2030ರ ವೇಳೆಗೆ KSTDLನ ವಹಿವಾಟಿನ ಗುರಿ 5000 ಕೋಟಿ ರೂ: ಸಚಿವ ಎಂ.ಬಿ.ಪಾಟೀಲ್

By Govindaraj SFirst Published Jan 6, 2024, 2:38 PM IST
Highlights

ರಾಜ್ಯದ ಪ್ರತಿಷ್ಠಿತ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕೆಎಸ್‌ಟಿಡಿಎಲ್ 2030 ರ ವೇಳೆಗೆ 5 ಸಾವಿರ ಕೋಟಿ ರೂ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. 

ಬೆಂಗಳೂರು (ಜ.06): ರಾಜ್ಯದ ಪ್ರತಿಷ್ಠಿತ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕೆಎಸ್‌ಟಿಡಿಎಲ್ 2030 ರ ವೇಳೆಗೆ 5 ಸಾವಿರ ಕೋಟಿ ರೂ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. 100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್ಡಿಎಲ್) ಸಿಬ್ಬಂದಿ ವರ್ಗಕ್ಕೆ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಸಮಗ್ರ ಆರೋಗ್ಯ ತಪಾಸಣೆ ಶಿಬಿರ ಮತ್ತು ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ಮಹಾರಾಜರು ಮತ್ತು ಸರ್ ಎಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕೆಎಸ್ಡಿಎಲ್ ಸದ್ಯಕ್ಕೆ ವಾರ್ಷಿಕವಾಗಿ 1,200 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸುವ ಮೂಲಕ ಲಾಭದ ಹಾದಿಯಲ್ಲಿದೆ. ಇದು 2025ರ ವೇಳೆಗೆ ₹2,500 ಕೋಟಿ ರೂಗಳಾಗಲಿದ್ದು, 2030ರ ಹೊತ್ತಿಗೆ 5,000 ಕೋಟಿ ರೂ. ಮುಟ್ಟಬೇಕು ಅನ್ನೋ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು. ವಿದೇಶಗಳಲ್ಲೂ ಮಾರುಕಟ್ಟೆ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದ್ದು, ಯೂರೋಪ್ ಮತ್ತು ಅರಬ್ ರಾಷ್ಟ್ರಗಳಿಗೆ ಕೆಎಸ್ಡಿಎಲ್ ಉತ್ಪನ್ನಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ರಫ್ತು ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

Latest Videos

ಮುಸ್ಲಿಂ ಓಲೈಕೆಗೆ 31 ವರ್ಷದ ಕೇಸು ಓಪನ್‌: ರಾಜ್ಯ ಸರ್ಕಾರದ ವಿರುದ್ಧ ಬಿಎಸ್‌ವೈ ಕಿಡಿ

ಕೆಎಸ್ಡಿಎಲ್ ಆವರಣದಲ್ಲಿ ದಿನನಿತ್ಯದ ದಿನಸಿ ಪದಾರ್ಥಗಳು, ಡೆಟಾಲ್, ಹ್ಯಾಂಡ್ ಸೋಪ್ ಮುಂತಾದವೆಲ್ಲ ಲಭ್ಯವಾಗಬೇಕು. ಸದ್ಯಕ್ಕೆ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆ ವಿತರಣೆ ಚೆನ್ನಾಗಿ ನಡೆಯುತ್ತಿದೆ. ಸಂಸ್ಥೆಯು ಕಾರ್ಮಿಕರ ಯೋಗಕ್ಷೇಮಕ್ಕೂ ಆದ್ಯತೆ ನೀಡುವ ಉತ್ತರದಾಯಿತ್ವವನ್ನು ಪ್ರದರ್ಶಿಸಿದೆ ಎಂದು ಎಂ.ಬಿ.ಪಾಟೀಲ್  ಹೇಳಿದರು.

ಯಶವಂತಪುರದಲ್ಲಿ ಇರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್ಡಿಎಲ್) ಆವರಣದಲ್ಲಿ ಸರಕಾರಿ ಕಚೇರಿಗಳಿಗೆ ಜಾಗ ಒದಗಿಸಲು ಸುಸಜ್ಜಿತ ಸಂಕೀರ್ಣ ನಿರ್ಮಿಸಲಾಗುವುದು. ಮುಂದಿನ 100 ವರ್ಷಗಳ ಅವಧಿಗೆ ಕಾರ್ಖಾನೆಯ ವಿಸ್ತರಣೆಗೆ ಬೇಕಾದ ಜಾಗವನ್ನು ಮೀಸಲಿಟ್ಟುಕೊಂಡು ಈ ಕೆಲಸ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ.

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ಆವರಣದಲ್ಲಿ ಹಲವು ಸರಕಾರಿ ಮತ್ತು ಖಾಸಗಿ ಕಂಪನಿಗಳ ಕಚೇರಿಗಳಿಗೆ ಸ್ಥಳಾವಕಾಶ ಕೊಡಲಾಗಿದೆ. ಅದೇ ಮಾದರಿಯನ್ನೂ ಕೆಎಸ್ಡಿಎಲ್ ನಲ್ಲೂ ಅಳವಡಿಸಿಕೊಳ್ಳಲಾಗುವುದು. ಕೆಎಸ್ಡಿಎಲ್ ವತಿಯಿಂದಲೇ ಹಂತಹಂತವಾಗಿ ಇದನ್ನು ನಿರ್ಮಿಸಲಾಗುವುದು. ಇದರಿಂದ ಸಂಸ್ಥೆಯು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಸುಲಭವಾಗಲಿದೆ ಎಂದು ಅವರು ನುಡಿದರು.

ಭಾರತ ಈಗಿರುವುದೇ ಹಿಂದೂ ರಾಷ್ಟ್ರ: ವಿಶ್ವಪ್ರಸನ್ನ ತೀರ್ಥ ಶ್ರೀ!

ಕೆಎಸ್ಡಿಎಲ್ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ಆರೋಗ್ಯ ತಪಾಸಣೆ ಶಿಬಿರ ಮತ್ತು ಐದು ಲಕ್ಷ ರೂಪಾಯಿ ಮೊತ್ತದ ಚಿಕ್ಸಿತೆ ಪಡೆಯಬಹುದಾದ  ಹೆಲ್ತ್ ಕಾರ್ಡ್ ಅನ್ನು ಸಚಿವ ಎಂ.ಬಿ.ಪಾಟೀಲ ವಿತರಿಸಿದರು. 169 ಕಾಯಂ ಸಿಬ್ಬಂದಿ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ‌‌ ಮಾಡುತ್ತಿರುವ 464 ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಈ ವಿಮಾ ಸೌಲಭ್ಯ ಅನ್ವಯ ಆಗುತ್ತದೆ. ಮಲ್ಲಿಗೆ ಆಸ್ಪತ್ರೆ ಜತೆಗೂ ಕೆಎಸ್ಡಿಲ್ ಒಪ್ಪಂದ ಮಾಡಿಕೊಂಡಿದ್ದು ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

click me!