
ಬೆಂಗಳೂರು (ಅ.18): ಸರ್ಕಾರದಲ್ಲಿರುವ ಸಚಿವರುಗಳಿಗೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಲು ಆಗದಿದ್ದರೆ ಮಂತ್ರಿಗಿರಿ ಅಧಿಕಾರ ಬಿಟ್ಟು ಮನೆಗೆ ಹೋಗಲಿ. ಅದನ್ನು ಬಿಟ್ಟು ಸ್ವಂತಕ್ಕೋಸ್ಕರ ರಾಜ್ಯದ ಜನರನ್ನು ಬಲಿಕೊಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಕೇವಲ 10 ನಿಮಿಷದ ಭೇಟಿ ಹಾಗೂ ಕೊರೋನಾ ಆತಂಕ ಹಾಗೂ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಪ್ರದೇಶಗಳಿಗೆ ಹೋಗಲಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣೀರಿಟ್ಟಿರುವ ಕುರಿತ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಸಚಿವರುಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
"
ನೆರೆ ಪ್ರವಾಹದೊಂದಿಗೆ ಕೊರೋನಾ ಅಬ್ಬರ, ಮತ್ತೆ 7 ಸಾವಿರ! ...
ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಜನರು ಮನೆ, ಜಾನುವಾರು, ಜಮೀನಿನಲ್ಲಿ ಬೆಳೆದಿದ್ದ ಬೆಳೆ ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಆದರೆ, ಸಂಕಷ್ಟಲ್ಲಿರುವ ಜನರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕೈ ಕಟ್ಟಿಕೂತಿದೆ. ಸಚಿವರುಗಳು ಪ್ರವಾಹ ಪ್ರದೇಶಗಳಿಗೆ ಹೋಗುತ್ತಿಲ್ಲ. ಕೆಲವರು ಕಾಟಾಚಾರಕ್ಕೆ ಹೋಗಿ ಬಂದಿದ್ದಾರೆ. ಸಚಿವ ಅಶೋಕ್ ಕೇವಲ 10 ನಿಮಿಷ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದರೆ ಏನು ತಿಳಿದುಕೊಳ್ಳಲು ಸಾಧ್ಯ. ಯಾವುದೇ ಸಚಿವರುಗಳಿಗೆ ಜನರ ಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎನ್ನುವುದಾದರೆ ಅವರು ಅಧಿಕಾರದಲ್ಲಿ ಏಕೆ ಇರಬೇಕು? ಸ್ವಂತಕ್ಕಾಗಿ ಜನರ ಜೀವನ ಬಲಿಕೊಡಬಾರದು. ಅಧಿಕಾರ ತೊರೆದು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು.
ಇನ್ನು, ಕೇಂದ್ರ ಸರ್ಕಾರದಿಂದಲೂ ರಾಜ್ಯಕ್ಕೆ ನೆರೆ ಪರಿಹಾರಕ್ಕೆ ಯಾವುದೇ ಸಹಾಯ ಆಗುತ್ತಿಲ್ಲ. ಪ್ರಧಾನ ಮಂತ್ರಿಗಳು ಫೋನ್ ಮಾಡಿ ವಿಚಾರಿಸಿದರಂತೆ ಎನ್ನುವುದು ಬಿಟ್ಟರೆ ಇನ್ನೇನೂ ಆಗಿಲ್ಲ. ಮಾಧ್ಯಮಗಳು ಇದೆಲ್ಲವನ್ನು ಜನರಿಗೆ ಅರ್ಥವಾಗುವಂತೆ ತಿಳಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ