ರಿಪೋರ್ಟರ್ ಡೈರಿ: ರಾಜ್ಯೋತ್ಸವದ ರಂಗು ಪ್ರಚಾರದ ಗೀಳು, ಕೈಕೊಟ್ಟ ಕರೆಂಟು!

Kannadaprabha News   | Kannada Prabha
Published : Nov 03, 2025, 12:42 PM IST
kannada rajyotsava funny incidents

ಸಾರಾಂಶ

mangalore athlete publicity stunt: ಮಗಳೂರಿನಲ್ಲಿ ಪ್ರಚಾರಕ್ಕಾಗಿ ಕ್ರೀಡಾಪಟುವೊಬ್ಬರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಂತೆ ಪೋಸು ನೀಡಿದರೆ, ಧಾರವಾಡದಲ್ಲಿ ಭಾಷಣದ ವೇಳೆ ಕರೆಂಟ್ ಕೈಕೊಟ್ಟಾಗ ಸಚಿವ ಸಂತೋಷ್ ಲಾಡ್ ಸಮಯಪ್ರಜ್ಞೆ ಮೆರೆದರು. ಈ ಎರಡೂ ಸ್ವಾರಸ್ಯಕರ ಘಟನೆಗಳ ಕುರಿತಾದ ವರದಿ ಇಲ್ಲಿದೆ.

ಮಂಗಳೂರಿನಲ್ಲಿ ಹಿರಿಯರ ವಿಭಾಗದ ಅಂತಾರಾಷ್ಟ್ರೀಯ ಕ್ರೀಡಾಪಟುಒಬ್ಬರಿದ್ದಾರೆ, ಜತೆಗೆ ಅವರು ವಕೀಲರೂ ಹೌದು. ನಿರಂತರ ಸತತ ಅಭ್ಯಾಸಗಳಿಂದ ದೇಶ, ವಿದೇಶಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ತಂದಿದ್ದಾರೆ. ಪಾಪ, ಇಂಥ ಕ್ರೀಡಾ ಸಾಧಕನ ಬಹುದೊಡ್ಡ ಮೈನಸ್‌ ಪಾಯಿಂಟ್‌ ಅಂದ್ರೆ ಪ್ರಚಾರ ಪ್ರಿಯತೆ. ಏನಾದರೂ ಮಾಡಿ ಪತ್ರಿಕೆಗಳಲ್ಲಿ ತನ್ನ ಫೋಟೋ ಬರಬೇಕು, ಹೊರ ಜಗತ್ತಿನಲ್ಲಿ ತಾನು ಚಲಾವಣೆಯಲ್ಲಿರಬೇಕು ಎಂಬುದು ಅವರ ರಕ್ತಗತ ಬಯಕೆ. ಅದಕ್ಕಾಗಿ ಪ್ರಯತ್ನ ಒಂದೆರಡಲ್ಲ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಬಂದಿದ್ದಾಗ ಅದ್ಹೇಗೋ ವೇದಿಕೆಗೆ ನುಸುಳಿ ಸಿಎಂ ಜತೆ ಸೆಲ್ಫೀ ತೆಗೆದು, ಆ ಫೋಟೋ ಅಚ್ಚು ಹಾಕಿಸಿ ಪತ್ರಿಕಾ ಕಚೇರಿಗಳ ಬಾಗಿಲು ತಟ್ಟಿದ್ದರು. ಯಾವ ಪತ್ರಿಕೆಯಲ್ಲೂ ಅದು ಸುದ್ದಿಯಾಗಲಿಲ್ಲ.

ಈ ಸಲ ಕನ್ನಡ ರಾಜ್ಯೋತ್ಸವ ದಿನ ಏನಾದರೂ ಮಾಡಿ ಸುದ್ದಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದಿದ್ದರು. ನೆಹರೂ ಮೈದಾನದಲ್ಲಿ ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡುವ ವೇಳೆ ವೇದಿಕೆಗೆ ನುಸುಳಿಯೇ ಬಿಟ್ಟರು. ಅಲ್ಲಿದ್ದ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ವಿವಿಧ ನಾಯಕರ ಜತೆ ಒಂದು ರೌಂಡ್ ಹಸ್ತಲಾಘವ ಮಾಡಿದ್ದೂ ಆಯ್ತು, ಪ್ರಶಸ್ತಿ ಪುರಸ್ಕೃತರ ಹಿಂದೆ ಅತಿಥಿಗಳ ಸಾಲಿನಲ್ಲಿ ನಿಂತು ಫೋಟೋ ತೆಗೆಸಿಕೊಂಡದ್ದೂ ಆಯ್ತು. ಅದಾದ ಬಳಿಕ ಸ್ವಲ್ಪ ಹೊತ್ತು ಈ ಮಹಾನುಭಾವ ಕ್ರೀಡಾಪಟು ಕಾಣಲಿಲ್ಲ. ಎಲ್ಲಿಗೆ ಹೋದ್ರು ಅಂತ ನೋಡುವಾಗ, ತಲೆಗೆ ಮೈಸೂರು ಪೇಟಾ, ಹೆಗಲ ಸುತ್ತ ಜರಿ ಶಾಲು, ಹಾರ, ಕೈಯಲ್ಲಿ ಹೂಗುಚ್ಛ ಬೇರೆ ಹಿಡಿದು ಪ್ರಶಸ್ತಿ ಪುರಸ್ಕೃತರ ವೇಷ ಧರಿಸಿ ಥಟ್ಟನೆ ಮತ್ತೆ ಪ್ರತ್ಯಕ್ಷ!

ವೇದಿಕೆ ಬದಿಯಲ್ಲಿ ಎಲ್ಲೋ ಇರಿಸಿದ್ದ ಪ್ರಶಸ್ತಿ ಪುರಸ್ಕೃತರ ಪೇಟಾ, ಹಾರ, ಶಾಲನ್ನೇ ಧರಿಸಿ ಇನ್ನೊಂದು ರೌಂಡಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಸಂಸದರ ಜತೆ ಠಾಕುಠೀಕಿನಿಂದ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸನ್ಮಾನಿತನ ರೀತಿ ಮೈಲೇಜ್ ತೆಗೆದುಕೊಂಡದ್ದು ನೋಡಿ ಅಲ್ಲಿದ್ದ ವರದಿಗಾರರು ಹುಬ್ಬೇರಿಸಿದರು. ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಲ್ಲಿದ್ದ ನಾಯಕರಿಗೆ ವಿಷಯ ತಿಳಿದು ಬೇಸ್ತು!

ಇಷ್ಟಾದರೂ ಆ ವ್ಯಕ್ತಿಯ ಪ್ರಚಾರದ ಗೀಳು ಮಾತ್ರ ಕಡಿಮೆಯಾಗಿರಲಿಲ್ಲ. ಮೈದಾನದ ಎಲ್ಲ ಕಡೆ ಓಡಾಡುತ್ತ ಪರಿಚಿತರು, ನಾಯಕರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಇದ್ದರು!

ಕೈಕೊಟ್ಟ ಕರೆಂಟು, ಲಾಡ್‌ ಸಾಹೇಬ್ರ ಶೇಕ್‌ ಹ್ಯಾಂಡ್‌...

70ನೇ ಕರ್ನಾಟಕ ರಾಜ್ಯೋತ್ಸವ ಅದ್ಧೂರಿಯಾಗಿ ಮಾಡಬೇಕಂತ ಲಾಡ್ ಸಾಹೇಬ್ರ ಅಣತಿಯಂತೆ ಒಂದ್‌ ತಿಂಗಳಿಂದ ಅಫೀಸರಗೋಳು ಧಾರವಾಡ ಜಿಲ್ಲಾ ಕ್ರೀಡಾಂಗಣದಲ್ಲಿ ಬೇಕಾದ ಎಲ್ಲ ಸಿದ್ಧತೆ ಮಾಡಿದ್ದರು. ಟೈಮ್‌ ಸರಿ ಇಲ್ಲಂದ್ರ ಏನೆಲ್ಲಾ ಅಕೈತಿ ಅಂತಾರಲ್ಲ ಹಂಗ, ಏನ್‌ ಆಗಬಾರದಾಗಿತ್ತೋ ಅದು ನಡೆದೇ ಹೋಯ್ತು.

ಬಿಳಿ ಅಂಗಿ ಹಾಕ್ಕೊಂಡು ಟಿಪ್‌ಟಾಪ್‌ ಆಗಿ ಬಂದಿದ್ದ ಸಚಿವ ಸಂತೋಷ ಲಾಡ್‌ ಸಾಹೇಬ್ರು, ಧ್ವಜಾರೋಹರಣ ನೆರವೇರಿಸಿ ಇನ್ನೇನ, ಮೈಕ್‌ ಹಿಡಿದ ಮಾತಾಡಬೇಕ ಅನ್ನೊದರೊಳಗೆ ಕರೆಂಟ್ ಹೋಗಬೇಕಾ?

ಸಚಿವರಿಗೆ ತೀವ್ರ ಮುಜುಗರ

ಜಿಲ್ಲಾಧಿಕಾರಿ ಒಂದ್‌ ತಿಂಗಳ ಮುಂಚೆನೇ ಅಧಿಕಾರಿಗಳ ಸಭೆ ಮಾಡಿ ಕ್ರೀಡಾಂಗಣದ ವೇದಿಕೆ, ಅಲಂಕಾರ, ಧ್ವನಿವರ್ಧಕ ಸೇರಿ ಎಲ್ಲ ರೀತಿಯ ಸಿದ್ಧತೆಯ ಸೂಚನೆ ನೀಡಿದ್ದರೂ ಸಚಿವರ ಭಾಷಣ ವೇಳೆಯೇ ಕರೆಂಟ್‌ ಕೈಕೊಟ್ಟಿದ್ದು, ಇಡೀ ಕ್ರೀಡಾಂಣದಲ್ಲಿ ನೆರೆದಿದ್ದ ಸಾವಿರಾರು ಮಕ್ಕಳು, ಸಾರ್ವಜನಿಕರ ಮಧ್ಯೆ ಸಚಿವರಿಗೆ ತೀವ್ರ ಮುಜುಗರ ತಂತು.

ಕೆಲ ಹೊತ್ತು ಆಕಡೆ, ಈಕಡೆ ನೋಡಿದ ಸಚಿವರು, ಏನಪ್ಪಾ ಇದು ವ್ಯವಸ್ಥೆ ಎಂದು ಮುಖ ಕಿವುಚಿ ಧ್ವನಿವರ್ಧಕ ಇಲ್ಲದೇ ರಾಜ್ಯೋತ್ಸವದ ಸಂದೇಶ ಮುಗಿಸಿದರು. ಸಚಿವರ ಭಾಷಣ ಮುಗಿದರೂ ಕರೆಂಟ್‌ ಮಾತ್ರ ಬರಲಿಲ್ಲ. ಇತ್ತ, ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಜನರೇಟರ್ ಹಚ್ಚಲು ಇನ್ನೂ ಓಡಾಡುತ್ತಿದ್ದುದನ್ನು ನೋಡಿದ ಸಚಿವರು, ಹಿಂಗ್ ಬಿಟ್ರ ನಮ್ಮ ಮರ್ಯಾದಿ ಹಾಳ ಮಾಡತಾರ ಎಂದುಕೊಂಡರು. ಪ್ರತಿ ಬಾರಿ ವೇದಿಕೆ ಕಾರ್ಯಕ್ರಮ ಮುಗಿಸಿ ಸೀದಾ ಕಾರಿನೆಡೆಗೆ ಹೋಗುತ್ತಿದ್ದ ಲಾಡ್‌ ಸಾಹೇಬ್ರು ಬೇರೆ ಪ್ಲಾನ್‌ ಮಾಡಿದರು. ಡಿಸಿ ಅವರನ್ನು ಕರೆದುಕೊಂಡು ಸೀದಾ ಕ್ರೀಡಾಂಗಣದಲ್ಲಿ ಕುಳಿತಿದ್ದ ಮಕ್ಕಳು, ಜನರತ್ತ ಹೋಗಿ ಅವರನ್ನು ಮಾತನಾಡಿದರು. ಅವರೊಂದಿಗೆ ಸೆಲ್ಫೀ ತೆಗೆಸಿಕೊಂಡು, ಕುಶಲೋಪರಿ ಕೇಳಿ ಹಂಗೋ ಹಿಂಗೋ ಟೈಂ ಪಾಸ್‌ ಮಾಡಿದರು. ಅಷ್ಟರಲ್ಲಿ ಕರೆಂಟ್‌ ಬಂತು. ಲಾಡ್‌ ಸಾಹೇಬ್ರು ಜನರಿಗೆ ಬೈಬೈ ಹೇಳಿ ಮತ್ತೆ ವೇದಿಕೆಗೆ ಎಂಟ್ರಿ ಕೊಟ್ರು. ಕರೆಂಟ್‌ ಇನ್ನೂ ಸ್ವಲ್ಪ ಹೊತ್ತು ಹೋಗಿದ್ದರ, ಲಾಡ್‌ ಅವರು ನಮ್ಮನ್ನು ಭೇಟಿಯಾಗಿ ಕೈ ಕುಲುಕುತ್ತಿದ್ದರು ಎಂದುಕೊಳ್ಳುತ್ತಾ ದೂರದಲ್ಲಿದ್ದ ಮಕ್ಕಳು ತಮ್ಮಷ್ಟಕ್ಕೆ ತಾವು ಮಾತಾಡಿಕೊಂಡು ಹೋಗಿದ್ದು ಮಾತ್ರ ನಿಜ..

- ಸಂದೀಪ್ ವಾಗ್ಲೆ

-ಬಸವರಾಜ ಹಿರೇಮಠ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್