ಬೆಂಗ್ಳೂರಿಂದ ಸೋಮವಾರ ಲಕ್ಷಾಂತರ ಜನ ಗುಳೆ!

Published : Jul 14, 2020, 07:33 AM ISTUpdated : Jul 14, 2020, 08:55 AM IST
ಬೆಂಗ್ಳೂರಿಂದ ಸೋಮವಾರ ಲಕ್ಷಾಂತರ ಜನ ಗುಳೆ!

ಸಾರಾಂಶ

ನಿನ್ನೆ ಬೆಂಗ್ಳೂರಿಂದ ಲಕ್ಷಾಂತರ ಜನ ಗುಳೆ!| ಲಾಕ್‌ಡೌನ್‌ಗೆ ಬೆಚ್ಚಿದ ಬಡ, ಕೆಳಮಧ್ಯಮ ವರ್ಗ - ಮನೆ ಖಾಲಿ ಮಾಡಿ ಸಿಕ್ಕಸಿಕ್ಕ ವಾಹನದಲ್ಲಿ ಊರಿಗೆ| ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ - ಇಂದೂ ಭಾರಿ ಪ್ರಮಾಣದಲ್ಲಿ ವಲಸೆ ಸಾಧ್ಯತೆ

ಬೆಂಗಳೂರು(ಜು.14): ರಾಜ್ಯ ಸರ್ಕಾರ ಮಂಗಳವಾರದಿಂದ ಲಾಕ್‌ಡೌನ್‌ ಘೋಷಿಸಿರುವುದರಿಂದ ಬೆಂಗಳೂರಿನಿಂದ ಹಳ್ಳಿಗಳ ಕಡೆಗೆ ಮತ್ತೊಂದು ದುರ್ಭರ ವಲಸೆ ಸೋಮವಾರ ಆರಂಭಗೊಂಡಿದೆ. ನಗರದ ಬದುಕಿನ ಹೊರೆ ಹೊರಲಾಗದ ಹಾಗೂ ಕೊರೋನಾ ಭೀತಿಯಿಂದ ಕಂಗೆಟ್ಟಬಡ ಹಾಗೂ ಕೆಳ ಮಧ್ಯಮ ವರ್ಗದ ಲಕ್ಷಾಂತರ ಜನರು ಸೋಮವಾರ ನಗರವನ್ನು ಬಿಟ್ಟು ತಮ್ಮ ಊರಿಗೆ ದೌಡಾಯಿಸಿದ್ದಾರೆ.

ರವಿವಾರದ ಲಾಕ್‌ಡೌನ್‌ ಮುಗಿಯುತ್ತಿದ್ದುದನ್ನೇ ಕಾಯುತ್ತಿದ್ದರೇನೋ ಎಂಬಂತೆ ಸೋಮವಾರ ಬೆಳ್ಳಂಬೆಳಗ್ಗೆಯೇ ವಲಸೆ ಆರಂಭಗೊಂಡಿದ್ದು, ಲಕ್ಷಾಂತರ ಜನರು ಮನೆ ಖಾಲಿ ಮಾಡಿಕೊಂಡು ಪಾತ್ರೆ ಪಡಗಗಳೊಂದಿಗೆ ಉದ್ಯಾನ ನಗರಿಯನ್ನು ತೊರೆದರು. ಬೆಂಗಳೂರನ್ನು ತೊರೆದವರ ಪೈಕಿ ಮೈಸೂರು, ಚಾಮರಾಜನಗರ, ಕೋಲಾರ ಭಾಗದ ಜನರು ಹಾಗೂ ಉತ್ತರ ಕರ್ನಾಟಕ ಭಾಗದವರು ಹೆಚ್ಚಿದ್ದರು. ವಾಸ್ತವವಾಗಿ ಕಳೆದ ಹದಿನೈದು ದಿನಗಳಿಂದಲೂ ಜನ ನಗರದಿಂದ ಹಳ್ಳಿಗಳತ್ತ ತೆರಳುತ್ತಿದ್ದಾರೆ. ಆದರೆ, ಸೋಮವಾರ ಈ ವಲಸೆ ಜನ ಪ್ರವಾಹದ ರೂಪ ಪಡೆದಿತ್ತು.

ಪರೀಕ್ಷೆ ಮಾಡಿಸದೆ ಗ್ರಾಮಕ್ಕೆ ಬಂದ್ರೆ 25000 ರೂ ದಂಡ!

ರಾಜ್ಯ ಸರ್ಕಾರ ಒಂದೆಡೆ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಜನರು ನಗರ ತೊರೆಯದಂತೆ ಮನವಿ ಮಾಡುತ್ತಿದೆ. ಮತ್ತೊಂದೆಡೆ ಕೆಲ ಸಚಿವರು ಒಂದು ವಾರ ನಗರವನ್ನು ಲಾಕ್‌ಡೌನ್‌ ಮಾಡುವುದರಿಂದ ಊರುಗಳಿಗೆ ತೆರಳುವವರು ಈಗಲೇ ಹೋಗಬಹುದು ಎಂಬ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಹಾಗೂ ಸಚಿವರ ಹೇಳಿಕೆಗಳಿಂದ ಗೊಂದಲಕ್ಕೆ ಸಿಲುಕಿದ ಜನರು, ದೃಢ ನಿರ್ಧಾರ ಮಾಡಿ ಧಾವಂತದಲ್ಲೇ ಹಳ್ಳಿಗಳ ಕಡೆಗೆ ಸಾಗಿದರು.

ಹೆದ್ದಾರಿಗಳಲ್ಲಿ ಟ್ರಾಫಿಕ್‌ ಜಾಮ್‌:

ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌, ಟ್ರಕ್‌, ಆಟೋ, ಕ್ಯಾಂಟರ್‌, ಲಾರಿ, ಟೆಂಪೋ ಸೇರಿದಂತೆ ಸಿಕ್ಕ ವಾಹನಗಳಲ್ಲಿ ಪೀಠೋಪಕರಣ, ಗೃಹ ಬಳಕೆ ವಸ್ತುಗಳು, ಸೈಕಲ್‌, ಬಟ್ಟೆಸೇರಿದಂತೆ ಸರಕು ತುಂಬಿಕೊಂಡು ಹಳ್ಳಿಗಳಿಗೆ ಜನರು ತೆರಳಿದರು. ಒಮ್ಮೆ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು-ತುಮಕೂರು, ಬೆಂಗಳೂರು-ಬಳ್ಳಾರಿ, ಬೆಂಗಳೂರು-ಮೈಸೂರು, ಬೆಂಗಳೂರು-ಹೊಸೂರು ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿತ್ತು. ಟೋಲ್‌ ಕೇಂದ್ರಗಳ ಬಳಿ ದಟ್ಟಣೆ ಉಂಟಾಗಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿನಿಂತಿದ್ದವು. ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದ ಪರಿಣಾಮ ಸವಾರರು ಹಾಗೂ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು.

ಕರ್ನಾಟಕದಲ್ಲಿ ಕೊರೋನಾ ಆಗಸ್ಟ್‌ನಲ್ಲಿ ತಾರಕಕ್ಕೆ, ಬಳಿಕ ಇಳಿಮುಖ: ವರದಿ

ಟೋಲ್‌ ಫ್ರೀ ಸಂಚಾರ:

ಮುಂಜಾನೆಯಿಂದಲೇ ನೂರಾರು ವಾಹನಗಳು ಸಾಲುಗಟ್ಟಿನಿಂತಿದ್ದ ಪರಿಣಾಮ ಟೋಲ್‌ ಕೇಂದ್ರಗಳಲ್ಲಿ ಶುಲ್ಕ ಸಂಗ್ರಹ ವಿಳಂಬವಾಯಿತು. ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದ ಪರಿಣಾಮ ಸವಾರರು ಟೋಲ್‌ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಮುಂದಾದರು. ಸಂಚಾರ ಪೊಲೀಸರಿಗೆ ಸಂಚಾರ ನಿರ್ವಹಿಸುವುದು ಕಠಿಣವಾದ ಪರಿಣಾಮ ಟೋಲ್‌ ಫ್ರೀ ಸಂಚಾರಕ್ಕೆ ಅವಕಾಶ ನೀಡುವಂತೆ ಟೋಲ್‌ ಕಂಪನಿಯ ಆಡಳಿತ ವರ್ಗವನ್ನುಕೋರಿದರು. ಇದಕ್ಕೆ ಆಡಳಿತ ಮಂಡಳಿ ಒಪ್ಪಿ ಟೋಲ್‌ ಫ್ರೀ ಸಂಚಾರಕ್ಕೆ ಅವಕಾಶ ನೀಡಿತು. ಹೀಗಾಗಿ ಮಧ್ಯಾಹ್ನದ ಬಳಿಕ ವಾಹನ ಸಂಚಾರ ದಟ್ಟಣೆ ಕೊಂಚ ತಗ್ಗಿತ್ತು.

ಇಂದೂ ಭಾರಿ ವಲಸೆ

ಮಂಗಳವಾರ ರಾತ್ರಿಯಿಂದ ಲಾಕ್‌ಡೌನ್‌ ಜಾರಿಯಾಗುವುದರಿಂದ ಬೆಳಗ್ಗೆಯಿಂದಲೂ ಭಾರೀ ಪ್ರಮಾಣದಲ್ಲಿ ಜನ ನಗರದಿಂದ ಹಳ್ಳಿಗಳತ್ತ ತೆರಳುವ ಸಾಧ್ಯತೆಯಿದೆ. ಬಾಡಿಗೆ ವಾಹನ ದೊರೆಯದ ಕಾರಣವೂ ಸೇರಿದಂತೆ ನಾನಾ ಕಾರಣಗಳಿಂದ ಊರುಗಳಿಗೆ ತೆರಳಲು ಸಾಧ್ಯವಾಗದವರು ಏನಾದರೂ ವ್ಯವಸ್ಥೆ ಮಾಡಿಕೊಂಡು ಮಂಗಳವಾರ ಊರುಗಳಿಗೆ ತೆರಳಲಿದ್ದಾರೆ. ಮಂಗಳವಾರ ತಪ್ಪಿಸಿಕೊಂಡರೆ ಇನ್ನೂ ಒಂದು ವಾರ ನಗರದಲ್ಲಿ ಮನೆಗಳಿಂದ ಆಚೆ ಬರುವಂತಿಲ್ಲ. ಹೀಗಾಗಿ ಮಂಗಳವಾರವೂ ಲಕ್ಷಾಂತರ ಜನರು ಊರು ಬಿಡುವ ಸಾಧ್ಯತೆಯಿದೆ.

ರಾಜ್ಯ ಸರ್ಕಾರ ಮತ್ತೆ ಏಳು ದಿನ ನಗರದಲ್ಲಿ ಲಾಕ್‌ಡೌನ್‌ ಮಾಡುವುದಾಗಿ ಹೇಳಿದೆ. ಈ ಅವಧಿಯಲ್ಲಿ ಕೆಲಸ ಕಾರ್ಯ ಇಲ್ಲದೆ ಏನು ಮಾಡೋದು? ಹಿಂದೆ ಲಾಕ್‌ಡೌನ್‌ ಆದಾಗ ಪಡಬಾರದ ಕಷ್ಟಪಟ್ಟಿದ್ದೇವೆ. ಈಗ ಏಳು ದಿನ ಲಾಕ್‌ಡೌನ್‌ ಅಂತಾರೆ, ನಂತರ ಮತ್ತೆ ಏಳು ದಿನ ಮುಂದುವರಿಸಬಹುದು. ಈ ಲಾಕ್‌ಡೌನ್‌ ಸಹವಾಸವೇ ಬೇಡ ಅಂತ ಊರಿಗೆ ಹೋಗುತ್ತಿದ್ದೇವೆ.

- ಪಕೀರಪ್ಪ ಕಟ್ಟಿಮನಿ, ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಕಾರ್ಮಿಕ

ಈ ಹಿಂದೆ ಲಾಕ್‌ಡೌನ್‌ ಆದಾಗ ಕೆಲಸ ಇಲ್ಲದೆ ಮನೆ ಬಾಡಿಗೆ ಕಟ್ಟಲು ಸಾಲ ಮಾಡಬೇಕಾಗಿತ್ತು. ಈಗ ಸರ್ಕಾರ ಮತ್ತೆ ಲಾಕ್‌ಡೌನ್‌ಗೆ ಮುಂದಾಗಿದೆ. ಬೆಂಗಳೂರಲ್ಲಿ ಕೆಲಸ ಇಲ್ಲದೆ ಬದುಕು ಸಾಗಿಸೋದು ಬಹಳ ಕಷ್ಟ. ಪದೇ ಪದೇ ಲಾಕ್‌ಡೌನ್‌ ಮಾಡುತ್ತಿದ್ದರೆ ಜೀವನ ಕಷ್ಟ. ಕೂಲಿ-ನಾಲಿ ಮಾಡಿಕೊಂಡು ಊರಿನಲ್ಲೇ ಬದುಕ್ತೀವಿ.

- ಬಸನಗೌಡ ಮೇಟಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದ ಕಾರ್ಮಿಕ

ಬೆಂಗಳೂರಲ್ಲಿ ಯಾವಾಗ ಕೊರೋನಾ ಸೋಂಕು ಅಂಟಿಕೊಳ್ಳುತ್ತೋ ಗೊತ್ತಿಲ್ಲ. ಪ್ರಾಣ ಇದ್ದರೆ ಭಿಕ್ಷೆ ಬೇಡಿ ಜೀವನ ಮಾಡಬಹುದು. ಈಗ ಲಾಕ್‌ಡೌನ್‌ ಬೇರೆ ಮಾಡಲು ಹೊರಟಿದ್ದಾರೆ. ಜೀವನ ಸಾಗಿಸೋದು ಕಷ್ಟವಾಗುತ್ತದೆ. ಹೀಗಾಗಿ ಮನೆ ಖಾಲಿ ಮಾಡಿಕೊಂಡು ಊರಿನ ಹಾದಿ ಹಿಡಿದಿದ್ದೇವೆ.

- ದೇವಪ್ಪ ಎಡ್ಡೋಣಿ, ಕೊಪ್ಪಳ ಜಿಲ್ಲೆಯ ಯಲಬುರ್ಗ ಮೂಲದ ಕಾರ್ಮಿಕ

ಈ ಕೊರೋನಾ ಬಂದು ನಮ್ಮಂಥವರು ಬದುಕುವುದೇ ಕಷ್ಟವಾಗಿದೆ. ಮನೆಯಿಂದ ಆಚೆ ಹೋಗೋಕೆ ಭಯ ಆಗುತ್ತಿದೆ. ತಿಂಗಳಿಂದಲೂ ಅಣ್ಣ-ತಮ್ಮಂದಿರು ಊರಿಗೆ ಬಾ ಅಂತಾ ಕರೆಯುತ್ತಿದ್ದಾರೆ. ಏನೋ ಸಿಕ್ಕಿದ ಕೆಲಸ ಮಾಡಿಕೊಂಡು ಊರಲ್ಲೇ ಬದುಕು ಕಟ್ಟಿಕೊಳ್ಳುತ್ತೇವೆ. ಹೀಗಾಗಿ ಹೆಂಡತಿ, ಮಕ್ಕಳೊಂದಿಗೆ ನಮ್ಮೂರಿಗೆ ಹೊರಟಿದ್ದೀನಿ.

- ಪ್ರಕಾಶ್‌, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ಕಾರ್ಮಿಕ

ಹತ್ತು ವರ್ಷದಿಂದ ಪಾನಿಪೂರಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೆ. ಈ ಕೊರೋನಾ ಬಂದು ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಿದೆ. ಮನೆ ಬಾಡಿಗೆ, ಮಕ್ಕಳ ಫೀಜು ಹೊಂದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಊರಿನತ್ತ ಹೊರಟಿದ್ದೇನೆ. ಕೈಯಲ್ಲಿ ಕೆಲಸವಿದೆ. ಊರಲ್ಲಿ ವ್ಯಾಪಾರ ಮುಂದುವರಿಸುತ್ತೇನೆ.

- ಶಶಿಕುಮಾರ್‌, ಹುಣಸೂರು ಮೂಲದ ಪೂನಿಪೂರಿ ವ್ಯಾಪಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!