ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Published : Sep 07, 2026, 05:22 PM IST
KPSC Chairman Shivashankarappa Sahukar

ಸಾರಾಂಶ

ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕೃತ್ಯದಿಂದ ಕೆಪಿಎಸ್‌ಸಿ ಮೇಲಿನ ಸಾರ್ವಜನಿಕರ ವಿಶ್ವಾಸ ನಾಶವಾಗಿದೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ, ಸಾಹುಕಾರ್ ಅವರು ಅಕ್ರಮವಾಗಿ ನೂರಾರು ಎಕರೆ ಆಸ್ತಿ ಸಂಪಾದಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ದಾಖಲೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮಾನತುಗೊಂಡಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದೆ.

ಕೋರ್ಟ್ ವಿಚಾರಣೆ ಹಾಗೂ ಹೈಕೋರ್ಟ್ ತರಾಟೆ:

ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, "ಶಿವಶಂಕರಪ್ಪ ಅವರು ಈ ಹಗರಣದಲ್ಲಿ ಭಾಗಿಯಾಗಿಲ್ಲ. ಅವರ ವಯಸ್ಸನ್ನು ಪರಿಗಣಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು," ಎಂದು ಮನವಿ ಮಾಡಿದರು. ಆದರೆ, ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್ ಅವರು ಸಿಐಡಿ (CID) ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, "ಇದೊಂದು ವ್ಯವಸ್ಥಿತ ವಂಚನೆಯಾಗಿದ್ದು, ಹಗರಣದಲ್ಲಿ ಅಧ್ಯಕ್ಷರು, ಪರೀಕ್ಷಾ ನಿಯಂತ್ರಕರು ಮತ್ತು ಮಧ್ಯವರ್ತಿಗಳು ಭಾಗಿಯಾಗಿದ್ದಾರೆ," ಎಂದು ಗಂಭೀರವಾಗಿ ಪರಿಗಣಿಸಿದರು. ಅರ್ಜಿ ವಜಾಗೊಳಿಸುವಾಗ ಹೈಕೋರ್ಟ್ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. "ಇಂತಹ ಕೃತ್ಯಗಳಿಂದಾಗಿ ಕೆಪಿಎಸ್‌ಸಿ ಮೇಲಿದ್ದ ಸಾರ್ವಜನಿಕರ ವಿಶ್ವಾಸವೇ ನಾಶವಾಗಿದೆ. ರಾತ್ರಿ-ಹಗಲು ಕಷ್ಟಪಟ್ಟು ಓದಿದ ಅಭ್ಯರ್ಥಿಗಳ ಕಥೆ ಏನಾಗಬೇಕು?" ಎಂದು ಪೀಠ ಪ್ರಶ್ನಿಸಿತು. ನೀಟ್ ಪರೀಕ್ಷೆ ಅಕ್ರಮಗಳಿಂದ ಕೆಲ ವಿದ್ಯಾರ್ಥಿಗಳು ಆತ್ಮHತ್ಯೆ ಮಾಡಿಕೊಂಡಿದ್ದನ್ನು ಹಾಗೂ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದನ್ನು ಉಲ್ಲೇಖಿಸಿದ ಕೋರ್ಟ್, ಈ ಅಕ್ರಮದಲ್ಲೂ ಅರ್ಜಿದಾರರ ಕುಟುಂಬಸ್ಥರೇ ಭಾಗಿಯಾಗಿರುವುದು ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತು.

ಶರಣು ಐಟಿ ಅವರಿಂದ ಸಾಹುಕಾರ್ ಅಕ್ರಮ ಆಸ್ತಿ ದಾಖಲೆ ಬಿಡುಗಡೆ:

ಇನ್ನೊಂದೆಡೆ, ಶಿವಶಂಕರಪ್ಪ ಸಾಹುಕಾರ್ ಅವರ ಅಕ್ರಮ ಆಸ್ತಿ ಸಂಪಾದನೆ ಕುರಿತು ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಶರಣು ಐಟಿ ಗಂಭೀರ ಆರೋಪಗಳನ್ನು ಮಾಡಿ, ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. 2019ರಲ್ಲಿ ಕೆಪಿಎಸ್‌ಸಿ ಸದಸ್ಯರಾಗಿ ನೇಮಕವಾಗುವ ಮೊದಲು, ಸಾಹುಕಾರ್ ಕಲಬುರಗಿಯ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಮಾಸಿಕ ₹6,000 ವೇತನಕ್ಕೆ ಕೆಲಸ ಮಾಡುತ್ತಿದ್ದರು. ಆದರೆ, ಹುದ್ದೆಗೆ ಬಂದ ಬಳಿಕ ಕೋಟಿ ಕೋಟಿ ಮೌಲ್ಯದ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಶರಣು ಐಟಿ ಆರೋಪಿಸಿದ್ದಾರೆ.

ಸಾಹುಕಾರ್ ಅವರಿಗೆ ಇದ್ದ ಪಿತ್ರಾರ್ಜಿತ ಆಸ್ತಿ ಕೇವಲ 4 ಎಕರೆ ಮಾತ್ರ. ಆದರೆ ಕೆಪಿಎಸ್‌ಸಿ ಸದಸ್ಯ ಹಾಗೂ ಅಧ್ಯಕ್ಷರಾದ ಬಳಿಕ ತಮ್ಮ, ಹೆಂಡತಿ ಮತ್ತು ಮಗನ ಹೆಸರಿನಲ್ಲಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 100 ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿದ್ದಾರೆ ಎಂದು ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ. ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು ಈ ಆಸ್ತಿಗಳನ್ನು ಮಾಡಲಾಗಿದೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆದರೆ ಅವರ ಮತ್ತಷ್ಟು ಅಕ್ರಮ ಆಸ್ತಿಗಳು ಹೊರಬರಲಿವೆ ಎಂದು ಶರಣು ಐಟಿ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಪಿಎಸ್‌ಸಿ ಪರೀಕ್ಷಾ ಅಕ್ರಮಕ್ಕೆ ಸ್ಫೋಟಕ ಟ್ವಿಸ್ಟ್: ಮಂಜುನಾಥ ರಿವೀಲ್ ಮಾಡಿದ ಆ 7 ನಿಮಿಷಗಳ ಆಡಿಯೋ...!
ಕಾಂಗ್ರೆಸ್‌ನಲ್ಲಿ ' ಸರ್ಕಾರಿ ಬಂಗಲೆ' ವಾರ್: ಮಹದೇವಪ್ಪ ಮನೆಯಲ್ಲಿದ್ದಾಗಲೇ ಪೇಂಟಿಂಗ್ ಆರಂಭಿಸಿದ ಭೈರತಿ ಸುರೇಶ್!