ರಾಜ್ಯದಲ್ಲಿ 115 ದಿನಗಳ SIR ಸರ್ಕಸ್ ಮುಕ್ತಾಯ; ನಿಮ್ಮ ಹೆಸರು ಮತ ಪಟ್ಟಿಯಲ್ಲಿ ಇದೆಯಾ? ಅ.27ಕ್ಕೆ ರಿಸಲ್ಟ್‌!

Sathish Kumar KH   | Kannada Prabha
Published : Oct 23, 2026, 08:46 AM IST
SIR Karnataka

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರನ್ನು ಸೇರ್ಪಡೆ ಮಾಡಲು ಶೀಘ್ರದಲ್ಲೇ ವಿಶೇಷ ಅಭಿಯಾನವನ್ನು ಸಹ ಆರಂಭಿಸಲಾಗುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿ ಸಂಬಂಧ ಸಲ್ಲಿಕೆಯಾಗಿರುವ ಹಕ್ಕು, ಆಕ್ಷೇಪಣೆ, ನೋಟಿಸ್‌ ವಿಲೇವಾರಿಗೆ ನಿಗದಿಪಡಿಸಿದ್ದ ಗಡುವು ಗುರುವಾರ ಅಂತ್ಯಗೊಂಡಿದೆ.

ಇದರೊಂದಿಗೆ, ಜೂ.30ರಿಂದ ಆರಂಭವಾಗಿ 115 ದಿನಗಳ ಕಾಲ ನಡೆದ ಎಸ್‌ಐಆರ್‌ ಸರ್ಕಸ್‌ ಮುಕ್ತಾಯವಾದಂತಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ? ಇಲ್ಲವೋ? ಎಂಬುದು ಅ.27ಕ್ಕೆ ಗೊತ್ತಾಗಲಿದೆ.

ಕರಡು ಮತದಾರರ ಪಟ್ಟಿಯ 4.50 ಕೋಟಿ ಮತದಾರರ ಪೈಕಿ ನೋ ಮ್ಯಾಪಿಂಗ್‌ ಮತ್ತು ತಾರ್ಕಿಕ ವ್ಯತ್ಯಾಸ ಕಾರಣಕ್ಕೆ 43.82 ಲಕ್ಷ ಮತದಾರರಿಗೆ ನೋಟಿಸ್‌ ಸೃಜಿಸಲಾಗಿತ್ತು. ಆರಂಭದಲ್ಲಿ ಸಂಬಂಧಿತ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಮತದಾರರನ್ನು ಸಂಪರ್ಕಿಸಿ ನೋಟಿಸ್‌ ವಿತರಿಸಿದ್ದರು. ಬಳಿಕ ನಿಗದಿತ ದಿನಾಂಕದಂದು ಮತದಾರರು ನಿಗದಿತ ದಾಖಲೆಗಳೊಂದಿಗೆ ಮತದಾರರ ನೋಂದಣಾಧಿಕಾರಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದರು.

27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ:

ಬಳಿಕ ಕೇಂದ್ರ ಚುನಾವಣಾ ಆಯೋಗವು ಬಿಎಲ್ಒಗಳೇ ಮತದಾರರ ಮನೆಗಳಿಗೆ ತೆರಳಿ ನೋಟಿಸ್‌ ನೀಡಿ ದಾಖಲೆ ಸಂಗ್ರಹಿಸಿ ಅಫ್ಲೋಡ್‌ ಮಾಡಲು ಸೂಚಿಸಿತ್ತು. ಅದರಂತೆ ನೋಟಿಸ್‌ಗಳ ವಿಚಾರಣೆ ಪೂರ್ಣಗೊಂಡಿದೆ. ಇನ್ನು ಕರಡು ಮತದಾರರ ಪಟ್ಟಿ ಸಂಬಂಧ ಸಲ್ಲಿಕೆಯಾಗಿದ್ದ ಕ್ಲೈಮು, ಆಕ್ಷೇಪಣೆಗಳ ವಿಲೇವಾರಿ ಗುರುವಾರ ಪೂರ್ಣಗೊಂಡಿದೆ. ಅ.27ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದ್ದಾರೆ.

ಎಸ್‌ಐಆರ್‌ ಬಳಿಕ ಸೇರ್ಪಡೆಗೆ ವಿಶೇಷ ಅಭಿಯಾನ:

ಎಸ್ಐಆರ್‌ ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಎಸ್‌ಐಆರ್‌ ವೇಳೆ ಮತದಾರರ ಪಟ್ಟಿಗೆ ನೋಂದಣಿಯಾಗದ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ಅದರಂತೆ ರಾಜ್ಯದಲ್ಲಿ ವಿಶೇಷ ಅಭಿಯಾನ ನಡೆಯಲಿದೆ. ಈ ವೇಳೆ ಫಾರ್ಮ್‌ 6ನಲ್ಲಿನ ಘೋಷಣಾ ಪ್ರಮಾಣ ಪತ್ರ ಇರುವುದಿಲ್ಲ. ಬಿಎಲ್‌ಒಗಳು ಹಳೇ ಮತದಾರರ ಪಟ್ಟಿ ಹಾಗೂ ಹೊಸ ಮತದಾರರ ಪಟ್ಟಿ ಪರಿಶೀಲಿಸಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ.

ಈವರೆಗೆ ನಡೆದಿದ್ದೇನು?

  • - ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ರಾಜ್ಯದಲ್ಲಿ ಜೂ.30ರಂದು ಆರಂಭವಾಗಿತ್ತು
  • - ಮೊದಲ ಹಂತದ ಪ್ರಕ್ರಿಯೆ ಬಳಿಕ 4.50 ಕೋಟಿ ಮತದಾರರ ಕರಡು ಮತದಾರರ ಪಟ್ಟಿಯನ್ನು ಆಯೋಗ ಪ್ರಕಟಿಸಿತ್ತು
  • - ನೋ ಮ್ಯಾಪಿಂಗ್‌, ತಾರ್ಕಿಕ ವ್ಯತ್ಯಾಸ ಕಾರಣಕ್ಕೆ 43.82 ಲಕ್ಷ ಮತದಾರರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು
  • - ನಿಗದಿತ ದಾಖಲೆಗಳೊಂದಿಗೆ ವಿಚಾರಣೆ ನಡೆಸಿ ಮತದಾರರ ನೋಂದಣಾಧಿಕಾರಿಗಳು ದಾಖಲು ಮಾಡಿಕೊಂಡಿದ್ದರು
  • - ಹಕ್ಕು ಮಂಡನೆ, ಆಕ್ಷೇಪಣೆ, ಸಲ್ಲಿಕೆ ನೋಟಿಸ್‌ ವಿಲೇವಾರಿಗೆ ಅ.22ರವರೆಗೆ ಗಡುವು ಇತ್ತು. ಅದು ಈಗ ಮುಕ್ತಾಯ

ಮುಂದೆ ಆಗುವುದೇನು?

  • - ನಿಮ್ಮ ಹೆಸರು ಇದೆಯೋ? ಇಲ್ಲವೋ ಎಂಬುದು ಅ.27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಿಂದ ತಿಳಿಯುತ್ತದೆ
  • - ಆ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಚಿಂತೆ ಬೇಡ. ನೀವು ಅರ್ಹ ಮತದಾರರಾಗಿದ್ದರೆ ಸೇರ್ಪಡೆಗೆ ಅಭಿಯಾನ ಆರಂಭವಾಗಲಿದೆ
  • - ಬಿಎಲ್‌ಒಗಳೇ ಹಳೆ ಮತದಾರರ ಪಟ್ಟಿ, ಹೊಸ ಮತದಾರರ ಪಟ್ಟಿ ಪರಿಶೀಲನೆ ಮಾಡಿ ಅರ್ಹರನ್ನು ಸೇರ್ಪಡೆ ಮಾಡುತ್ತಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನ.1ಕ್ಕೆ ಚಾಲನೆ! ಕನ್ನಡ ರಾಜ್ಯೋತ್ಸವಕ್ಕೆ ಭಾರತೀಯ ರೈಲ್ವೆ ಗಿಫ್ಟ್
Karnataka News Live: ರಾಜ್ಯದಲ್ಲಿ 115 ದಿನಗಳ SIR ಸರ್ಕಸ್ ಮುಕ್ತಾಯ; ನಿಮ್ಮ ಹೆಸರು ಮತ ಪಟ್ಟಿಯಲ್ಲಿ ಇದೆಯಾ? ಅ.27ಕ್ಕೆ ರಿಸಲ್ಟ್‌!