
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಎರಡು ಸೇವೆಗಳ ಪರಿಷ್ಕರಣೆ ನಡೆಸಲಾಗಿದೆ. ಹೊಸದಾಗಿ ಆರಂಭವಾದ ಬೆಳ್ಳಿ ರಥ ಸೇವೆಗೆ 12000, ಪಂಚಾಮೃತ ಮಹಾಭಿಷೇಕ ಸೇವೆಗೆ 11000 ದರ ನಿಗದಿ ಮಾಡಲಾಗಿದೆ. ಪಂಚಾಮೃತ ಮಹಾಭಿಷೇಕ ಸೇವೆಗೆ ಈ ಹಿಂದೆ ಆರು ಸಾವಿದ ಇದ್ದು ಪರಿಷ್ಕೃತ ದರ 11000 ಕ್ಕೆ ಏರಿಸಲಾಗಿದೆ. ಬೆಳ್ಳಿ ರಥೋತ್ಸವ ಸೇವೆ ಹೊಸದಾಗಿ ಆರಂಭಿಸಲಾಗಿದ್ದು ಕಾರ್ತಿಕ ಮಾಸದ ಶುದ್ದ ಷಷ್ಠಿಯಿಂದ ಜ್ಯೇಷ್ಠ ಮಾಸದ ಶುದ್ದ ಷಷ್ಠಿಯವರೆಗೆ ಪ್ರತಿ ತಿಂಗಳ ಶುದ್ಧ ಬಿದಿಗೆ, ಬಹುಳ ಬಿದಿಗೆ,ಶುದ್ದ ಚೌತಿ, ಬಹುಳ ಚೌತಿ, ಶುದ್ದ ಷಷ್ಠಿ , ಬಹುಳ ಷಷ್ಠಿ,ಶುದ್ದ ನವಮಿ, ಬಹುಳ ನವಮಿ, ಶುದ್ದ ಚರ್ತುದಶಿ, ಬಹುಳ ಚರ್ತುದಶಿ, ಈ ಹತ್ತು ದಿನಗಳಲ್ಲಿ ಹರಿಕೆ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಳ್ಳಿ ರಥೋತ್ಸವ ಸೇವೆ ನಡೆಯುವ ದಿನ ಭಂಡಿ ರಥೋತ್ಸವ ಸೇವೆ ನಡೆಯುವುದಿಲ್ಲ . ಬೀದಿ ಉತ್ಸವ ನಡೆಯುವ ದಿವಸ ಬೆಳ್ಳಿ ರಥೋತ್ಸವ ಸೇವೆ ಇರುವುದಿಲ್ಲ ದೇವಳದ ಪ್ರಕಟಣೆ ತಿಳಿಸಿದೆ. ಸುಮಾರು 5000 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಮತ್ತು ಪೌರಾಣಿಕ ಪ್ರಸಿದ್ಧ ನಾಗ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಜಯದಶಮಿ ಮತ್ತು ಶಮೀಪೂಜೆ ಆಚರಿಸಲಾಯಿತು. ಸಾಲಾಂಕೃತ ಪಲ್ಲಕ್ಕಿಯಲ್ಲಿ ಆನೆ, ಬಿರುದಾವಳಿ,ನಾದಸ್ವರ ಹಾಗೂ ಬ್ಯಾಂಡ್ ನಿನಾದದೊಂದಿಗೆ ಶ್ರೀ ದೇವಿಯನ್ನು ದೇವಳದಿಂದ ಮೆರವಣಿಗೆಯಲ್ಲಿ ಕಾಶಿಕಟ್ಟೆಗೆ ತರಲಾಯಿತು.
ನಂತರ ಕಾಶಿಕಟ್ಟೆಯ ಮಹಾಗಣಪತಿ ಸನ್ನಿಧಿಯಲ್ಲಿ ಶಮೀಪೂಜೆ ನೆರವೇರಿತು.ಅಲ್ಲದೆ ಶ್ರೀ ದೇವಿಗೆ ಪೂಜೆ ಸಮರ್ಪಿತವಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ವಿವಿಧ ವೈಧಿಕ ವಿಧಾನಗಳೊಂದಿಗೆ ಶ್ರೀ ದೇವಿಗೆ ಶಮಿ ಸಮರ್ಪಣೆ ಮಾಡಿದರು. ದೇವಳದ ವಿವಿಧ ಆಯುಧಗಳಿಗೆ ಪೂಜೆಯು ನೆರವೇರಿತು. ಪೂಜಾ ಸಂದರ್ಭದಲ್ಲಿ ಕುಶಾಲು ತೋಪು ಸಿಡಿಸಲಾಯಿತು. ಅರ್ಚಕರು ಭಕ್ತಾರಿಗೆ ಶಮಿ ವಿತರಿಸಿದರು.
ದೇವಳದ ಗಜರಾಣಿ ಯಶಸ್ವಿಗೆ ಮಹಾನವಮಿಯ ದಿನವಾದ ಬುಧವಾರ ಗಜಲಕ್ಷ್ಮಿ ಪೂಜೆ ನಡೆಯಿತು. ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ಆನೆಗೆ ಹಣ್ಣುಹಂಪಲು ತೆಂಗಿನಕಾಯಿ, ಅವಲಕ್ಕಿ, ಅರಳು, ಬೆಲ್ಲ,ಹಣ್ಣು ಹಂಪಲು, ತೆಂಗಿನ ಕಾಯಿ ಇತ್ಯಾದಿ ತಿನಿಸುಗಳನ್ನು ನೀಡಿದರು. ಯಶಸ್ವಿಯು ಮೊಣಕಾಲೂರಿ ಶ್ರೀ ದೇವರಿಗೆ ಪ್ರಣಾಮ ಮಾಡಿತು. ಪೂಜೆಯ ಬಳಿಕ ಸೊಂಡಿಲೆತ್ತಿ ಸರ್ವರಿಗೂ ಆಶೀರ್ವದಿಸಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರವೀಣ ರೈ ಮರುವಂಜ,ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಸೌಮ್ಯಾ ಭರತ್, ಅಜಿತ್ ಕುಮಾರ್ ಪಾಲೇರಿ, ಶ್ರೀ ದೇವಳದ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ಮಾವುತ ಗುರುಪ್ರಸಾದ್ ಮಲ್ಲಿಗೆಮಜಲು ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ