ಮೀಸಲಿಗಾಗಿ ಕುರುಬರ ಶಕ್ತಿ ಪ್ರದರ್ಶನ: 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ!

By Kannadaprabha News  |  First Published Feb 7, 2021, 7:23 AM IST

ಮೀಸಲಿಗಾಗಿ ಇಂದು ಕುರುಬರ ಶಕ್ತಿ ಪ್ರದರ್ಶನ| ಎಸ್‌ಟಿ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶಕ್ಕೆ ಭಾರೀ ಸಿದ್ಧತೆ| 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ| 5 ಲಕ್ಷಕ್ಕೂ ಹೆಚ್ಚು ಮಂದಿಗೆ ಆಸನ ವ್ಯವಸ್ಥೆ| ಸಮುದಾಯ, ಮಠಾಧೀಶರಿಂದ ಹೋರಾಟಕ್ಕೆ ಬೆಂಬಲ: ಕೆ.ಎಸ್‌.ಈಶ್ವರಪ್ಪ


ಬೆಂಗಳೂರು(ಫೆ,.07): ಕುರುಬ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ (ಎಸ್‌.ಟಿ.) ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ತುಮಕೂರು ರಸ್ತೆಯ ಮಾದಾವರ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಕುರುಬರ ಬೃಹತ್‌ ಎಸ್‌.ಟಿ. ಹೋರಾಟ ಸಮಾವೇಶ ಹಮ್ಮಿಕೊಂಡಿದ್ದು, 10 ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆ ಇದೆ.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜ.15ರಿಂದ 21 ದಿನಗಳ ಕಾಲ 360 ಕಿ.ಮೀ. ದೂರ ಕ್ರಮಿಸಿದ ಬೃಹತ್‌ ಪಾದಯಾತ್ರೆ ಫೆ.3ರಂದು ಬೆಂಗಳೂರು ತಲುಪಿತ್ತು. ಇದೀಗ ಕುರುಬರ ಎಸ್‌.ಟಿ. ಹೋರಾಟ ಸಮಿತಿ ವತಿಯಿಂದ ನಿರಂಜನಾನಂದಪುರ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Tap to resize

Latest Videos

ಶನಿವಾರ ಮಾದಾವರದಲ್ಲಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಕುರುಬರ ಬೃಹತ್‌ ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷವೆನ್ನದೆ ಎಲ್ಲಾ ಪಕ್ಷಗಳ ಸಮುದಾಯದ ಜನರೂ ಒಟ್ಟಾಗಿರುವುದು ಇತಿಹಾಸದಲ್ಲೇ ಇದೇ ಮೊದಲು. 21 ದಿನಗಳ ಪಾದಯಾತ್ರೆ ವೇಳೆ ಸಮುದಾಯದ ಜನರು ಸೇರಿದಂತೆ ಇತರೆ ಸಮುದಾಯ ಹಾಗೂ ಧರ್ಮದ ಜನರು ಮತ್ತು ಮಠಾಧೀಶರಿಂದ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಭಾನುವಾರ 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಈ ಕುರಿತು ಎಲ್ಲಾ ಸಿದ್ಧತೆಗಳನ್ನೂ ಮಾಡಿದ್ದೇವೆ ಎಂದು ಹೇಳಿದರು.

5 ಲಕ್ಷಕ್ಕೂ ಹೆಚ್ಚು ಮಂದಿಗೆ ಆಸನ ವ್ಯವಸ್ಥೆ:

ಕುರುಬರ ಎಸ್‌.ಟಿ. ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ ಮಾತನಾಡಿ, ಕುರುಬರನ್ನು ಎಸ್‌.ಟಿ.ಗೆ ಸೇರಿಸುವ ಹೋರಾಟ ದಶಕಗಳಿಂದ ನಡೆಯುತ್ತಿದೆ. ಮೊಟ್ಟಮೊದಲ ಬಾರಿಗೆ ಸಮುದಾಯ ದೊಡ್ಡ ಪ್ರಮಾಣದಲ್ಲಿ ಒಗ್ಗೂಡಿದ್ದು, ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಸಚಿವರಾದ ಎಂಟಿಬಿ ನಾಗರಾಜು, ಬೈರತಿ ಬಸವರಾಜು, ಆರ್‌.ಶಂಕರ್‌, ಮಾಜಿ ಸಚಿವರಾದ ಎಚ್‌.ಎಂ. ರೇವಣ್ಣ, ಬಂಡೆಪ್ಪ ಕಾಶೆಂಪೂರ್‌, ಶಾಸಕರು ಹಾಗೂ ಸಮುದಾಯದ ಮುಖಂಡರೆಲ್ಲರೂ ಭಾಗವಹಿಸಲಿದ್ದಾರೆ ಎಂದರು.

12 ಲಕ್ಷಕ್ಕೂ ಹೆಚ್ಚು ರೊಟ್ಟಿಸಂಗ್ರಹ:

ಪಾದಯಾತ್ರೆ, ಸಮಾವೇಶಕ್ಕೆ ಬೆಂಬಲವಾಗಿ ರಾಜ್ಯದ ಮೂಲೆ-ಮೂಲೆಯಿಂದ ಮಹಿಳೆಯರು ರೊಟ್ಟಿಗಳನ್ನು ಮಾಡಿ ಕಳುಹಿಸಿದ್ದಾರೆ. ಕಾರ್ಯಕರ್ತರು ವಿವಿಧ ಜಿಲ್ಲೆಗಳಿಂದ 12 ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ತಂದು ಮಾದಾವರದ ಸಮಾವೇಶದ ಸ್ಥಳದಲ್ಲಿ ಸಂಗ್ರಹಿಸಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವ ಅಷ್ಟೂಮಂದಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದ್ದು, ರೊಟ್ಟಿಪ್ರಿಯರು ರೊಟ್ಟಿಹಾಗೂ ಶೇಂಗಾ ಚಟ್ನಿಯನ್ನೂ ಸವಿಯಬಹುದು ಎಂದು ಹೋರಾಟ ಸಮಿತಿ ಕಾರ್ಯಾಧ್ಯಕ್ಷರೊಬ್ಬರು ಮಾಹಿತಿ ನೀಡಿದರು.

ಸಮಾವೇಶದಲ್ಲಿ 10 ಲಕ್ಷ ಮಂದಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಪಾದಯಾತ್ರೆಯ ಯಶಸ್ಸು ಹಾಗೂ ವಿವಿಧ ಜಿಲ್ಲೆಗಳಿಂದ ಬರುವುದಾಗಿ ತಿಳಿಸಿರುವ ಬಸ್ಸು, ಟ್ರ್ಯಾಕ್ಸ್‌ಗಳ ಸಂಖ್ಯೆ ನೋಡಿದರೆ 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಸಮಾವೇಶ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿದೆ.

- ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ.

- 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ

- 5 ಲಕ್ಷ ಮಂದಿಗೆ ಆಸನ ವ್ಯವಸ್ಥೆ

- ಎಲ್ಲರಿಗೂ ಊಟದ ವ್ಯವಸ್ಥೆ, 300 ಊಟ ವಿತರಣೆ ಕೌಂಟರ್‌

- ರಾಜ್ಯದ ಮೂಲೆ-ಮೂಲೆಯಿಂದ ಬಂದವರಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ

- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರದಟ್ಟಣೆ ಉಂಟಾಗದಂತೆ ಪೊಲೀಸ್‌ ವ್ಯವಸ್ಥೆ

click me!