ಕೇಂದ್ರದಿಂದ ನೀವಾದ್ರೂ 4,663 ಕೋಟಿ ರೂ.ಬರ ಪರಿಹಾರ ಕೊಡಿಸಿ; ಕೇಂದ್ರ ಚುನಾವಣಾ ಆಯೋಗಕ್ಕೇ ಕಾಂಗ್ರೆಸ್ ಅಪೀಲ್

By Sathish Kumar KHFirst Published Apr 9, 2024, 6:33 PM IST
Highlights

ಕೇಂದ್ರಕ್ಕೆ ಹೈಪವರ್ ಕಮಿಟಿ ಸಭೆ ನಡೆಸಲು ಅನುಮತಿ ಕೊಟ್ಟು ನೀವಾದರೂ ಬರ ಪರಿಹಾರ 4,633 ಕೋಟಿ ರೂ. ಕೊಡಿಸಿ ಎಂದು ಚುನಾವಣಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ದೂರು ಸಲ್ಲಿಕೆ ಮಾಡಿದೆ.

ಬೆಂಗಳೂರು (ಏ.09): ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಕುಡಿಯುವ ನೀರು, ಮೇವು ಪೂರೈಕೆಗೂ ಸಮಸ್ಯೆಯಾಗಿದೆ. ಹೀಗಾಗಿ, ಕೇಂದ್ರಕ್ಕೆ ಹೈಪವರ್ ಕಮಿಟಿ ಸಭೆ ನಡೆಸಲು ಅನುಮತಿ ಕೊಟ್ಟು ನೀವಾದರೂ ಬರ ಪರಿಹಾರ 4,633 ಕೋಟಿ ರೂ. ಕೊಡಿಸಿ ಎಂದು ಚುನಾವಣಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ದೂರು ಸಲ್ಲಿಕೆ ಮಾಡಿದೆ.

ಹೌದು, ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರವಾಗಿ 4663 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕಿದೆ. ಆದರೆ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ ಹಣಕಾಸು ಸಚಿವರು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಣ ಬಿಡುಗಡೆಗೆ ಅಡ್ಡಿಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಆದರೆ, ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಜಾನುವಾರುಗಳಿಗೆ ಮೇವಿನ ಪೂರೈಕೆ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಬೇಕಿದೆ. ಜೊತೆಗೆ, ರೈತರಿಗೆ ಬರ ಪರಿಹಾರವನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹೈಪವರ್ ಕಮಿಟಿ ಮೀಟಿಂಗ್ ಮಾಡಲು ಅನುಮತಿಯನ್ನು ಕೊಟ್ಟು ಕರ್ನಾಟಕಕ್ಕೆ ನೀಡಬೇಕಾದ ಬರ ಪರಿಹಾರವನ್ನು ಮಂಜೂರು ಮಾಡಲು ಚುನಾವಣಾ ಆಯೋಗದಿಂದ ನಿರ್ದೇಶನ ನಿಡಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಬರ ಪರಿಹಾರ ಕೊಡುವ ವಿಚಾರದಲ್ಲಿ ಎಲೆಕ್ಷನ್ ಕಮಿಷನ್‌ನ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬರ ಪರಿಹಾರ ನೀಡಲು ಹೈಪವರ್ ಕಮಿಟಿ ಸಭೆ ನಡೆಯಬೇಕು. ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ನಾವು ಪತ್ರ ಬರೆದಿದ್ದೇವೆ ಆದರೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ ಎಂದು ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಇದೆ. ಕಾನೂನಿನಲ್ಲಿ ಬರ ಪರಿಹಾರ ಕೊಡುವ ಅವಕಾಶ ಇದ್ದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಹೇಳುತ್ತಿದೆ. ಹೀಗಾಗಿ ಹೈಪವರ್ ಕಮಿಟಿ ಮೀಟಿಂಗ್ ಮಾಡಲು ಚುನಾವಣಾ ಆಯೋಗ ನಿರ್ದೇಶನ ನೀಡಬೇಕು. ಈ ಮೂಲಕ ತಕ್ಷಣವೇ ಬರ ಪರಿಹಾರ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಈ ಕುರಿತು ಮಾಧ್ಯಗಳೊಂದಿಗೆ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, ಕೇಂದ್ರ ಚುನಾವಣಾ ಆಯೋಗಕ್ಕೆ ರೆಪ್ರೆಸೆಂಟೇಷನ್ ಕೊಟ್ಟಿದ್ದೇವೆ. ರಾಜ್ಯ ಮುಖ್ಯಚುನಾವಣಾ ಆಯೋಗದ ಮೂಲಕ ಕೊಟ್ಟಿದ್ದೇವೆ. ಬರ ಪರಿಹಾರ ಬಿಡುಗಡೆಗೆ ಹೈಪವರ್ ಮೀಟಿಂಗ್ ಮಾಡಲು ಕೇಂದ್ರ ಚುನಾವಣಾ ಆಯೋಗ ಅನುಮತಿ ಕೊಟ್ಟಿಲ್ಲ. ಹೀಗಾಗಿ, ಬರ ಪರಿಹಾರ ಕೊಡಲಿ ಆಗಿಲ್ಲವೆಂದು ಮೋದಿ, ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಶಾ ಹೇಳಿಕೆ ಕೊಟ್ಟಿದ್ದರು. ಹೀಗಾಗಿ, ಚುನಾವಣಾ ಆಯೋಗಕ್ಕೆ ರೆಪ್ರೆಸೆಂಟೇಷನ್ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು, ನಿನ್ನೆ ಕೃಷ್ಣ ಬೈರೇಗೌಡರು ಹೇಳಿದ್ದಷ್ಟೇ ಸತ್ಯ: ಸಿಎಂ ಸಿದ್ದರಾಮಯ್ಯ

ಮುಂದುವರೆದು, ರಾಜ್ಯದ 244 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. 48 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 37 ಸಾವಿರ ಕೋಟಿ  ರೂ. ಮೊತ್ತದ ಬೆಳೆ ನಷ್ಟವಾಗಿದೆ. NDRF ನಿಯಮಾವಳಿ ಪ್ರಕಾರ 4,630 ಕೋಟಿ ಕೊಡಬೇಕು. ಜೊತೆಗೆ ಅಡಿಷನಲ್ ಆಗಿ 18 ಸಾವಿರ ಕೋಟಿ ರೂ. ಕೊಡಬೇಕು. ಈ ಬಗ್ಗೆ ಕೇಂದ್ರಕ್ಕೆ ಸೆಪ್ಟಂಬರ್ ನಲ್ಲಿ ಪತ್ರ ಬರೆಯಲಾಗಿತ್ತು. ಇಲ್ಲಿಗೆ 7 ತಿಂಗಳಾಗಿದೆ. ಆದರೆ ಯಾವುದೇ ಪರಿಹಾರದ ಹಣ ಕೊಟ್ಟಿಲ್ಲ. ಕಾನೂನು ಪ್ರಕಾರ ಬರಬೇಕಾದ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ ಸುಪ್ರೀಂಗೂ ಅರ್ಜಿ ಸಲ್ಲಿಸಿತ್ತು.

ಮೊನ್ನೆ ಸುಪ್ರೀಂ ಕೇಂದ್ರಕ್ಕೆ ಛೀಮಾರಿ ಹಾಕಿದೆ. ಹೀಗಿದ್ರೂ ಇನ್ನೂ ಯಾವುದೇ ಕ್ರಮ ಜರುಗಿಸಿಲ್ಲ. ಜೊತೆಗೆ, ಚುನಾವಣಾ ಆಯೋಗ ಮೀಟಿಂಗ್‌ಗೆ ಅವಕಾಶ ಕೊಡದ ಕಾರಣ ಹಣ ಕೊಡಲು‌ ಬರಲ್ಲ ಎಂದಿದ್ದಾರೆ. ಹೀಗಾಗಿ ಇಂದು ನಾವು ಅಪೀಲ್ ಮಾಡಿದ್ದೇವೆ. ಚುನಾವಣಾ ಆಯೋಗಕ್ಕೆ ನಾವು ಅಫೀಲ್ ಮಾಡಿದ್ದೇವೆ. ಹೈ ಲೆವೆಲ್ ಕಮಿಟಿ ಮೀಟಿಂಗ್ ಗೆ ಅವಕಾಶ ನೀಡುವಂತೆ ಕೇಳಿದ್ದೇವೆ. ಒಟ್ಟು 23 ಸಾವಿರ ಕೋಟಿ ಹಣ ಬಿಡುಗಡೆಗೆ ಒತ್ತಾಯಿಸಿದ್ದೇವೆ. ಚುನಾವಣಾ ಆಯೋಗ ಕೇಂದ್ರಕ್ಕೆ ಒತ್ತಡ ತರಬೇಕು. ನಮ್ಮ ದೂರಿನ ಬಗ್ಗೆ ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

click me!