
ಬೆಂಗಳೂರು (ಜ.03): ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಬಸ್ ದರ ಹೆಚ್ಚಳ ಮಾಡಿಲ್ಲವೆಂದು ಏಕಾಏಕಿ ಶೇ.15 ಪರ್ಸೆಂಟ್ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ದರ ಹೆಚ್ಚಳದ ಬರೆ ಭಾನುವಾರದಿಂದಲೇ ಅನ್ವಯ ಆಗಲಿದೆ. ಬೆಂಗಳೂರಿನಿಂದ ಮೈಸೂರು, ಬಳ್ಳಾರಿ, ಶಿವಮೊಗ್ಗ ನಗರಗಳಿಗೆ ಬಸ್ ದರ ಎಷ್ಟು ಹೆಚ್ಚಳವಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಸಾರಿಗೆ ನಿಗಮಗಳ ಬಸ್ ಗಳಲ್ಲಿ ಟಿಕೆಟ್ ದರ ಏರಿಕೆಗೆ ಡೇಟ್ ಫಿಕ್ಸ್ ಆಗಿದೆ. ಜ.5 ರಿಂದ ರಾಜ್ಯದ KSRTC,KKRTC, NWKRTC ಹಾಗೂ ಬಿಎಂಟಿಸಿ ಸೇರಿ 4 ನಿಗಮಗಳ ಬಸ್‌ಗಳಲ್ಲಿ ಅಧಿಕೃತವಾಗಿ ಟಿಕೆಟ್ ದರ ಏರಿಕೆ. ಟಿಕೆಟ್ ದರ ಪರಿಷ್ಕರಣೆಗೆ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿರುವ ಬೆನ್ನಲ್ಲೇ ಇಂದು ಎಲ್ಲ ನಿಗಮಗಳಿಗೆ ದರ ಪರಿಷ್ಕರಣೆ ಆದೇಶ ರವಾನೆ ಆಗಲಿದೆ. ರಾಜ್ಯದ ನಾಲ್ಕು ನಿಗಮಗಳಿಗೂ ಶೇ.15 ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಪ್ರತಿ ಸ್ಟೇಜ್‌ಗೆ ಎಷ್ಟು ದರ ಜಾಸ್ತಿ ಮಾಡಬೇಕು ಎಂದು ನಿಗಮಗಳಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಇದೀಗ ಬೆಂಗಳೂರಿನಲ್ಲಿ ಪ್ರಯಾಣ ಸೇವೆ ನೀಡುವ ಸಾರಿಗೆ ನಿಗಮ ಬಿಎಂಟಿಸಿ ಬಸ್‌ಗಳಲ್ಲಿ ಒಂದು ಸ್ಟೇಜ್‌ಗೆ 5 ರೂ. ಚಾರ್ಜ್ ಮಾಡಲಾಗುತ್ತಿದೆ. ಸರ್ಕಾರ ಆದೇಶದಂತೆ ಒಂದು ಸ್ಟೇಜ್‌ಗೆ ಇದೀಗ ಶೇ.15 ಹೆಚ್ಚುವರಿ ಚಾರ್ಜ್ ಮಾಡಿದ್ರೆ 75 ಪೈಸೆ ಹೆಚ್ಚುವರಿಯಾಗಲಿದೆ. ಇಲ್ಲಿ 25 ಪೈಸೆ ಅಸ್ತಿತ್ವದಲ್ಲಿ ಇಲ್ಲದ ಕಾರಣ 1 ರೂ. ದರ ಹೆಚ್ಚಳ ಮಾಡಿ ಒಂದು ಸ್ಟೇಜ್‌ಗೆ ಕನಿಷ್ಠ ದರ 6 ರೂ. ನಿಗದಿ ಮಾಡಬಹುದು. ಈ ಹಿನ್ನೆಲೆಯಲ್ಲಿ ಎಲ್ಲ ಸ್ಟೇಜ್ ಗಳಲ್ಲಿರುವ ಟಿಕೆಟ್ ದರಗಳಿಗೆ ಅನುಗುಣವಾಗಿ ಟಿಕೆಟ್ ದರ ಏರಿಕೆ ಮಾಡಲಾಗುತ್ತದೆ.
ಈ ಬಸ್ ದರ ಏರಿಕೆಯ ಪರಿಷ್ಕೃತ ದರ ಭಾನುವಾರದಿಂದಲೇ ಅನ್ವಯವಾಗಲಿದೆ. ಹೊಸ ವರ್ಷಕ್ಕೆ ಸರ್ಕಾರದಿಂದ ಪ್ರಯಾಣಿಕರಿಗೆ ಕಹಿ ನೀಡಿದರೆ, ಸಾರಿಗೆ ನಿಗಮಗಳಿಗೆ ಸಿಹಿ ಸಿಕ್ಕಂತಾಗಿದೆ. ದಿವಾಳಿಯಾಗಿರುವ ಸಾರಿಗೆ ನಿಗಮಗಳಿಗೆ ಇದು ಬೂಸ್ಟರ್ ಡೋಸ್ ರೀತಿ ಕೆಲಸ ಮಾಡಲಿದೆ. ಇನ್ನು ಡೀಸೆಲ್ , ಬಿಡಿಭಾಗಗಳಿಗೆ ದುಡ್ಡು ಇಲ್ಲದೆ ಪರದಾಡುತ್ತಿದ್ದ ಸಾರಿಗೆ ನಿಗಮಗಳು, ಶಕ್ತಿ ಯೋಜನೆ ಬಳಿಕವೂ ನಷ್ಟದಿಂದ ಹೊರಬರಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಇದೀಗ ಕೊನೆಗೂ 4 ನಿಗಮಗಳ ಬಸ್ ಪ್ರಯಾಣ ದರ ಏರಿಕೆಗೆ ಹಸಿರು ನಿಶಾನೆ ಸಿಕ್ಕಿದೆ.
ಜನವರಿ- 5 ರಿಂದ ಪ್ರತಿ ಸ್ಟೇಜ್ ಆಧಾರ ಮೇಲೆ ಬಸ್ ಪ್ರಯಾಣ ದರ ಏರಿಕೆ ಆಗಲಿದೆ. ಸಾಮಾನ್ಯ ಹಾಗೂ ಐಷಾರಾಮಿ ಬಸ್ ಗಳ ಪ್ರಯಾಣ ದರ ಏರಿಕೆ ಆಗಲಿದೆ. ಇನ್ನು ಬಿಎಂಟಿಸಿ ಬಸ್ ಪ್ರಯಾಣ ದರ ಕಳೆದ ಹತ್ತು ವರ್ಷದಿಂದ ಏರಿಕೆ ಆಗಿರಲಿಲ್ಲ. 2020ರ ಜನವರಿಯಲ್ಲಿ ಕೆಎಸ್ಆರ್‌ಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಬಸ್ ದರ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಬಸ್ ದರ ಏರಿಕೆಗೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ವಿವಿಧ ಚುನಾವಣೆಗಳು ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡುತ್ತಾ ಬಂದು ಇದೀಗ ಯಾವುದೇ ಚುನಾವಣೆಯೂ ಇಲ್ಲ, ಜನರ ಓಲೈಕೆ ಅಗತ್ಯವೂ ಇಲ್ಲ ಎಂಬುದನ್ನು ತಿಳಿದು ಸರ್ಕಾರ ಒಮ್ಮೆಲೆ ಶೇ.15ರಷ್ಟು ಪ್ರಯಾಣ ದರ ಏರಿಕೆ ಮಾಡಿದೆ. ಇಂದು ಅಥವಾ ನಾಳೆ ಸಾರಿಗೆ ನಿಗಮಗಳಿಂದ ನೂತನ ಪ್ರಯಾಣ ದರ ಪರಿಷ್ಕರಣೆ ಪಟ್ಟಿ ಬಿಡುಗಡೆ ಆಗಲಿದೆ.
ಸಾಮಾನ್ಯ ಬಸ್ ದರ ಹೆಚ್ಚಳದಿಂದ ಈ ನಗರಗಳಿಗೆ ಎಷ್ಟು ಹೆಚ್ಚಳ ಆಗಲಿದೆ?
| ಮಾರ್ಗಗಳು | ಈಗಿನ ದರ | ಶೇ.15 ಹೆಚ್ಚಳ | ಪರಿಷ್ಕೃತ ದರ |
| ಬೆಂಗಳೂರು- ಮೈಸೂರು | 170 ರೂ. | 27 ರೂ. | 197 ರೂ. |
| ಬೆಂಗಳೂರು- ಹಾಸನ | 238 ರೂ. | 36 ರೂ. | 274 ರೂ. |
| ಬೆಂಗಳೂರು- ಬಳ್ಳಾರಿ | 385 ರೂ. | 56 ರೂ | 441 ರೂ. |
| ಬೆಂಗಳೂರು- ಶಿವಮೊಗ್ಗ | 375 ರೂ. | 52 ರೂ. | 427 ರೂ. |
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ