ಕನ್ನಡ, ಕನ್ನಡಿಗರ ಧ್ವನಿಯಾದ ಕುಮಾರಣ್ಣ, ಹಿಂದಿ ದಿವಸ ಆಚರಣೆ ವಿರೋಧಿಸಿ ಸಿಎಂಗೆ ಪತ್ರ

By Suvarna NewsFirst Published Sep 12, 2022, 8:05 PM IST
Highlights

ಕರ್ನಾಟಕದಲ್ಲಿ ಈಗಾಗಲೇ ಧರ್ಮ ದಂಗಲ್ ನಡೆದಿದೆ. ಇದರ ಮಧ್ಯೆ ಹಿಂದಿ ದಿವಸ ಬಂದಿದ್ದು, ಇದನ್ನು ಆಚರಣೆ ಮಾಡಬಾರದು ಎಂದು ಎಚ್‌ಡಿಕೆ ಪತ್ರ ಬರೆದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್.12): ಇದೇ ಸೆಪ್ಟಂಬರ್‌‌ 14ರಂದು ಆಚರಿಸಲಾಗುವ ಹಿಂದಿ ದಿವಸವನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ಭಾರತವು ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ, 560ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ. ಇಂತಹ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಅನ್ಯಾಯವಾಗಿದೆ ಎಂದಿದ್ದಾರೆ.

ಧಾರವಾಡ: ಕೇಂದ್ರ ಸಚಿವ ಜೋಶಿ ಭಾವಚಿತ್ರಕ್ಕೆ ಮಸಿ

ಸೆಪ್ಟಂಬರ್‌ 14ರಂದು ಭಾರತ ಒಕ್ಕೂಟ ಸರ್ಕಾರದ ಪ್ರಯೋಜಿತ ಕಾರ್ಯಕ್ರಮವಾದ ‘ಹಿಂದಿ ದಿವಸ’ವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ, ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದು ಎಂದು ಕುಮಾರಸ್ವಾಮಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಹಿಂದಿ ದಿವಸಕ್ಕೆ ಕನ್ನಡ ಪರ ಸಂಘಟನೆಗಳ ವಿರೋಧ
ಇನ್ನು ಸೆ 14 ರಂದು  ಹಿಂದಿ ದಿವಸ ಆಚರಣೆಗೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಡಿಸಿವೆ. ಅದರಲ್ಲೂ  ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಿಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಹಿಂದಿ ದಿವಸ ಆಚರಣೆ ಸಂಬಂಧ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಸೆ.14ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ ನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು. ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ. ಒಕ್ಕೂಟದ ಎಲ್ಲಾ ನುಡಿಗಳಂತೆ ಹಿಂದಿಯೂ ಒಂದು ನುಡಿಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಇತರ ನುಡಿಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.

ಸಮಾನತೆಯ ಮೇಲೆ ರಚಿತವಾದ ಈ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಭಾಷೆಯನ್ನು ಮಾತ್ರ ಮೆರೆಸಿ ಉಳಿದ ಭಾಷೆಗಳನ್ನು ತುಳಿಯುವ  ಹುನ್ನಾರವನ್ನು ನಾವೆಲ್ಲರೂ ವಿರೋಧಿಸಬೇಕು, ಭಾರತ ಒಕ್ಕೂಟರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
 

click me!