5 ರಾಜ್ಯ​ಗ​ಳಿಗೆ ಕೆಎ​ಸ್ಸಾ​ರ್ಟಿಸಿ ಸೇವೆ ಪುನಾ​ರಂಭ

By Kannadaprabha NewsFirst Published Oct 7, 2020, 7:07 AM IST
Highlights

ಕೊರೋನಾತಂಕ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕೆಎಸ್‌ಆರ್‌ಟಿಸಿ ಸೇವೆ ಮತ್ತೆ ಆರಂಭವಾಗಲಿದೆ. 

ಬೆಂಗಳೂರು (ಅ.07):  ಲಾಕ್‌ಡೌನ್‌ ಸಡಿಲಿಕೆ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಈಗಾಗಲೇ ಐದು ರಾಜ್ಯಗಳಿಗೆ ಅಂತರ್‌ ರಾಜ್ಯ ಬಸ್‌ ಸೇವೆ ಪುನರಾರಂಭಿಸಿದೆ. ಪ್ರಸ್ತುತ ನಿತ್ಯ 300 ಬಸ್‌ಗಳು ಸಂಚರಿಸುತ್ತಿವೆ. ಬಸ್‌ ಸೇವೆ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರದ ಮನವಿಗೆ ಮಹಾ​ರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಹಾಗೂ ಕೇರಳ ರಾಜ್ಯಗಳು ಅನುಮತಿ ನೀಡಿದ ನಂತರ ಬಸ್‌ ಸೇವೆ ಆರಂಭಿಸಲಾಗಿದೆ. ಆದರೆ, ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯಗಳು ನವೆಂಬರ್‌ ವೇಳೆಗೆ ಅನುಮತಿ ನೀಡುವ ನಿರೀಕ್ಷೆಯಿದೆ. ಹೀಗಾಗಿ ಈ ಎರಡೂ ರಾಜ್ಯಗಳಿಗೂ ಬಸ್‌ ಸೇವೆ ಪುನಾರಂಭಿಸಲು ನಿಗಮ ಸಿದ್ಧತೆ ನಡೆಸಿದೆ.

300 ಬಸ್‌ ಕಾರ್ಯಾಚರಣೆ: ಕೊರೋನಾ ಪೂರ್ವದಲ್ಲಿ ಕೆಎಸ್‌ಆರ್‌ಟಿಸಿಯು ನೆರೆಯ ಈ ಏಳು ರಾಜ್ಯಗಳಿಗೆ ನಿತ್ಯ 1,070 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿತ್ತು. ಇದೀಗ ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಐದು ರಾಜ್ಯಗಳಿಗೆ ನಿತ್ಯ 300 ಬಸ್‌ಗಳನ್ನು ಕಾರ್ಯಾಚರಿಸಲಾಗುತ್ತಿದೆ. ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್‌ ರೆಡ್ಡಿ ತಿಳಿಸಿದರು.

ಈ ಪೈಕಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ಕಾರ್ಯಾಚರಿಸಲಾಗುತ್ತಿದೆ. ಕೇರಳ ಸರ್ಕಾರ ಹೊರರಾಜ್ಯದಿಂದ ಬರುವ ಪ್ರಯಾಣಿಕರಿಗೆ ಏಳು ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯಗೊಳಿಸಿರುವುದರಿಂದ ಕೇರಳಕ್ಕೆ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಿದೆ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್‌ ರೆಡ್ಡಿ ತಿಳಿಸಿದರು.

ರಾಜ್ಯದಲ್ಲಿ ಶೇ.60ರಷ್ಟುಬಸ್‌:

ಇನ್ನು ನಿಗಮವು ಒಟ್ಟು ಏಳು ಸಾವಿರ ಬಸ್‌ ಹೊಂದಿದ್ದು, ಪ್ರಸ್ತುತ ರಾಜ್ಯದಲ್ಲಿ ನಿತ್ಯ 5,300 ಬಸ್‌ ಕಾರ್ಯಾಚರಿಸಲಾಗುತ್ತಿದೆ.ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ ಕಾರ್ಯಾಚರಿಸಲಾಗುತ್ತಿದೆ. ಕೊರೋನಾ ಆತಂಕದ ನಡುವೆಯೂ ಪ್ರಯಾಣಿಕರ ಸಂಖ್ಯೆ ಕೊಂಚ ಏರಿಕೆಯಾಗುತ್ತಿದೆ ಎಂದರು.

click me!