ಕೆಪಿಎಸ್‌ಸಿ ಹಗರಣ, ಪ್ರೇಯಸಿಯ ಉಡುಗೊರೆ ರಹಸ್ಯ, ಜ್ಞಾನೇಂದ್ರನ ಲವರ್‌ ಚಿನ್ನದ ಬಿಲ್‌ ಕಟ್ಟಿದ ಬ್ಯಾಂಕ್‌ ಅಧ್ಯಕ್ಷ!

Published : Sep 14, 2026, 02:59 PM IST
IAS officer Gyanendra Kumar Gangwar

ಸಾರಾಂಶ

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದೆ. ಮುಖ್ಯ ಆರೋಪಿ ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ನೀಡಿದ ದುಬಾರಿ ಉಡುಗೊರೆಯ ಹಣವನ್ನು ಭಾಲ್ಕಿ ಪಟ್ಟಣದ ಬ್ಯಾಂಕ್ ಅಧ್ಯಕ್ಷರ ಖಾತೆಯಿಂದ ಪಾವತಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಬ್ಯಾಂಕ್‌ನ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ.

ಬೀದರ್‌: ಕೆಪಿಎಸ್‌ಸಿ ಅಕ್ರಮ ನೇಮಕಾತಿಯ ಕೋಟ್ಯಂತರ ರುಪಾಯಿ ಹಣದ ಪೈಕಿ, ಪ್ರಕರಣದ ಮುಖ್ಯ ರೂವಾರಿ ಎನ್ನಲಾದ ಜ್ಞಾನೇಂದ್ರ ಕುಮಾರ್‌ ತನ್ನ ಪ್ರೇಯಸಿಗೆ ನೀಡಿದ ದುಬಾರಿ ಉಡುಗೊರೆಯ ಬಿಲ್ಲನ್ನು ಜಿಲ್ಲೆಯ ಭಾಲ್ಕಿ ಪಟ್ಟಣದ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್‌ ಅಧ್ಯಕ್ಷನ ಖಾತೆಯಿಂದಲೇ ಪಾವತಿಸಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್‌ ಅಕ್ರಮ ದಂಧೆಯ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದ ಸುದೀರ್ಘ ತನಿಖೆಯ ಭಾಗವಾಗಿ ಜಿಲ್ಲೆಯ ಭಾಲ್ಕಿ ಪಟ್ಟಣದ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್‌, ತನಿಖಾ ಸಂಸ್ಥೆಯ ರೇಡಾರ್‌ನಲ್ಲಿದ್ದು, ಬ್ಯಾಂಕ್‌ನ ವಹಿವಾಟು ಹಾಗೂ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನ ಚಿನ್ನದ ಅಂಗಡಿಯೊಂದಕ್ಕೆ ₹15 ಲಕ್ಷ ಹಣ ವರ್ಗಾವಣೆ ಆಗಿರುವುದನ್ನು ಬ್ಯಾಂಕ್‌ನ ಅಧ್ಯಕ್ಷ ಓಂಕಾರ ಕನಶೆಟ್ಟಿ ಈಗಾಗಲೇ ಒಪ್ಪಿಕೊಂಡಿದ್ದಾರೆ. ತಮಗೆ ಜ್ಞಾನೇಂದ್ರಕುಮಾರ್‌ ಪರಿಚಯವಿಲ್ಲ. ಆದರೆ, ಬಸವರಾಜ್ ಕನ್ನಾಳೆ ಫೋನ್‌ ಮಾಡಿ ಸೂಚಿಸಿದ ಹಿನ್ನೆಲೆಯಲ್ಲಿ, ಆತ ತಮ್ಮ ಖಾತೆಗೆ ಹಾಕಿದ್ದ ಹಣದಲ್ಲೇ ₹15 ಲಕ್ಷವನ್ನು ಚಿನ್ನದ ಅಂಗಡಿಯ ಅಕೌಂಟ್‌ಗೆ ಜಮೆ ಮಾಡಿದ್ದಾಗಿ ಅವರು ತನಿಖೆ ವೇಳೆ ಸ್ಪಷ್ಟಪಡಿಸಿದ್ದಾಗಿ ತಿಳಿದು ಬಂದಿದೆ.

ಭಾಲ್ಕಿ ಬ್ಯಾಂಕ್‌ನಲ್ಲಿ ಕನ್ನಾಳೆ ಖಾತೆ ಇಲ್ಲ!

ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾಂಕ್‌ ಅಧ್ಯಕ್ಷ ಓಂಕಾರ ಕನಶೆಟ್ಟಿ, ತನಿಖೆ ಮತ್ತು ಹಣಕಾಸಿನ ವಹಿವಾಟಿನ ಕುರಿತು ಮತ್ತಷ್ಟು ಸ್ಫೋಟಕ ವಿವರಗಳನ್ನು ನೀಡಿದ್ದಾರೆ. ತಮ್ಮ ಬ್ಯಾಂಕ್‌ನಲ್ಲಿ ಬಸವರಾಜ ಕನ್ನಾಳೆ ಹೆಸರಿನಲ್ಲಿ ಯಾವುದೇ ಖಾತೆ ಇಲ್ಲದಿದ್ದರೂ, ತಮ್ಮ ವೈಯಕ್ತಿಕ ಖಾತೆಗೆ ಕನ್ನಾಳೆ ಒಟ್ಟು ₹70 ಲಕ್ಷ ಜಮೆ ಮಾಡಿರುವುದು ನಿಜ ಎಂದು ಹೇಳಿದ್ದಾರೆ.

ಕೃಷಿ ಭೂಮಿ ಮಾರಾಟ (ಲ್ಯಾಂಡ್‌ ಡೀಲಿಂಗ್‌) ಹಾಗೂ ಕಮಿಷನ್‌ ದಂಧೆಗೆ ಸಂಬಂಧಿಸಿದಂತೆ ಈ ಹಣಕಾಸಿನ ವ್ಯವಹಾರ ನಡೆದಿದ್ದು, ಬೆಂಗಳೂರು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಈ ಎಲ್ಲಾ ವಹಿವಾಟಿನ ಸಂಪೂರ್ಣ ಮಾಹಿತಿಯನ್ನು ಒದಗಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ, ಬ್ಯಾಂಕ್‌ ಗ್ರಾಹಕರಿಗೆ ಅಭಯ ನೀಡಿರುವ ಅಧ್ಯಕ್ಷರು, ತಮ್ಮ ಬ್ಯಾಂಕ್‌ಗೂ, ಬಸವರಾಜ ಕನ್ನಾಳೆಗೂ ಯಾವುದೇ ರೀತಿಯ ನೇರ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಸಿಐಡಿ ವಿಚಾರಣೆ ನಡೆಯುತ್ತಿದೆಯೇ ಹೊರತು, ಬ್ಯಾಂಕ್‌ ಮೇಲೆ ಹೊಸದಾಗಿ ಯಾವುದೇ ದಾಳಿ ನಡೆದಿಲ್ಲ. ಭಾಲ್ಕಿ ಪಟ್ಟಣದ ವ್ಯಾಪಾರಿಗಳು, ಬ್ಯಾಂಕ್‌ನ ಗ್ರಾಹಕರು ಮತ್ತು ಸದಸ್ಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

-ಓಂಕಾರ ಕನಶೆಟ್ಟಿ, ಬ್ಯಾಂಕ್‌ ಅಧ್ಯಕ್ಷ.

ಗರ್ಲ್‌ಫ್ರೆಂಡ್‌ಗೆ ಜ್ಞಾನೇಂದ್ರ ಕೊಡಿಸಿದ್ದ ಒಡವೆ ಸಿಐಡಿ ವಶ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಆರೋಪಿಯಾಗಿರುವ ಐಎಎಸ್​ ಅಧಿಕಾರಿ ಜ್ಞಾನೇಂದ್ರಕುಮಾರ್‌ ಅವರ ಗೆಳತಿ ಬಳಿಯಿದ್ದ ₹23 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಜ್ಞಾನೇಂದ್ರ ಕುಮಾರ್‌ ಕೆಪಿಎಸ್ಸಿ ಅಕ್ರಮದ ಹಣದಲ್ಲಿ ತನ್ನ ಗೆಳತಿಗೆ ₹23 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿ ಕೊಟ್ಟಿರುವುದನ್ನು ಪ್ರಕರಣದ ಬೆನ್ನು ಹತ್ತಿದ್ದ ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಜ್ಞಾನೇಂದ್ರ ಕುಮಾರ್‌ ಬೆಂಗಳೂರಿನ ಡಿಕನ್ಸನ್ ರಸ್ತೆಯ ಜ್ಯುವೆಲ್ಲರಿ ಶಾಪ್‌ವೊಂದಕ್ಕೆ ಗೆಳತಿಯ ಕರೆದೊಯ್ದು ಆಭರಣ ಕೊಡಿಸಿದ್ದರು. ಆಭರಣ ಅಂಗಡಿಗೆ ಹೋಗಿ ಸಿಸಿ ಕ್ಯಾಮರಾ ದೃಶ್ಯ ಮತ್ತು ಬಿಲ್‌ ಅನ್ನು ಜಪ್ತಿ ಮಾಡಿದ್ದ ಅಧಿಕಾರಿಗಳು ಇದೀಗ ಜ್ಞಾನೇಂದ್ರ ಗೆಳತಿಯಿಂದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

273 ಮಂದಿಯ ವಿಚಾರಣೆ

ಅಕ್ರಮಕ್ಕೆ ಸಂಬಂಧಿಸಿದಂತೆ ₹5 ಕೋಟಿ ಕಪ್ಪು ಹಣ ವಹಿವಾಟು ನಡೆದಿರುವುದು ಸಿಐಡಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದ್ದು, ₹85 ಲಕ್ಷ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಇದುವರೆಗೂ ಪ್ರಕರಣದಲ್ಲಿ 273 ಮಂದಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ 12 ಅಭ್ಯರ್ಥಿಗಳು ಸೇರಿ ಕೆಲ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಆರೋಪಿ ಬಸವರಾಜ್ ಕನ್ನಾಳೆ ಸಹಚರರಿಗೂ ಬಲೆ ಬೀಸಿರುವ ಸಿಐಡಿ, ಪ್ರಕರಣ ಸಂಬಂಧ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಈ ನಡುವೆ ಕೆಪಿಎಸ್‌ಸಿ ಮಾಜಿ ಸದಸ್ಯೆ ಶಾಂತಾ ಹೊಸಮನಿ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಮ್ಮೆ ನೋಟಿಸ್​​​ ಕೊಡಲು ಸಿಐಡಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ: ಕಾವೇರಿ ಕೊಳ್ಳದಲ್ಲಿ ಆತಂಕ; ಆಲಮಟ್ಟಿ ಭರ್ತಿ, ಕೆಆರ್‌ಎಸ್‌ ಖಾಲಿ ಖಾಲಿ!
ಸೆ.17ರ ಕಲ್ಯಾಣ ಕರ್ನಾಟಕ ಉತ್ಸವದಂದು 'ಪ್ರತ್ಯೇಕ ರಾಜ್ಯ ಧ್ವಜ' ಹಾರಾಟ; ಕನ್ನಡಪರ ಸಂಘಟನೆಗಳಿಂದ ಮುಹೂರ್ತ ಫಿಕ್ಸ್!