ಕೆಪಿಎಸ್ಸಿ ನೇಮಕಾತಿ ಅಕ್ರಮ: ಐಎಎಸ್‌ ಜ್ಞಾನೇಂದ್ರ ಬಂಧನ, ಸಾಹುಕಾರ್‌, ಇತರರಿಗೀಗ ನಡುಕ ಶುರು!

Kannadaprabha News   | Kannada Prabha
Published : Aug 30, 2026, 06:31 AM IST
KPSC Recruitment Irregularities IAS Officer Jnanendra arrested by CID  What Next Legal Steps?

ಸಾರಾಂಶ

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರನ್ನು ಬಂಧಿಸಿದ್ದಾರೆ. ಪರೀಕ್ಷಾ ನಿಯಂತ್ರಕರಾಗಿದ್ದ ಅವರ ಪಾತ್ರ ಮತ್ತು ಓಎಂಆರ್ ಶೀಟ್ ತಿದ್ದುಪಡಿ ಆರೋಪಗಳ ಮೇಲೆ ಸುದೀರ್ಘ ವಿಚಾರಣೆ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ಆ.30): ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಎರಡು ದಿನಗಳ ಸುದೀರ್ಘ ವಿಚಾರಣೆ ಬಳಿಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರನ್ನು ಸಿಐಡಿ ಶನಿವಾರ ಬಂಧಿಸಿದೆ.

ಐಎಎಸ್‌ ಅಧಿಕಾರಿ ಬಂಧನ ಬೆನ್ನಲ್ಲೇ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಕೆಲ ಸದಸ್ಯರು ಮತ್ತು ಅಧಿಕಾರಿ-ಸಿಬ್ಬಂದಿ ಎದೆಯಲ್ಲಿ ಭೀತಿ ಶುರುವಾಗಿದೆ ಎನ್ನಲಾಗಿದೆ.

ನೋಟಿಸ್ ಹಿನ್ನೆಲೆಯಲ್ಲಿ ಅರಮನೆ ರಸ್ತೆಯಲ್ಲಿರುವ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಜ್ಞಾನೇಂದ್ರ ಹಾಜರಾಗಿದ್ದರು. ಹಗರಣದ ಕುರಿತು ಹಲವು ಸುತ್ತು ಪ್ರಶ್ನಿಸಿದ ಸಿಐಡಿ ಅಧಿಕಾರಿಗಳು, ಅಂತಿಮವಾಗಿ ಶನಿವಾರ ರಾತ್ರಿ ಅವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಗರದಲ್ಲಿ ಭಾನುವಾರ ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಪುರಾವೆ ಸಿಕ್ಕ ಹಿನ್ನೆಲೆ ಬಂಧನ?:

ಕೆಪಿಎಸ್‌ಸಿ ನೇಮಕಾತಿ ಹಗರಣ ಬೆಳಕಿಗೆ ಬಂದ ನಂತರ ಎರಡು ವಾರಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ನಿಗೂಢವಾಗಿ ಅಜ್ಞಾತವಾಸಿಯಾಗಿದ್ದ ಜ್ಞಾನೇಂದ್ರ ಅವರು, ಕೊನೆಗೆ ಶುಕ್ರವಾರ ಸಿಐಡಿ ಮುಂದೆ ಪ್ರತ್ಯಕ್ಷವಾಗಿದ್ದರು. ಹಗರಣದಲ್ಲಿ ಅವರ ಪಾತ್ರಕ್ಕೆ ಪುರಾವೆ ಲಭಿಸಿದ ಹಿನ್ನೆಲೆಯಲ್ಲಿ ಸಿಐಡಿ ಬಂಧಿಸಿದೆ ಎಂದು ಮೂಲಗಳು ಹೇಳಿವೆ.

400 ಪಶುವೈದ್ಯಾಧಿಕಾರಿಗಳ ಹುದ್ದೆಗೆ ಕೆಪಿಎಸ್‌ಸಿ ನಡೆಸಿದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ನೇಮಕಾತಿ ನಡೆದಾಗ ಕೆಪಿಎಸ್‌ಸಿಯಲ್ಲಿ ಜ್ಞಾನೇಂದ್ರ ಅವರು ಪರೀಕ್ಷಾ ನಿಯಂತ್ರಕರಾಗಿದ್ದರು. ಹೀಗಾಗಿ ಇಡೀ ಪರೀಕ್ಷೆಯ ಹೊಣೆಗಾರಿಕೆ ನಿರ್ವಹಿಸಿದ್ದ ಅವರು, ಅಕ್ರಮ ನೇಮಕಾತಿಯಲ್ಲಿ ಪಾತ್ರವಹಿಸಿದ್ದಾರೆ. ಇದಕ್ಕೆ ಸೂಕ್ತ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಏನಿದು ಆರೋಪ?:

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 (342+58 ಬ್ಯಾಕ್‌ಲಾಗ್‌) ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ ನಡೆಸಿತ್ತು. 2024ರ ಜು.29ರಂದು ಅಧಿಸೂಚನೆ ಹೊರಡಿಸಿದ್ದ ಆಯೋಗವು, 2026ರ ಜನವರಿ 8 ಮತ್ತು 9 ರಂದು ಲಿಖಿತ ಪರೀಕ್ಷೆ ನಡೆಸಿತ್ತು. ಜುಲೈನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

ಆದರೆ ಹೀಗೆ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬಹುತೇಕರು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಸಂಬಂಧಿ ಅಭ್ಯರ್ಥಿಗಳಾಗಿದ್ದಾರೆ ಎಂದು ಆರೋಪ ಬಂದಿತ್ತು.

ಕೆಪಿಎಸ್‌ಸಿ ನಡೆಸಿದ್ದ ಈ ಪರೀಕ್ಷೆ ತುಂಬಾ ಕಠಿಣವಾಗಿತ್ತು. ಬೇರೆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದವರು, ರಾಷ್ಟ್ರದ ಪ್ರತಿಷ್ಠಿತ ಯುಪಿಎಸ್‌ಸಿ ನಡೆಸುವ ಐಎಫ್‌ಎಸ್‌ ಪರೀಕ್ಷೆಯಲ್ಲಿ ಉತೀರ್ಣರಾದ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಕೇವಲ 350 ಅಂಕ ಪಡೆಯಲು ವಿಫಲರಾಗಿದ್ದರು. ಆದರೆ ಪಶುವೈದ್ಯ ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿರುವ ಅಭ್ಯರ್ಥಿಗಳೇ 400ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಅನುಮಾನ ಮೂಡಿಸುವಂತಿದೆ ಎಂದು ನೊಂದ ಅಭ್ಯರ್ಥಿ ಡಾ.ಮಂಜುನಾಥ್ ನೀಡಿದ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದರು.

ಈ ಅನುಮಾನ ಪುಷ್ಟೀಕರಿಸುವಂತೆ ಆಗಿನ ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪನವರ ಸಂಬಂಧಿ, ಅಭ್ಯರ್ಥಿ ಸೂಗುರೇಶ್ ಜಾಕ ಎಂಬುವರು ಪದವಿಯಲ್ಲಿ 2 ಪರೀಕ್ಷೆಯಲ್ಲಿ ಅನುತೀರ್ಣಗೊಂಡು ಕಂಪಾರ್ಟ್ ಮೆಂಟ್ ಪರೀಕ್ಷೆಯಲ್ಲಿ ಉತೀರ್ಣಗೊಂಡು ಕನಿಷ್ಠ ಸಿಜಿಪಿಎ ಜತೆ ಪದವಿ ಮುಗಿಸಿದ್ದರು. ಆದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭರ್ಜರಿ 450 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣರಾಗಿದ್ದರು. ಇದು ಭಾರೀ ಅನುಮಾನಕ್ಕೆ ಗ್ರಾಸವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.

ಓಎಂಆರ್‌ ತಿದ್ದುಪಡಿಯಲ್ಲಿ ಐಎಎಸ್ ಕೈವಾಡ ಶಂಕೆ

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಕೆಲವರ ಓಎಂಆರ್‌ ತಿದ್ದುಪಡಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರ ಕೈವಾಡವಿದೆ. ಇದಕ್ಕೆ ಸಿಐಡಿ ತನಿಖೆಯಲ್ಲಿ ಪುರಾವೆ ಲಭಿಸಿದೆ ಎಂದು ತಿಳಿದು ಬಂದಿದೆ.

ಪರೀಕ್ಷೆಯ ಹಿಂದಿನ ಎರಡು ದಿನಗಳು ಕೆಲ ಅಭ್ಯರ್ಥಿಗಳ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದವು. ಪರೀಕ್ಷಾ ಕೇಂದ್ರಗಳಿಗೆ ತಮ್ಮ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಮಧ್ಯವರ್ತಿಗಳು ಕರೆತಂದಿದ್ದರು. ಹೊರರಾಜ್ಯ ಹಾಗೂ ಇತರೆ ಸ್ಥಳದಲ್ಲಿನ ಹೋಟೆಲ್ ಅಥವಾ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಮಾಡಿಸಿದ್ದರು. ಆ ಸ್ಥಳಗಳಲ್ಲಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ನೀಡಿ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಿದ್ಧಗೊಳಿಸಿದ್ದರು. ನಂತರ ಪರೀಕ್ಷಾ ಕೇಂದ್ರದ ಸಮೀಪಕ್ಕೆ ಆ ಅಭ್ಯರ್ಥಿಗಳನ್ನು ಮಧ್ಯವರ್ತಿಗಳು ತಂದು ಬಿಟ್ಟಿದ್ದರು ಎಂದು ದೂರಿನಲ್ಲಿ ನೊಂದ ಅಭ್ಯರ್ಥಿ ಆಪಾದಿಸಿದ್ದರು.

ಕೆಲವೇ ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಬಹುಪಾಲು ಪ್ರಶ್ನೆಗಳಿಗೆ ಉತ್ತರಿಸದೆ ಖಾಲಿ ಓಎಂಆರ್ ಪ್ರತಿಯನ್ನು ಕೆಲ ಅಭ್ಯರ್ಥಿಗಳು ನೀಡಿದ್ದರು. ಈ ಖಾಲಿ ಉತ್ತರ ಪತ್ರಿಕೆಗಳನ್ನು ನಂತರ ಭರ್ತಿ ಮಾಡಲಾಗಿದೆ. ಹೀಗೆ ಓಎಂಆರ್ ತಿದ್ದುಪಡಿಕೆಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಪಾತ್ರವಹಿಸಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಸರಾ ಪರೇಡ್‌ಗೆ ಸೇನೆ, ಚಲನಚಿತ್ರ ನಟರ ಹೆಜ್ಜೆ! ವಿಭಿನ್ನ ದಸರಾ, ಮೆರವಣಿಗೆಯ ರೂಪ ಬದಲು: ಡಿಕೆಶಿ - ಕಂಬಳ ನಡೆಯುತ್ತಾ?
ನಟ ವಿ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ 'ಕ್ರೇಜಿ ಸ್ಟಾರ್' ಎಂಟ್ರಿ ಪಕ್ಕಾನಾ?