿಕ ಕಾಯ್ದೆ ಜಾರಿಯಾಗಿದ್ದರೂ ಅದರಲ್ಲಿನ ಒಂದು ಷರತ್ತು ನಮ್ಮನ್ನು ಹಿಮ್ಮೆಟ್ಟಿಸುವ ಸಾಧ್ಯತೆ ಇತ್ತು. 2011ರ ನಂತರ 2021ರಲ್ಲಿ ಜನಗಣತಿ ಆಗಿಲ್ಲ, ಆಗಬೇಕು. ಆಗ ಸಹಜವಾಗಿಯೇ ಹೆಚ್ಚಿದ ಜನಸಂಖ್ಯೆ ಪ್ರಕಾರ ಕ್ಷೇತ್ರಗಳ ಮರುವಿಂಗಡನೆ ಆಗುತ್ತದೆ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಹೆಚ್ಚುವ ವೇಗ ಉತ್ತರಕ್ಕಿಂತ ಕಡಿಮೆ. ಅದರ ಪ್ರಕಾರ, ಸಂಸತ್ತಿನಲ್ಲಿ ನಮ್ಮ ಸೀಟುಗಳು ಕಡಿಮೆ ಹೆಚ್ಚಳ ಆಗುತ್ತವೆ. ನಾವು ಜನಸಂಖ್ಯೆ ನಿಯಂತ್ರಿಸಿದ್ದಕ್ಕೆ ಅನ್ಯಾಯ ಸಹಿಸಿಕೊಳ್ಳಬೇಕೇ ಎಂದು ದಕ್ಷಿಣದ ರಾಜ್ಯಗಳು ಕೋರ್ಟಿಗೆ ಹೋದರೆ, ನಿಮ್ಮ ಶೇ.33ರ ಕನಸು ಕನಸಾಗಿಯೇ ಉಳಿಯುತ್ತದೆ ಎಂದು ಹಲವರು ನಮ್ಮನ್ನು ಹಂಗಿಸಿದರು. ಎಂದಿನಂತೆ ಮೋದಿ ಅದಕ್ಕೂ ಉತ್ತರವನ್ನು ಹುಡುಕಿ ಮಹಿಳೆಯರ ಅಧಿಕಾರವನ್ನು ಅವರಿಗೆ ಕೊಡಿಸುತ್ತಿದ್ದಾರೆ.

ಮೀಸಲಾತಿ ಒಮ್ಮೆ ಬಂದಮೇಲೆ, ಒಳಮೀಸಲಾತಿಯೂ ಬಂದೇ ಬರುತ್ತದೆಂಬ ಭರವಸೆಯಿದೆ. ಯಾವ ರಾಜಕಾರಣಿ/ರಾಜಕೀಯ ಪಕ್ಷವೂ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಅಪಸ್ವರವೆತ್ತದೆ ಸರ್ವ ಸಮ್ಮತಿಯೊಂದಿಗೆ ಈ ಕೆಲಸ ನೆರವೇರಲಿ ಎಂಬುದು ಮಹಿಳಾ ರಾಜಕಾರಣಿಯಾಗಿ ನನ್ನ ಆಶಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿಂದಿಗೆ ಅಂಕ: ಆದೇಶ ಮರು ಪರಿಶೀಲಿಸಲು ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಕೆ
ವಿದ್ಯುತ್ ದರ ಮತ್ತೆ ಹೆಚ್ಚಳ: ಬೆಸ್ಕಾಂ ಪ್ರತಿ ಯುನಿಟ್‌ಗೆ 56 ಪೈಸೆ, ಸೆಸ್ಕ್‌ನಿಂದ 15 ಪೈಸೆ ಏರಿಕೆ