ಹಿಂದಿಗಿಂತ ಈ ಸರ್ಕಾರದಲ್ಲೇ ಲಂಚ ಹೆಚ್ಚು: ಗುತ್ತಿಗೆದಾರರಿಂದ 75% ಕಮಿಷನ್ ಬಾಂಬ್, ಸಿಎಂ ಕ್ರಮಕ್ಕೆ ಸಿದ್ಧರಿದ್ದಾರಾ?

Kannadaprabha News   | Kannada Prabha
Published : Oct 01, 2026, 08:51 AM IST
Karnataka contractors association allegations

ಸಾರಾಂಶ

ರಾಜ್ಯದ ಶೇ.75ರಷ್ಟು ಶಾಸಕರು ಕಮಿಷನ್ ಕೇಳುತ್ತಿದ್ದು, ಹಿಂದಿನ ಸರ್ಕಾರಕ್ಕಿಂತ ಈ ಪ್ರಮಾಣ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಗಂಭೀರ ಆರೋಪ. ವಿವಿಧ ಇಲಾಖೆಗಳಿಂದ ಬರಬೇಕಾದ 38 ಸಾವಿರ ಕೋಟಿ ರೂ. ಬಾಕಿ ಬಿಲ್ ಪಾವತಿಸದಿದ್ದರೆ ಕಮಿಷನ್ ಪಡೆಯುವ ಶಾಸಕರ ಪಟ್ಟಿ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ.

ಬೆಂಗಳೂರು (ಅ.1): ರಾಜ್ಯದ ಶೇ.75ರಷ್ಟು ಶಾಸಕರು ಕಮಿಷನ್‌ ಕಾಟ ನೀಡುತ್ತಿದ್ದಾರೆ, ಕಳೆದ ಸರ್ಕಾರಕ್ಕಿಂತಲೂ ಈ ಅವಧಿಯಲ್ಲಿ ಪರ್ಸೆಂಟೇಜ್‌ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.

ಬಿಜೆಪಿ ಸರ್ಕಾರ 40% ಇದ್ರೆ ಈ ಸರ್ಕಾರದಲ್ಲಿ 75%!

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌, ಈ ಹಿಂದೆ ಚುನಾವಣೆ ಬಂದಾಗ ಮಾತ್ರ ಶಾಸಕರು ನೆರವು ಕೇಳುತ್ತಿದ್ದರು. ಆದರೆ, ಈಗ ಪ್ರತಿ ಕಾಮಗಾರಿ, ಟೆಂಡರ್‌ ಪ್ರಕ್ರಿಯೆಯಲ್ಲೂ ಶಾಸಕರು ಮೂಗು ತೂರಿಸುತ್ತಿದ್ದಾರೆ. ರಾಜ್ಯದ ಶೇ.75ರಷ್ಟು ಶಾಸಕರು ಕಮಿಷನ್‌ ಕೇಳುತ್ತಿದ್ದಾರೆ. ಟೆಂಡರ್‌ ಮಂಜೂರಾದ ಕೂಡಲೇ ಶಾಸಕರ ಬಳಿ ಹೋಗಿ ಮಾತನಾಡಬೇಕು. ಬಿಲ್‌ ಪಾವತಿಸಿದ ಕೂಡಲೇ ಕಮಿಷನ್‌ ನೀಡಬೇಕು. ಶಾಸಕರು ಹೇಳಿದಂತೆ ಕೇಳದಿದ್ದರೆ ಟೆಂಡರ್‌ ನಿಯಮಗಳನ್ನು ಉಲ್ಲಂಘಿಸಿ ಹಿಂಬಾಲಕರಿಗೆ ಗುತ್ತಿಗೆ ಸಿಗುವಂತೆ ಮಾಡುತ್ತದೆ. ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಮೂಲಕ ಕಮಿಷನ್‌ಗಾಗಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಲೋಕೋಪಯೋಗಿ ಮತ್ತು ಜಿಬಿಎ ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳ ಸಚಿವರಿಗೆ ಕಮಿಷನ್‌ ನೀಡಬೇಕು. ಕಳೆದ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್‌ ಇದ್ದ ಕಮಿಷನ್‌ ಈಗ ಅದಕ್ಕಿಂತ ಭಾರೀ ಹೆಚ್ಚಳವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅನುಮತಿಸಿದರೆ ಕಮಿಷನ್‌ ಪಡೆಯುತ್ತಿರುವ ಜನಪ್ರನಿಧಿಗಳ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ವಿವಿಧ ಇಲಾಖೆಗಳಿಂದ ₹38000 ಕೋಟಿ ಬಾಕಿ:

ಜಲಸಂಪನ್ಮೂಲ, ಲೋಕೋಪಯೋಗಿ, ಸಣ್ಣ ನೀರಾವರಿ, ವಸತಿ ಇಲಾಖೆ ಸೇರಿ ಎಂಟು ಇಲಾಖೆಗಳಿಂದ ರಾಜ್ಯದ ಗುತ್ತಿಗೆದಾರರಿಗೆ 38 ಸಾವಿರ ಬಾಕಿ ಬಿಲ್‌ ಪಾವತಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ನವೆಂಬರ್‌ ಅಂತ್ಯದೊಳಗೆ ಬಾಕಿ ಬಿಡುಗಡೆ ಮಾಡದಿದ್ದರೆ ಕಮಿಷನ್‌ ಪಡೆಯುವ ಶಾಸಕರೂ ಸೇರಿ ಅಧಿಕಾರಿಗಳು, ಮಧ್ಯವರ್ತಿಗಳ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮಂಜುನಾಥ್‌ ಎಚ್ಚರಿಕೆ ನೀಡಿದರು.

ಬಾಕಿ ಬಿಲ್‌ ಪಾವತಿ ಸೇರಿ ಗುತ್ತಿಗೆದಾರರ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲು ರಾಜ್ಯದ ಪ್ರತಿದಿನ ಒಂದು ಜಿಲ್ಲೆಯ ಜಿಲ್ಲಾ ಸಂಘಗಳಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಮಾಡಿ ಪ್ರತಿಭಟಿಸಲಾಗುವುದು. ಕಳೆದ 4 ವರ್ಷಗಳಿಂದ ಗುತ್ತಿಗೆದಾರರು ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಹೋರಾಟದ ನಂತರವೂ ಸರ್ಕಾರ ಹಣ ನೀಡದಿದ್ದರೆ ವಿಷ ಕೊಡಲಿ, ಕುಡಿದು ಸಾಯುತ್ತೇವೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದಕುಮಾರ್‌, ಗೌರವಾಧ್ಯಕ್ಷ ಕೃಷ್ಣಾ ರೆಡ್ಡಿ, ಕಾರ್ಯಾಧ್ಯಕ್ಷರಾದ ದಿನೇಶ್‌, ಹನುಮಂತಯ್ಯ ಇತರರಿದ್ದರು.

ಕಮಿಷನ್ ಪಡೆದಿಲ್ಲ ಎಂದರೆ ಶಾಸಕರು ಆಣೆ ಮಾಡಲಿ: ಮಂಜುನಾಥ್‌

ಕಮಿಷನ್ ಹಣ ತೆಗೆದುಕೊಂಡಿಲ್ಲ ಎಂದು ಶಾಸಕರು ಎಲ್ಲಿಗೆ ಬೇಕಾದರೂ ಬಂದು ದೇವರ ಮುಂದೆ ಆಣೆ ಮಾಡಲಿ. ನಾವೂ ಆಣೆ ಮಾಡಲು ಸಿದ್ಧರಿದ್ದೇವೆ. ಶಾಸಕರು ಇದಕ್ಕೆ ಸಿದ್ಧರಿದ್ದಾರೆಯೇ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಪ್ರಶ್ನಿಸಿದರು.

ಬಾಕಿ ಬಿಲ್‌ ಮೊತ್ತದ ವಿವರ:

ಇಲಾಖೆ ಬಾಕಿ ಮೊತ್ತ

  • ಜಲಸಂಪನ್ಮೂಲ 14 ಸಾವಿರ ಕೋಟಿ ರು.
  • ಲೋಕೋಪಯೋಗಿ 8370 ಕೋಟಿ ರು.
  • ಸಣ್ಣ ನೀರಾವರಿ 3600 ಕೋಟಿ ರು.
  • ಆರ್‌ಡಿಪಿಆರ್‌ 3000 ಕೋಟಿ ರು.
  • ವಸತಿ-ವಕ್ಫ್‌ 2600 ಕೋಟಿ ರು.
  • ಜಿಬಿಎ (ಬಿಬಿಎಂಪಿ) 2600 ಕೋಟಿ ರು.
  • ಕಾರ್ಮಿಕ 2000 ಕೋಟಿ ರು.
  • ನಗರಾಭಿವೃದ್ಧಿ 1800 ಕೋಟಿ ರು.
  • ಒಟ್ಟು 37980 ಕೋಟಿ ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಜಿ ಸೈನಿಕ ಜಿ.ವೇಮಣ್ಣ ಅವರಿಗೆ 5 ಎಕರೆ ಭೂಮಿ ಕೊಡದ್ದಕ್ಕೆ ಹೈಕೋರ್ಟ್ ತೀವ್ರ ವಿಷಾದ
ಇತಿಹಾಸದಲ್ಲೇ ಮೊದಲು, ಈ ಕ್ಷೇತ್ರಕ್ಕೆ ಹೊಸ ನೀತಿ, ₹4,000 ಕೋಟಿ ಹಣಕಾಸು ಬೆಂಬಲ! 5 ಲಕ್ಷ ಉದ್ಯೋಗ ಸೃಷ್ಟಿಗೆ ಮೆಗಾ ಪ್ಲ್ಯಾನ್ ಏನು?