SSLC ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡಿಂಗ್, ಕೈ ಸರ್ಕಾರಕ್ಕೆ ಜ್ಞಾನದ ಕೊರತೆ: ಹೊರಟ್ಟಿ ಕಿಡಿ

Kannadaprabha News   | Kannada Prabha
Published : Mar 31, 2026, 08:26 AM IST
Basavaraj Horatti

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಅಂಕಗಳ ಬದಲು ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಖಂಡಿಸಿದ್ದಾರೆ. ಈ ನೀತಿಯು ತಜ್ಞರೊಂದಿಗೆ ಚರ್ಚಿಸದೆ ಜಾರಿಗೆ ತಂದಿದ್ದು,  ಇದು ಹಿಂದಿ ಸೇರಿದಂತೆ ಇತರೆ ತೃತೀಯ ಭಾಷೆಗಳಿಗೂ ಹೊಡೆತ ಬೀಳಲಿದೆ ಎಂದು ಆಕ್ರೋಶ.

ಹುಬ್ಬಳ್ಳಿ (ಮಾ.31): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಅಂಕ ತೆಗೆದು ಗ್ರೇಡಿಂಗ್‌ ನೀಡುವ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲ. ಈ ನೀತಿ ಕೈಬಿಟ್ಟು ಮೊದಲಿನ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕಿಡಿಕಾರಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್​ ನೀಡುವ ಶಿಕ್ಷಣ ಇಲಾಖೆಯ ದಿಢೀರ್​ ನಿರ್ಧಾರ ಖಂಡನಾರ್ಹ. ಹಿಂದಿ ಭಾಷೆ ಅಲ್ಲದೇ ಕೆಲವೆಡೆ ತೃತೀಯ ಭಾಷೆಯಾಗಿ ಕನ್ನಡ, ಸಂಸ್ಕೃತ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳಿವೆ. ಈ ನೀತಿಯಿಂದಾಗಿ ಈ ಎಲ್ಲ ಭಾಷೆಗಳಿಗೂ ಹೊಡೆತ ಬೀಳಲಿದೆ. ಈಗಾಗಲೇ ಶಿಕ್ಷಕರು ಒಂದು ವರ್ಷ ಮಕ್ಕಳಿಗೆ ಹಿಂದಿ ವಿಷಯದಲ್ಲಿ ಪಾಠ ಮಾಡಿದ್ದಾರೆ. ಈಗ ಮಕ್ಕಳ ಪರೀಕ್ಷಾ ಸಮಯದಲ್ಲೇ ತರಾತುರಿಯಲ್ಲಿ ತಜ್ಞರೊಂದಿಗೆ ಚರ್ಚಿಸದೇ ಈ ನಿರ್ಧಾರ ತಗೆದುಕೊಂಡರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ್ವಿಭಾಷಾ ನೀತಿ ಸರಿಯಲ್ಲ:

ಮಕ್ಕಳ ಕಲಿಕೆಯ ವಿಷಯದಲ್ಲಿ ದ್ವಿಭಾಷಾ ನೀತಿ ಸರಿಯಲ್ಲ. ಆಡಳಿತ ಭಾಷೆ ಮಾಡುವಂತೆ ನಾನು ಒತ್ತಾಯಿಸುವುದಿಲ್ಲ. ಆದರೆ, ಶಾಲಾ-ಕಾಲೇಜುಗಳಲ್ಲಿ ಕಲಿಯುವ ವಿಷಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಈಗ ಹಿಂದಿ ಭಾಷೆಗೆ ಅಂಕ ತೆಗೆದು ಗ್ರೇಡ್‌ ನೀಡಿದ್ದಾರೆ. ಮುಂದೆ ಎಲ್ಲ ಭಾಷೆಗಳಿಗೂ ಗ್ರೇಡ್ ಕೇಳುತ್ತಾರೆ. ನೀಡಲು ಆಗುತ್ತದೆಯೇ ಎಂದು ಹೊರಟ್ಟಿ ಪ್ರಶ್ನಿಸಿದರು.

1960ರಿಂದ ಬಂದ ಪದ್ಧತಿ ಬದಲಿಸುತ್ತಿರುವುದು ಸರಿಯಲ್ಲ. ಬೇರೆ ರಾಜ್ಯಗಳಲ್ಲಿ ಇಂಗ್ಲಿಷ್‌ ಹೊರತುಪಡಿಸಿದರೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ. ಹಾಗಾಗಿ ಈ ನಿರ್ಣಯ ಕೈಬಿಟ್ಟು ಮೊದಲಿನ ಪದ್ಧತಿ ಮುಂದುವರಿಸಿಕೊಂಡು ಹೋಗುವಂತೆ ಮುಖ್ಯಮಂತ್ರಿಗೆ ಒತ್ತಾಯಿಸುವೆ. ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಕಾರ್ಯದರ್ಶಿಗಳೊಂದಿಗೆ ಮಾತನಾಡಿರುವೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೊರಟ್ಟಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೆಕ್ಕಕ್ಕಿಲ್ಲದ ಹಿಂದಿ ಪರೀಕ್ಷೆ ಇಂದು: ಫಲಿತಾಂಶದಲ್ಲಿ ಇಳಿಕೆ ಆತಂಕ, ವಿದ್ಯಾರ್ಥಿಗಳು ಹೇಳೋದೇನು?
ಗ್ಯಾಸ್‌ ‘ಕೃತಕ’ ಕೊರತೆ: ರಿಕ್ಷಾ ಚಾಲಕರಿಗೆ ಸಂಕಷ್ಟ