
ಬೆಂಗಳೂರು (ಜ.19): ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’(ಎನ್‌ಎಲ್‌ಎಸ್‌ಐಯು) ಪ್ರವೇಶಾತಿಯಲ್ಲಿ ಕಾಯ್ದೆ ಪ್ರಕಾರ ಸ್ಥಳೀಯ ಮೀಸಲಾತಿಯಡಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ನೀಡದಿರುವುದನ್ನು ಖಂಡಿಸಿ ಜ.21ಕ್ಕೆ ವಿವಿಯ ಕುಲಪತಿ ಕಚೇರಿಗೆ ವಿವಿಧ ಸಂಘಟನೆಗಳೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ.
ನಮ್ಮ ನೆಲ-ಜಲ ಬಳಸಿಕೊಂಡು ಇದೀಗ ನಿಯಮಗಳನ್ವಯ ರಾಜ್ಯದ ಮಕ್ಕಳಿಗೆ ಕಳೆದ ಎರಡು ವರ್ಷದಿಂದ ಎಲ್‌ಎಎಲ್‌ಬಿ ಪ್ರವೇಶ ಕಲ್ಪಿಸದೇ ಅನ್ಯಾಯ ಮಾಡಲಾಗುತ್ತಿದೆ. ಆದ್ದರಿಂದ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಎನ್‌ಎಲ್‌ಎಸ್‌ಐಯು ಕುಲಪತಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ವಕೀಲರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕ ಸಂಘಟನೆಗಳು ಈ ಹೋರಾಟದಲ್ಲಿ ಭಾಗವಹಿಸಲಿವೆ. ಕನ್ನಡದ ಎಲ್ಲ ಮನಸ್ಸುಗಳೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನ್ಯಾಷನಲ್ ಲಾ ಸ್ಕೂಲ್ ಕಾಯ್ದೆ ಪ್ರಕಾರ ಸ್ಥಳೀಯ ಮೀಸಲಾತಿಯಡಿ ಶೇ.25ರಷ್ಟನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಆದರೆ, ಕೆಲ ವರ್ಷಗಳಿಂದ ಈ ನೀತಿಯನ್ನು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಅವರು, ಕುಲಪತಿ ಪ್ರೊ.ಸುಧೀರ್ ಕೃಷ್ಣ ಅವರಿಗೆ ಪತ್ರ ಬರೆದು ಪ್ರಸ್ತುತ ಪ್ರವೇಶ ಆರಂಭವಾಗಿರುವ 2023-24 ನೇ ಸಾಲಿನಲ್ಲಿ ನಿಯಮಾನುಸಾರ ಶೇ.25ರಷ್ಟನ್ನು ರಾಜ್ಯದ ವಿದ್ಯಾರ್ಥಿಗಳಿಗೆ ನೀಡುವಂತೆ ಸೂಚಿಸಿದ್ದರು.
ಬಿಪಿಎಲ್‌ಗೆ 10 ಕೇಜಿ ಉಚಿತ ಅಕ್ಕಿ: ಕಾಂಗ್ರೆಸ್ ಪಕ್ಷದ 3ನೇ ಭರವಸೆ
ಅಲ್ಲದೆ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೂ ಸಹ ಕುಲಪತಿಗೆ ಪತ್ರ ಬರೆದು, ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶೇ.25ರ ಸ್ಥಳೀಯ ಮೀಸಲಾತಿ ನೀಡದೇ ಅಖಿಲ ಭಾರತ ಕೋಟಾದಡಿ ಮೆರಿಟ್ ಮೇಲೆ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನೇ ಈ ಮೀಸಲಾತಿ ವ್ಯಾಪ್ತಿಗೆ ತರುತ್ತಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ವಕೀಲರ ಸಂಘಟನೆಗಳು, ಕನ್ನಡಪರ ಸಂಘಟನೆಗಳೂ ಇದನ್ನು ಗಂಭಿರವಾಗಿ ಪರಿಗಣಿಸಿ ಹೋರಾಟ ರೂಪಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ