
ಬೆಂಗಳೂರು (ಆ.29): ಕೇರಳದಲ್ಲಿ ನಡೆಯುವ ತಿರು ಓಣಂ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬೆಂಗಳೂರಿನಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ 90 ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಈ ವೇಳೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರು ಒಟ್ಟಿಗೆ ಪ್ರಯಾಣಿಸಿದಲ್ಲಿ ಟಿಕೆಟ್ ದರದ ಮೇಲೆ ಶೇ.5 ರಿಂದ ಶೇ.10ರವರೆಗೆ ಡಿಸ್ಕೌಂಟ್ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ತಿರು ಓಣಂ ಹಬ್ಬವು ಸೆಪ್ಟೆಂಬರ್ 5, 2025 ರಂದು ಇರುವುದರಿಂದ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೆಪ್ಟೆಂಬರ್ 2, 2025 ರಿಂದ ಸೆಪ್ಟೆಂಬರ್ 4, 2025 ರವರೆಗೆ ಹಾಲಿ ಇರುವ ಬಸ್‌ಗಳ ಜೊತೆಗೆ ಈ ಹೆಚ್ಚುವರಿ ಬಸ್‌ಗಳು ಕಾರ್ಯನಿರ್ವಹಿಸಲಿವೆ. ನಂತರ, ಸೆಪ್ಟೆಂಬರ್ 7, 2025 ರಂದು ಕೇರಳದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕೇರಳದ ಕಣ್ಣೂರು, ಕೋಝಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಾಯಂ ಮತ್ತು ತಿರುವನಂತಪುರಂ ಸೇರಿದಂತೆ ಪ್ರಮುಖ ನಗರಗಳಿಗೆ ಬಸ್‌ಗಳು ಸಂಚರಿಸಲಿವೆ. ಪ್ರತಿಷ್ಠಿತ ಬಸ್‌ಗಳು ಶಾಂತಿನಗರದಿಂದ ಹೊರಡಲಿವೆ ಎಂದು ನಿಗಮ ತಿಳಿಸಿದೆ.
ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗ ತಮ್ಮ ಬಸ್ ಹೊರಡುವ ನಿಲ್ದಾಣ ಮತ್ತು ಪಿಕ್-ಅಪ್ ಪಾಯಿಂಟ್ ಅನ್ನು ಗಮನಿಸುವಂತೆ KSRTC ಮನವಿ ಮಾಡಿದೆ. ಅಲ್ಲದೆ, ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆಯು ಕರ್ನಾಟಕವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೆರಿಯ ಪ್ರಮುಖ ನಗರಗಳಲ್ಲಿಯೂ ಲಭ್ಯವಿದೆ. ಹೆಚ್ಚುವರಿ ಬಸ್‌ಗಳ ವೇಳಾಪಟ್ಟಿ ಮತ್ತು ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಕಾರ್ಯಾಚರಣೆ ಮಾಡಲಾಗುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್‌ಜಾಲ ವ್ಯವಸ್ಥೆಯಲ್ಲಿ ಹಾಗೂ ಕರಾರಸಾ ನಿಗಮದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ ಹಾಗೂ ಸದರಿ ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ