ತಮಿಳುನಾಡು, ಬಿಹಾರ ಬಳಿಕ ಇದೀಗ ರಾಜ್ಯಕ್ಕೆ ಕಾಲಿಟ್ಟ ಹಕ್ಕಿಜ್ವರ, 7444 ಕೋಳಿ ನಾಶ!

Kannadaprabha News   | Kannada Prabha
Published : Apr 18, 2026, 07:25 AM IST
After Tamil Nadu and Bihar Bird Flu enters the State 7 444 chickens culled

ಸಾರಾಂಶ

ಬೆಂಗಳೂರಿನ ಹೆಸರಘಟ್ಟದ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ (ಹಕ್ಕಿ ಜ್ವರ) ಪತ್ತೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, 7,444 ಕೋಳಿಗಳನ್ನು ನಾಶಪಡಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಗಾವಲು ಇರಿಸಲಾಗಿದೆ. ಇದು ಈ ವರ್ಷ ರಾಜ್ಯದಲ್ಲಿ ವರದಿಯಾದ ಮೊದಲ ಹಕ್ಕಿ ಜ್ವರ ಪ್ರಕರಣವಾಗಿದೆ.

ಬೆಂಗಳೂರು (ಏ.18) ತಮಿಳುನಾಡು, ಬಿಹಾರ ಬಳಿಕ ಇದೀಗ ಕರ್ನಾಟಕದಲ್ಲೂ ಹಕ್ಕಿ ಜ್ವರದ ಆತಂಕ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಹೆರಸಘಟ್ಟದ ಪೌಲ್ಟ್ರಿ ಫಾರಂನಲ್ಲಿ ಕೋಳಿಗಳಿಗೆ H5 N1 ವೈರಸ್ (ಹಕ್ಕಿ ಜ್ವರ) ಬಾಧೆ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 7,444 ಕೋಳಿಗಳ ನಾಶ ಮಾಡಲಾಗಿದೆ. ಇದು ರಾಜ್ಯದಲ್ಲಿ ಈ ವರ್ಷ ಪತ್ತೆಯಾಗಿರುವ ಮೊದಲ ಹಕ್ಕಿಜ್ವರ ಪ್ರಕರಣವಾಗಿದೆ.

ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪೌಲ್ಟ್ರಿ ಫಾರಂನ ಕೋಳಿಗಳಲ್ಲಿ ಮೊದಲ ತಪಾಸಣೆಯಲ್ಲೇ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಆದ್ದರಿಂದ ಅಲ್ಲಿದ್ದ 7,444 ಕೋಳಿಗಳನ್ನು ಗುಂಡಿ ತೆಗೆದು ಹೂಳಲಾಗಿದೆ. ಅಷ್ಟೇ ಅಲ್ಲ, 10 ಕೋಳಿ ಸಾಕಾಣೆಗಾರರನ್ನು ಕ್ವಾರಂಟೈನ್ ಮಾಡಲಾಗಿದೆ. ಬಿಸಿಲಿನ ತಾಪದಿಂದಾಗಿ ಬೇಸಿಗೆಯಲ್ಲಿ ಹಕ್ಕಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಹಕ್ಕಿಗಳಿಂದ ಕೋಳಿಗಳಿಗೂ ಜ್ವರ ಹಬ್ಬಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಏ.14 ರಂದು ಹೆಸರಘಟ್ಟದ ಮುತ್ಕೂರು ಗ್ರಾಮದಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಬಳಿಕ ಕ್ಷಿಪ್ರ ಕಾರ್ಯಪಡೆ ತಂಡ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. 7,444 ಕೋಳಿ, 14,788 ಮೊಟ್ಟೆ, 2250 ಕೆಜಿ ಪೌಲ್ಟ್ರಿ ಆಹಾರ, ಕೋಳಿ ತ್ಯಾಜ್ಯವನ್ನು ಏ.15 ರಂದು ಪಶು ಸಂಗೋಪನಾ ಇಲಾಖೆಯು ನಿಯಮಾನುಸಾರ ವಿಲೇವಾರಿ ಮಾಡಿತ್ತು.

ಅಗತ್ಯ ಮುನ್ನೆಚ್ಚರಿಕೆ:

ಈ ಬಗ್ಗೆ ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕ ಡಾ.ಪಿ.ಶ್ರೀನಿವಾಸ್‌, ‘ಹೆಸರಘಟ್ಟದ ಪೌಲ್ಟ್ರಿ ಫಾರಂನಲ್ಲಿ ಹಕ್ಕಿಜ್ವರ ಖಚಿತವಾಗಿದ್ದು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. 7,444 ಕೋಳಿ ಮತ್ತು ಕೋಳಿ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಬಾಧಿತ ಪೌಲ್ಟ್ರಿ ಫಾರಂ ಬಯಲು ಪ್ರದೇಶದಲ್ಲಿದ್ದು ಒಂದು ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಹಳ್ಳಿಗಳಿಲ್ಲ. ಆದ್ದರಿಂದ ಹಳ್ಳಿಗಳು ಅಥವಾ ಪೌಲ್ಟ್ರಿ ಫಾರಂಗಳಿಗೆ ತೆರಳಿ ಕೋಳಿಗಳನ್ನು ನಾಶ ಮಾಡುವ ಅಗತ್ಯವಿಲ್ಲ. 1 ರಿಂದ 10 ಕಿ.ಮೀ. ವ್ಯಾಪ್ತಿಯೊಳಗೆ ಕಣ್ಗಾವಲು ಪ್ರದೇಶ ಎಂದು ಗುರುತಿಸಲಿದ್ದು 15 ದಿನಗಳಿಗೊಮ್ಮೆ ರ್‍ಯಾಂಡಮ್‌ ಆಗಿ ಪರೀಕ್ಷೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಎಲ್ಲೆಲ್ಲಿ ನಾಟಿ ಕೋಳಿಗಳು, ಫಾರಂ ಕೋಳಿಗಳು, ಎಲ್ಲೆಲ್ಲಿ ಖಾಸಗಿ ಫಾರಂಗಳಿವೆಯೋ ಅಲ್ಲಿಗೆ ತೆರಳಿ ಸ್ಯಾಂಪಲ್‌ ಸಂಗ್ರಹಿಸಲಾಗುವುದು. ಅದನ್ನು 15 ದಿನಗಳಿಗೊಮ್ಮೆ ಸತತವಾಗಿ ಎರಡು ತಿಂಗಳು ಭೂಪಾಲ್‌ನಲ್ಲಿರುವ ಲ್ಯಾಬ್‌ಗೆ ಪರೀಕ್ಷೆ ನಡೆಸಲು ಕಳುಹಿಸುತ್ತೇವೆ. ನೆಗೆಟಿವ್‌ ಬಂದರೆ ನೆಗೆಟಿವ್‌ ಎಂದು ಘೋಷಣೆ ಮಾಡುತ್ತೇವೆ’ ಎಂದು ತಿಳಿಸಿದರು.

54 ಚಿಕನ್‌ ಸೆಂಟರ್‌, 36 ಹಳ್ಳಿ ಗುರುತು:

ಬಾಧಿತ ಪ್ರದೇಶದ ಸುತ್ತಮುತ್ತ 54 ಚಿಕನ್‌ ಸೆಂಟರ್‌, 36 ಹಳ್ಳಿಗಳನ್ನು ಗುರುತಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಪಂಗಳ ಪಿಡಿಓಗಳಿಗೆ ಸೂಚಿಸಲಾಗಿದೆ. ಹೆಸರಘಟ್ಟದಲ್ಲಿ ಕೆರೆ ಇರುವುದರಿಂದ ಹಕ್ಕಿಗಳ ಮೂಲಕ ಜ್ವರ ಬಂದಿದೆ. ಇಲಾಖೆ ಸಚಿವರು. ಆಯುಕ್ತರು, ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಧಾನಿಯಲ್ಲೀಗ ಹೀಟ್‌ ಸ್ಟ್ರೋಕ್‌ ಆತಂಕ; ಬಿಸಿಲಿನ ತಾಪದಿಂದ ತಿಂಗಳೊಳಗೆ 10 ಮಂದಿ ಅಸ್ವಸ್ಥ!
ಯೋಗೇಶ್ ಗೌಡ ಕೊಲೆ ಪ್ರಕರಣ: ಜನಪ್ರತಿನಿಧಿ ಕೋರ್ಟ್ ತೀರ್ಪು, ವಿನಯ್ ಕುಲಕರ್ಣಿಗೆ ಜೀವಾವಧಿ ಎನ್ನುತ್ತಿದ್ದಂತೆ ಗಳಗಳನೆ ಅತ್ತ ಶಾಸಕ