ನಿಯಮ ಉಲ್ಲಂಘಿಸಿ BPL ಕಾರ್ಡ್ ಪಡೆದವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರು ಬಿಗ್ ಶಾಕ್ ಕೊಟ್ಟಿದ್ದಾರೆ.
ಬೆಳಗಾವಿ, (ಫೆ.06): ರಾಜ್ಯದಲ್ಲಿ ಅರ್ಹ ಬಿಪಿಎಲ್ ಕಾರ್ಡ್ ದಾರರು ಯಾರು, ಅನರ್ಹ ಬಿಪಿಎಲ್ ಕಾರ್ಡ್ ದಾರರು ಯಾರು ಎನ್ನುವ ಬಗ್ಗೆ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ಅನಧಿಕೃತ ಬಿಪಿಎಲ್ ಕಾರ್ಡ್ ಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ರಾಜ್ಯದಲ್ಲಿ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ಅನಧಿಕೃತ ಪಡಿತರ ಚೀಟಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಹಶೀಲ್ದಾರ್, ಪಿಡಿಒ, ಗ್ರಾಪಂ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ಪ್ರತಿಗ್ರಾಮಗಳಲ್ಲಿ ಸರ್ವೆ ಮಾಡಿಸಲಾಗುವುದು. ಅನಧಿಕೃತ ಕಾರ್ಡ್ ಪತ್ತೆ ಹಚ್ಚಿ ಮಾರ್ಚ್ 31ರೊಳಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಬಳಿಕವೇ ಅನಧಿಕೃತ ಕಾರ್ಡ್‍ಗಳನ್ನು ರದ್ದುಪಡಿಸಲಾಗುವುದು ಎಂದರು.
ಟ್ರ್ಯಾಕ್ಟರ್ ಇದ್ದವ್ರಿಗೆ ಬಿಪಿಎಲ್ ಕಾರ್ಡ್ ಇಲ್ಲ: ಸರ್ಕಾರದ ಕ್ರಮದ ಬಗ್ಗೆ ಎಚ್‌ಡಿಕೆ ಕಿಡಿ
ಬಿಪಿಎಲ್ ಕಾರ್ಡ್ ಪಡೆಯಲು ಅದರದೇ ಆದ ಮಾನದಂಡಗಳಿವೆ. ಮಾನದಂಡ ಉಲ್ಲಂಘಿಸಿ ಕಾರ್ಡ್ ಪಡೆದಿದ್ದರೆ ಅಂತವರ ಕಾರ್ಡ್‍ಗಳನ್ನು ರದ್ದು ಮಾಡಲಾಗುವುದು. ಅರ್ಹ ಫಲಾನುಭವಿಗಳಿಗೆ ಮಾತ್ರವೇ ಬಿಪಿಎಲ್ ಕಾರ್ಡ್ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.