ಹೆದರಿದ್ರೆ ಜೀವ ತೆಗೆಯುತ್ತೆ, ಧೈರ್ಯವೇ ವೈರಸ್‌ಗೆ ಮದ್ದು: ಕೊರೋನಾ ಗೆದ್ದು ಬಂದ KSRTC ಚಾಲಕ

By Kannadaprabha NewsFirst Published Jul 30, 2020, 8:39 AM IST
Highlights

ಕೋವಿಡ್‌ ಆರೈಕೆ ಕೇಂದ್ರದಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡರು| ಅಲ್ಲಿನ ವಾತಾವರಣ ನೋಡಿದ ಮೇಲೆ ಸೋಂಕಿನ ಬಗ್ಗೆ ಇದ್ದ ಆತಂಕ ದೂರಾಯಿತು| ಮಾನಸಿಕ ಧೈರ್ಯ ತಂದುಕೊಂಡೆ. ನಿತ್ಯ ಒಳ್ಳೆ ಊಟ, ವಿಟಮಿನ್‌ ಮಾತ್ರೆ ಕೊಡುತ್ತಿದ್ದರು. ವೈದ್ಯರು ನಿತ್ಯ ಆರೋಗ್ಯ ವಿಚಾರಿಸುತ್ತಿದ್ದರು| ವೃದ್ಧ ಸೋಂಕಿತರಿಗೆ ಸಹಾಯ ಮಾಡುತ್ತಿದ್ದೆ. ಊಟ ಬಂದಾಗ ಬಡಿಸುತ್ತಿದೆ|

ಬೆಂಗಳೂರು(ಜು.30): ಕೊರೋನಾಗೆ ನಾವು ಹೆದರಿದರೆ ಅದು ನಮ್ಮ ಜೀವವನ್ನೇ ತೆಗೆಯುತ್ತೆ. ನಾವು ಧೈರ್ಯವಾಗಿದ್ದರೆ ಕೊರೋನಾ ಸೋಂಕೇ ನಮಗೆ ಹೆದರಿ ಓಡಿ ಹೋಗುತ್ತೆ... ಇದು ಕೊರೋನಾ ಸೋಂಕನ್ನು ಗೆದ್ದು ಬಂದಿರುವ ಕೆಎಸ್‌ಆರ್‌ಟಿಸಿ ಮೈಸೂರು ನಗರ ಸಾರಿಗೆ ಸಾತನೂರು ಘಟಕದ ಚಾಲಕ ಕಂ ನಿರ್ವಾಹಕ ಶ್ರೀಕಾಂತ್‌(35) ಅವರ ಅನುಭವದ ಮಾತುಗಳು.

ಜ್ವರ, ಶೀತ ಏನು ಇರಲಿಲ್ಲ. ಸ್ವಲ್ಪ ಕೆಮ್ಮು ಕಾಣಿಸಿಕೊಂಡಿತು. ಹೀಗಾಗಿ ಪರೀಕ್ಷೆಗೆ ಒಳಪಡಿಸಿದಾಗ ಜು.11ರಂದು ನನಗೆ ಕೋವಿಡ್‌ ಪಾಸಿಟಿವ್‌ ಇರುವುದು ಗೊತ್ತಾಯಿತು. ಆ ಕ್ಷಣ ಜೀವನವೇ ಮುಗಿಯಿತು ಎಂದುಕೊಂಡೆ. ಭಯದಿಂದ ಮೈಸೂರಿನ ಕೆ.ಆರ್‌.ಆಸ್ಪತ್ರೆಯಿಂದ ಸಾತಗಳ್ಳಿ ಡಿಪೋ ವರೆಗೆ ನಡೆದುಕೊಂಡೆ ಹೋದೆ. ಡಿಪೋ ಅಧಿಕಾರಿಗಳಿಗೆ ಕರೆ ಮಾಡಿ ನನಗೆ ಸೋಂಕು ದೃಢಪಟ್ಟಿರುವ ವಿಚಾರ ತಿಳಿಸಿದೆ. ಈ ವೇಳೆ ಅವರು ಧೈರ್ಯ ತುಂಬಿದರು. ಅಷ್ಟರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆ್ಯಂಬುಲೆನ್ಸ್‌ ತಂದು ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆದೊಯ್ದರು.

ಹೆದರೋದು ಬೇಡವೆಂದು ಮೊದಲೇ ನಿರ್ಧರಿಸಿದ್ದೆ: ಕೊರೋನಾ ಗೆದ್ದು ಬಂದ ಎಂಜಿನಿಯರ್‌

ಕೋವಿಡ್‌ ಆರೈಕೆ ಕೇಂದ್ರದಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡರು. ಇತರೆ ಸೋಂಕಿತರು ಆರಾಮವಾಗಿ ಇದ್ದರು. ಅಲ್ಲಿನ ವಾತಾವರಣ ನೋಡಿದ ಮೇಲೆ ಸೋಂಕಿನ ಬಗ್ಗೆ ಇದ್ದ ಆತಂಕ ದೂರಾಯಿತು. ಮಾನಸಿಕ ಧೈರ್ಯ ತಂದುಕೊಂಡೆ. ನಿತ್ಯ ಒಳ್ಳೆ ಊಟ, ವಿಟಮಿನ್‌ ಮಾತ್ರೆ ಕೊಡುತ್ತಿದ್ದರು. ವೈದ್ಯರು ನಿತ್ಯ ಆರೋಗ್ಯ ವಿಚಾರಿಸುತ್ತಿದ್ದರು. ಇತರೆ ಸೋಂಕಿತರ ಜೊತೆ ಹರಟ್ಟುತ್ತಾ ದಿನ ಕಳೆಯುತ್ತಿದೆ. ವೃದ್ಧ ಸೋಂಕಿತರಿಗೆ ಸಹಾಯ ಮಾಡುತ್ತಿದ್ದೆ. ಊಟ ಬಂದಾಗ ಬಡಿಸುತ್ತಿದೆ. ಹೀಗಾಗಿ 10 ದಿನ ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ ಎಂದು ವಿವರಿಸಿದರು.

ಕೊರೋನಾ ಬಂದರೂ ಹೆದರಬಾರದು. ನಾವು ಎಷ್ಟು ಧೈರ್ಯವಾಗಿ ಇರುತ್ತೇವೋ ಅಷ್ಟು ಬೇಗ ಗುಣಮುಖರಾಗುತ್ತೇವೆ. ನಾನು ಸೋಂಕಿನಿಂದ ಗುಣಮುಖನಾದ ಬಳಿಕ ಸ್ನೇಹಿತರು, ಸಹೋದ್ಯೋಗಳಿಗೆ ಇದನ್ನೇ ಹೇಳಿದ್ದೇನೆ. ಸೋಂಕು ಬಂದರೆ ಚಿಂತಿಸೋದು ತಪ್ಪು. ವೈದ್ಯರ ಸಲಹೆ ಸೂಚನೆ ಪ್ರಕಾರ ಕ್ವಾರಂಟೈನ್‌ ನಿಯಮಗಳನ್ನು ಪಾಲಿಸಿದರೆ ಸುಲಭವಾಗಿ ಈ ಸೋಂಕಿನಿಂದ ಪಾರಾಗಬಹುದು ಎಂದು ಶ್ರೀಕಾಂತ್‌ ಹೇಳಿದ್ದಾರೆ. 
 

click me!