
ಕೊಡಗು (ಡಿ.5): ಸಾರ್ವಜನಿಕ ಸಾರಿಗೆ ಬಸ್ಸಿನಲ್ಲೇ ಕೆಲ ಪ್ರಯಾಣಿಕರು ಮದ್ಯ ಸೇವನೆ ಮಾಡಿದ ಅಚ್ಚರಿ ಹಾಗೂ ಆಘಾತಕಾರಿ ಘಟನೆಯೊಂದು ಕೊಡಗು ಜಿಲ್ಲೆಯ ಕುಶಾಲನಗರದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ (KSRTC) ಬಸ್ಸಿನಲ್ಲಿ ನಿನ್ನೆ ರಾತ್ರಿ ಸುಮಾರು 8:45ಕ್ಕೆ ವರದಿಯಾಗಿದೆ.
ಕುಶಾಲನಗರದಿಂದ ಮೈಸೂರಿಗೆ ಹೊರಟಿದ್ದ ಬಸ್ಸಿನಲ್ಲಿ ಇಬ್ಬರು ವ್ಯಕ್ತಿಗಳು ಮತ್ತು ಒಬ್ಬ ಮಹಿಳೆ ಸೇರಿ ಮೂವರ ಗುಂಪು ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ ಮಾಡಿರುವ ಆರೋಪ ಕೇಳಿಬಂದಿದೆ. ಅವರು ಗಾಜಿನ ಗ್ಲಾಸ್ಗಳಿಗೆ ಮದ್ಯವನ್ನು ಸುರಿದುಕೊಂಡು ಯಾವುದೇ ಅಳುಕಿಲ್ಲದೆ ಕುಡಿದು ಎಂಜಾಯ್ ಮಾಡುತ್ತಿದ್ದ ದೃಶ್ಯಗಳು ಸಹ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿವೆ. ಈ ಮೂಲಕ ದುರುಳರು ಸಾರ್ವಜನಿಕ ಬಸ್ ಅನ್ನು ಮಿನಿ-ಬಾರ್ ಆಗಿ ಪರಿವರ್ತಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಭ್ಯ ವರ್ತನೆ ಕಂಡು ಸಹ-ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನು ಸಾರ್ವಜನಿಕ ಸಾರಿಗೆಯೋ ಇಲ್ಲ ಬಾರೋ? ಎಂದು ಜನ ಬಸ್ ನಿರ್ವಾಹಕರು ಮತ್ತು ಕೆಎಸ್ಆರ್ ಟಿಸಿ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಎಸ್ಆರ್ ಟಿಸಿ ವಿರುದ್ಧ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ಅನುಚಿತವಾಗಿ ವರ್ತಿಸಿ, ಸಾರ್ವಜನಿಕರಿಗೆ ತೊಂದರೆ ನೀಡಿದವರ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ