ಕೈಮುಗಿದು ಏರು, ಇದು ಕನ್ನಡದ ತೇರು: ಅಫಜಲಪುರ KSRTC ಬಸ್​ ಸಂಪೂರ್ಣ ಕನ್ನಡಮಯ!

Kannadaprabha News, Ravi Janekal |   | Kannada Prabha
Published : Nov 03, 2025, 02:27 PM IST
KSRTC driver unique Rajyotsava celebration Afzalpur bus driver Nagappa Uppin

ಸಾರಾಂಶ

ಅಫಜಲಪುರ ಬಸ್ ಘಟಕದ ಚಾಲಕ ನಾಗಪ್ಪ ಉಪ್ಪಿನ, ಕಳೆದ 13 ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್ಸನ್ನು ಕನ್ನಡಮಯಗೊಳಿಸಿ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಬಸ್ಸಿನ ಒಳಗೆ  ನಾಡಿನ ಹಿರಿಮೆಯ ಬಗ್ಗೆ ಮಾಹಿತಿ ನೀಡಿ, ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

  • ಬಿಂದುಮಾಧವ ಮಣ್ಣೂರ

ಅಫಜಲಪುರ (ನ.3): ಅಫಜಲ್ಪುರ ಬಸ್ ಘಟಕದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಗುಬ್ಬೇವಾಡ ಗ್ರಾಮದ ನಾಗಪ್ಪ ಉಪ್ಪಿನ ಕಳೆದ 13 ವರ್ಷಗಳಿಂದ ಪ್ರತಿ ವರ್ಷ ನ.1ರಂದು ವಿಭಿನ್ನವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ.

ಸ್ವಂತ ಹಣದಿಂದಲೇ ಕನ್ನಡದ ಬಗ್ಗೆ ಜಾಗೃತಿ:

ಇವರು 2011ನೇ ಇಸ್ವಿಯಲ್ಲಿ ಶಹಾಪುರ ಘಟಕದಲ್ಲಿ ಸಾರಿಗೆ ಇಲಾಖೆಯಲ್ಲಿ ಸೇವೆಗೆ ಸೇರಿದರು. ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ 2012ರಲ್ಲಿ ಅಫಜಲಪುರ ಘಟಕಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ. 2012ರಿಂದ ಪ್ರತಿ ವರ್ಷ ಇವರು ಸಾರಿಗೆ ಇಲಾಖೆಯ ಬಸ್‌ ಅನ್ನು ಸಂಪೂರ್ಣ ಕನ್ನಡಮಯ ಮಾಡುವ ಮೂಲಕ ಕನ್ನಡಾಭಿಮಾನ ಬೆಳೆಸುತ್ತಿದ್ದಾರೆ. ಇವರು ಪ್ರತಿ ವರ್ಷ ತಮ್ಮ ಸ್ವಂತ ಹಣದಿಂದಲೇ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಈ ಬಾರಿ ಕನ್ನಡ ನಾಡು ನುಡಿಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಪ್ರಯಾಣಿಕರಿಗೆ ಕನ್ನಡದ ಸಾಹಿತಿಗಳು, ಪ್ರೇಕ್ಷಣೀಯ ಸ್ಥಳಗಳು, ವೀರ ವನಿತೆಯರು ಸೇರಿದಂತೆ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿದ ರಾಜ್ಯದ ಮಹನೀಯರ ಬಗ್ಗೆ ಬಸ್‌ನಲ್ಲಿ ಫೋಟೋಗಳನ್ನು ಹಾಕಿ ಮಾಹಿತಿ ನೀಡುತ್ತಿದ್ದಾರೆ.

ಕನ್ನಡಾಭಿಮಾನ ಅಂದ್ರೆ ಇದಪ್ಪಾ!

ಬಸ್ ಹೊರಗಿನ ಅಲಂಕಾರವಂತೂ ದೂರದಿಂದಲೇ ಕನ್ನಡಾಭಿಮಾನಿಗಳನ್ನು ಆಕರ್ಷಿಸುವಂತಿದೆ. ಹೊರಭಾಗದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರವಿದೆ. ಕನ್ನಡಕ್ಕಾಗಿ ದುಡಿದ ಸಾಧಕರ ಭಾವಚಿತ್ರಗಳು ಬಸ್‌ನ ಹೊರಭಾಗದಲ್ಲಿ ಹಾಕಿದ್ದಾರೆ. ರಾಜ್ಯದ ಪ್ರೇಕ್ಷಣೀಯ ಸ್ಥಳಗಳ ಫೋಟೋಗಳನ್ನು ಬಸ್ ಹೊರಭಾಗದಲ್ಲಿ ಅಂಟಿಸಲಾಗಿದೆ.

ಕರ್ನಾಟಕ ರತ್ನ ಪ್ರಶಸ್ತಿ ವಿಜೇತರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕನ್ನಡ ನಾಡನ್ನು ಆಳಿದ ರಾಜಮನೆತನಗಳ ಮಾಹಿತಿ ಸೇರಿದಂತೆ ವಿವಿಧ ಸಂಗತಿಗಳನ್ನು ಬಸ್‌ನಲ್ಲಿ ನೋಡಬಹುದು.

ಬಸ್ ಒಳಗಡೆ ಕಾಲಿಟ್ಟರೆ ಪ್ರತಿ ಆಸನದ ಮೇಲೆ ಕನ್ನಡ ಸ್ವರಗಳು, ವ್ಯಂಜನಗಳಿವೆ. ಪ್ರತಿ ಆಸನದ ಹಿಂದೆ ಕನ್ನಡ ಭಾಷೆಯ ಹಿರಿಮೆಯನ್ನು ಬರೆಯಲಾಗಿದೆ. ಮಾತೃಭಾಷೆಯ ಬಗ್ಗೆ ಕವಿಗಳ ಹೇಳಿಕೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಮಾಹಿತಿ, ರಾಜ್ಯದ ತಾಲೂಕು ಹಾಗೂ ಜಿಲ್ಲೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಧ್ವನಿವರ್ಧಕದ ಮೂಲಕ ಕನ್ನಡ ಸಾಹಿತ್ಯಾಭಿಮಾನ, ನಾಡಿನ ಶ್ರೇಷ್ಠತೆ ಸಾರುವ ಗೀತೆಗಳನ್ನು ಬಸ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.

‘ಅಫಜಲ್ಪುರ ವಿಭಾಗದಲ್ಲಿ ಕಳೆದ​ 14 ವರ್ಷದಿಂದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಳೆದ ನಾಲ್ಕೈದು ವರ್ಷದಿಂದ ಪ್ರತಿವರ್ಷ ವಿಭಿನ್ನವಾಗಿ ಬಸ್‌ ಅನ್ನು ಅಲಂಕರಿಸುವ ಮೂಲಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ರೀತಿ ಆಚರಿಸಲು ನನ್ನ ಸ್ನೇಹಿತರು, ಪ್ರಯಾಣಿಕರು, ಸಿಬ್ಬಂದಿ ವರ್ಗ ಮತ್ತು ಕುಟುಂಬಸ್ಥರು ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಚಾಲಕ ನಾಗಪ್ಪ ಉಪ್ಪಿನ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನಾಗಪ್ಪ ಕಾರ್ಯಕ್ಕೆ ಕೈಜೋಡಿಸುವುದರ ಜೊತೆಗೆ ಅವರು ಯಾವ ರೀತಿ ಹೇಳುತ್ತಾರೋ ಆ ರೀತಿ ಬಸ್ ಅಲಂಕರಿಸುವುದು ನನ್ನ ಕೆಲಸ ಎನ್ನುತ್ತಾರೆ ನಿರ್ವಾಹಕ ಸೂರ್ಯಕಾಂತ ಮಗಿ. ಇವರ ಈ ಕನ್ನಡ ಪ್ರೇಮ ಕನ್ನಡಾಭಿಮಾನಕ್ಕೆ ಎಲ್ಲರು ಖುಷಿಯಲ್ಲಿದ್ದಾರೆ. ಇವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌