
ಎಚ್.ಎಸ್. ಅವಿನಾಶ್
ಬೆಂಗಳೂರು (ಜು.1): ಅಕ್ರಮ, ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಆರೋಪಗಳಿಂದಲೇ ಆಗಾಗ ವಿವಾದಕ್ಕೀಡಾಗುವ ಕರ್ನಾಟಕ ಲೋಕಸೇವಾ ಆಯೋಗ (KPSC)ವು ಈಗ ಮತ್ತೆ ಅಂತಹುದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್(Shivashankarappa S. Sahukar) ಅವರು ಕೈಗಾರಿಕಾ ಇಲಾಖೆಗಾಗಿ ನಡೆದ ನೇಮಕಾತಿಯಲ್ಲಿ ಒಬ್ಬ ಮಗಳಿಗೆ ಉದ್ಯೋಗ ದೊರಕಿಸಿದ್ದಾರೆ. ಮತ್ತೊಬ್ಬಳು ಮಗಳಿಗೆ ಕೆಲಸ ದೊರಕುವಂತೆ ಮಾಡುವ ಅವರ ಯತ್ನ ವಿಫಲವಾಗಿದೆ. ಇದಕ್ಕಾಗಿ ಸುಳ್ಳು ಆದಾಯದ ಪ್ರಮಾಣ ಪತ್ರ ಸಲ್ಲಿಕೆಗೂ ಸಹಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿವಶಂಕರಪ್ಪ ಎಸ್. ಸಾಹುಕಾರ್ ಅವರು 2019ರ ಆಗಸ್ಟ್ 31ರಂದು ಕೆಪಿಎಸ್ಸಿ ಸದಸ್ಯರಾಗಿ ನೇಮಕವಾದರು. 2021ರ ಏಪ್ರಿಲ್‌ನಲ್ಲಿ ಅಧ್ಯಕ್ಷರಾಗಿ ನೇಮಕವಾದರು. 2024ರ ಮಾರ್ಚ್‌ನಲ್ಲಿ ಕೈಗಾರಿಕಾ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನಡೆದ ನೇಮಕಾತಿಗೆ ಅವರ ಮಕ್ಕಳಾದ ಶ್ರೀಮತಿ ಎಸ್.ಎಸ್. ಅನುರಾಧಾ ಹಾಗೂ ಕುಮಾರಿ ಸುಮಾ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಅನುರಾಧಾ ಅವರ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟವಾಗಿದೆ ಎಂದು ತಿಳಿದುಬಂದಿದೆ.
ಕೆಪಿಎಸ್ಸಿ ಅಧ್ಯಕ್ಷರು ಅಥವಾ ಸದಸ್ಯರ ಮಕ್ಕಳು ಸರ್ಕಾರಿ ಉದ್ಯೋಗಕ್ಕೆ ಸೇರಲೇಬಾರದೇ? ಅರ್ಹತೆ ಇದ್ದರೂ, ಪರೀಕ್ಷೆ ಪಾಸು ಮಾಡಿದರೂ ಸರ್ಕಾರಿ ಉದ್ಯೋಗಕ್ಕೆ ಸೇರಬಾರದು ಎಂಬ ನಿಯಮವಿದೆಯೇ? ಎಂದರೆ ಇಲ್ಲ. ಸರಿಯಾದ ಮಾರ್ಗದಲ್ಲಿ ಪರೀಕ್ಷೆ ಬರೆದು ಉದ್ಯೋಗ ಗಿಟ್ಟಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ, ಕೆಪಿಎಸ್ಸಿ ಅಧ್ಯಕ್ಷರ ಮಕ್ಕಳಿಬ್ಬರ ನೇಮಕಾತಿ ಧಾಟಿಯಲ್ಲಿ ಹಲವು ಅನುಮಾನಾಸ್ಪದ ದಾಖಲೆ, ವೈಖರಿ ಎದ್ದು ಕಾಣುತ್ತಿರುವುದನ್ನು ಕೆಪಿಎಸ್ಸಿ ಆಯೋಗವು ತಡವಾಗಿ ಗಮನಿಸಿ ಪ್ರಶ್ನಿಸಿದೆ.
ಏನಿದು ಅಕ್ರಮ?
ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಅನುರಾಧಾ ಅವರು ಹೈದ್ರಾಬಾದ್ ಕರ್ನಾಟಕ ಸಾಮಾನ್ಯ ಮಹಿಳೆ (HK GM W) ಕೋಟಾದಲ್ಲಿ ನೇಮಕವಾಗಿದ್ದಾರೆ. ಅವರ ಸಹೋದರಿ ಸುಮಾ ಅವರು RPC (Residual Parent Category) ಕೆಟಗರಿಯ 3ಬಿ ಕೋಟಾದಲ್ಲಿ ನೇಮಕ ಬಯಸಿದ್ದಾರೆ. ಜೊತೆಗೆ ತಮ್ಮ ಪೋಷಕರ ವಾರ್ಷಿಕ ಆದಾಯ 40 ಸಾವಿರ ರುಪಾಯಿ ಎಂದು ಸುಮಾ ಅವರು ಜಾತಿ, ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಒಬ್ಬ ಪುತ್ರಿ ಹೈದ್ರಾಬಾದ್ ಕರ್ನಾಟಕ ಕೋಟಾದಡಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಬ್ಬ ಪುತ್ರಿ ಹೈದ್ರಾಬಾದ್ ಕರ್ನಾಟಕ ಹೊರತುಪಡಿಸಿದ ಜಿಲ್ಲೆಗಳಿಗಾಗಿ ಇರುವ RPC ಕೆಟಗರಿಯ 3ಬಿ ಕೋಟಾದಲ್ಲಿ ನೇಮಕ ಬಯಸಿದ್ದಾರೆ. ಜೊತೆಗೆ 2020ರ ಮಾರ್ಚ್‌ನಲ್ಲಿ ಸರ್ಕಾರ ನೀಡಿರುವ ಜಾತಿ, ಆದಾಯ ಪ್ರಮಾಣ ಪತ್ರದಲ್ಲಿ ತಮ್ಮ ಪೋಷಕರ ಆದಾಯ 40 ಸಾವಿರ ರುಪಾಯಿ ಎಂದು ನಮೂದಾಗಿದೆ. ಆದರೆ, ಆ ಹೊತ್ತಿಗಾಗಲೇ ಕೆಪಿಎಸ್ಸಿ ಸದಸ್ಯರಾಗಿದ್ದ ಶಿವಶಂಕರಪ್ಪ ಅವರ ವಾರ್ಷಿಕ ಆದಾಯ 40 ಲಕ್ಷ ರುಪಾಯಿಯಷ್ಟು ಇತ್ತು. ಹೀಗಾಗಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಅಕ್ರಮ ಆದಾಯ ಪ್ರಮಾಣ ಪತ್ರ ಪಡೆದು ಸಲ್ಲಿಸಿದಂತಾಗಿದೆ.
ತಾತ್ಕಾಲಿಕ ಪಟ್ಟಿ ಪ್ರಕಟಿಸಲು ದಾಖಲೆ ಪರಿಶೀಲನೆ ವೇಳೆ ಸುಮಾ ಅವರು ತಪ್ಪು ದಾಖಲೆ ನೀಡಿರುವುದು ಪತ್ತೆಯಾಗಿದೆ. ಜೊತೆಗೆ ಅಧ್ಯಕ್ಷರ ಮಗಳು ಎಂಬುದೂ ಖಚಿತಪಟ್ಟಿದೆ. ಸುಳ್ಳು ಮಾಹಿತಿ, ಅಕ್ರಮ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವುದು ದೃಢಪಟ್ಟಿದೆ. ಹೀಗಾಗಿ ನಿಯಮಗಳ ಪ್ರಕಾರ ಸುಮಾ ಅವರ ಆಯ್ಕೆಯನ್ನು ತಿರಸ್ಕರಿಸಲು ಆಯೋಗ ತೀರ್ಮಾನಿಸಿದೆ.
ಇದೇ ಜೂನ್ 19ರ ಸಭೆಯಲ್ಲಿ ಆಯೋಗದ ಸದಸ್ಯರು ಹಾಗೂ ಕಾರ್ಯದರ್ಶಿಗಳು ಅಧ್ಯಕ್ಷರ ಗಮನಕ್ಕೆ ಈ ವಿಷಯ ತಂದು ಆಕ್ಷೇಪ ಎತ್ತಿದ್ದಾರೆ. ಮೊದಲಿಗೆ ಹಾರಿಕೆ ಉತ್ತರ ನೀಡಿ ನಂತರದಲ್ಲಿ ಸಾಮಾನ್ಯ ಕೋಟಾದಡಿ ನೇಮಕ ಮಾಡಿಸಲು ಅಧ್ಯಕ್ಷರು ಯತ್ನಿಸಿದ್ದಾರೆ. ಇದು ನಿಯಮಗಳ ಉಲ್ಲಂಘನೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಹಾಗೂ ಇತರ ಸದಸ್ಯರು ನಿರಾಕರಿಸಿದ್ದಾರೆ. ಸಂದರ್ಶನ ಇಲ್ಲದೆ ಬಹುಆಯ್ಕೆಯ ಪ್ರಶ್ನೆಗಳ ಪರೀಕ್ಷೆ ಮೂಲಕ ನಡೆದ ನೇಮಕಾತಿ ಇದು. ಪರೀಕ್ಷೆಯಲ್ಲಿ ಏನಾದರೂ ಅಕ್ರಮ ನಡೆದಿತ್ತೇ ಎಂಬ ಸಂಶಯಕ್ಕೂ ಉತ್ತರ ಕಂಡುಕೊಳ್ಳುವ ಕಾರ್ಯ ನಡೆದಿದೆ.
ಮಾಹಿತಿ ನೀಡುವ ಅಧಿಕಾರ ಇಲ್ಲ: ಕಾರ್ಯದರ್ಶಿ
ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜ್ಯೋತಿ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಏನು ನಡೆದಿದೆಯೋ ಅದರ ಬಗ್ಗೆ ಕಾನೂನು ಪ್ರಕಾರ ಕ್ರಮವಾಗಲಿದೆ. ಎಲ್ಲವನ್ನೂ ಸರ್ಕಾರದ ಗಮನಕ್ಕೆ ತರಲಾಗುವುದು. ಇದರ ಬಗ್ಗೆ ಹೆಚ್ಚಿನ ವಿವರಣೆ, ಮಾಹಿತಿ ನೀಡುವ ಅಧಿಕಾರ ನನಗಿಲ್ಲ ಎಂದು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿ ಮಾತು ಮುಗಿಸಿದರು.
ಮಾಹಿತಿ ಕೊಟ್ಟವರನ್ನೇ ಕೇಳಿಕೊಳ್ಳಿ: ಶಿವಶಂಕರಪ್ಪ
ಈ ಕುರಿತು ಪ್ರತಿಕ್ರಿಯೆಗಾಗಿ ‘ಕನ್ನಡಪ್ರಭ’ವು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಸಂಪರ್ಕಿಸಿದಾಗ, ‘ಒಬ್ಬರು ನೇಮಕವಾಗಿದ್ದಾರೆ. ಇಬ್ಬರಲ್ಲ’ ಎಂದರು. ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿದ್ದಾರಂತಲ್ಲ ಎನ್ನುತ್ತಿದ್ದಂತೆ ಕೋಪಗೊಂಡು ‘ನಿಮಗೆ ಮಾಹಿತಿ ಕೊಟ್ಟವರನ್ನೇ ಕೇಳಿಕೊಳ್ಳಿ’ ಎಂದು ಫೋನ್ ಕಟ್ ಮಾಡಿದರು. ಮತ್ತೆ ಪ್ರಯತ್ನಿಸಿದರೂ ಅವರು ಫೋನ್ ತೆಗೆಯಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ