ಆನ್‌ಲೈನ್‌ ಗೇಮ್‌ ಆ್ಯಪ್‌ ವಿರುದ್ಧ ಕೇಂದ್ರ ಕ್ರಮ ಜರುಗಿಸಲಿ: ಸಚಿವ ದಿನೇಶ್‌ ಗುಂಡೂರಾವ್‌

By Kannadaprabha NewsFirst Published Jul 11, 2023, 7:01 AM IST
Highlights

ಯುವ ಸಮುದಾಯ ಆನ್‌ಲೈನ್‌ ಗೇಮ್‌ ಗೀಳಿಗೆ ಬಿದ್ದು, ಉದ್ಯೋಗದ ಬಗ್ಗೆ ಆಸಕ್ತಿ ಕಳೆದುಕೊಂಡು ವೃತ್ತಿ ಜೀವನ ಹಾಳು ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದಿದ್ದು, ಕಲಿಕೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದ ಸಚಿವ ದಿನೇಶ್‌ ಗುಂಡೂರಾವ್‌ 

ವಿಧಾನ ಪರಿಷತ್‌(ಜು.11):  ಡ್ರೀಮ್‌ 11, ಮೈ 11 ಸರ್ಕಲ್‌ ಸೇರಿದಂತೆ ಇತರೆ ಆನ್‌ಲೈನ್‌ ಗೇಮ್‌ ಆ್ಯಪ್‌ಗಳಿಂದ ಯುವ ಸಮುದಾಯ ಆರ್ಥಿಕ ನಷ್ಟ ಅನುಭವಿಸಿ ಮಾನಸಿಕ ತೊಂದರೆಗಳಿಗೆ ಸಿಲುಕುತ್ತಿದೆ. ಇದು ದೇಶವ್ಯಾಪಿ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರ ಸೂಕ್ತ ಕಾನೂನು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮೇಲ್ಮನೆಯಲ್ಲಿ ಸೋಮವಾರ ಬಿಜೆಪಿ ಸದಸ್ಯ ಡಿ.ಎಸ್‌.ಅರುಣ್‌ ಪ್ರಸ್ತಾಪಿಸಿದ ವಿಚಾರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಪರವಾಗಿ ಉತ್ತರಿಸಿದ ದಿನೇಶ್‌, ಯುವ ಸಮುದಾಯ ಆನ್‌ಲೈನ್‌ ಗೇಮ್‌ ಗೀಳಿಗೆ ಬಿದ್ದು, ಉದ್ಯೋಗದ ಬಗ್ಗೆ ಆಸಕ್ತಿ ಕಳೆದುಕೊಂಡು ವೃತ್ತಿ ಜೀವನ ಹಾಳು ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದಿದ್ದು, ಕಲಿಕೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಆನ್‌ಲೈನ್‌ ರಮ್ಮಿ ಆಟ: ಅರುಣ್‌ ಕುಮಾರ್‌ ಹೇಳಿದ್ದೇನು?

ಇನ್ನು ಆನ್‌ಲೈನ್‌ ಲೋನ್‌ ಆ್ಯಪ್‌ಗಳಿಂದ ಸಾರ್ವಜನಿಕರು ಮಾನಸಿಕ ಕಿರುಕುಳ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಆ್ಯಪ್‌ಗಳಿಂದ ವಂಚನೆಗೆ ಒಳಗಾಗದಂತೆ ಸೋಷಿಯಲ್‌ ಮೀಡಿಯಾ, ಮಾಧ್ಯಮಗಳ ಮೂಲಕ ಪೊಲೀಸ್‌ ಇಲಾಖೆ ಸೈಬರ್‌ ಜಾಗೃತಿ ಮೂಡಿಸುತ್ತಿದೆ. ಅಂತೆಯೇ 42 ಸಾಲ ಆ್ಯಪ್‌ಗಳನ್ನು ರದ್ದುಗೊಳಿಸಲಾಗಿದೆ. ಈ ಆನ್‌ಲೈನ್‌ ಗೇಮ್‌ ಆ್ಯಪ್‌ ಹಾಗೂ ಆನ್‌ಲೈನ್‌ ಸಾಲದ ಆ್ಯಪ್‌ಗಳಿಂದ ದೇಶವ್ಯಾಪಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯದಲ್ಲಿ ಸೂಕ್ತ ಕ್ರಮಕ್ಕೆ ಗೃಹ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.

click me!