ಕಾರ್ಮಿಕರಿಗೆ ತಿಂಗಳಿಗೆ ರೂ. 10000 ನೀಡಿ: ಡಿಕೆಶಿ| ಸರ್ವಪಕ್ಷ ಸಭೆ ಅಥವಾ ಅಧಿವೇಶನಕ್ಕೆ ಕಾಂಗ್ರೆಸ್ ಆಗ್ರಹ
ಬೆಂಗಳೂರು(ಏ.19): ರಾಜ್ಯ ಸರ್ಕಾರ ಸಣ್ಣ ವ್ಯಾಪಾರಿಗಳು, ಆಟೋ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್‌ಗಳು ಸೇರಿದಂತೆ ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ ತಲಾ .10 ಸಾವಿರ ಸಹಾಯಧನ ನೀಡಬೇಕು. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲು ಸರ್ವ ಪಕ್ಷಗಳ ಸಭೆ ಅಥವಾ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಲಾಕ್ ಡೌನ್‌ನಿಂದ ಮೆಕ್ಯಾನಿಕ್‌ಗಳು, ಹೋಟೆಲ್ ಸಪ್ಲೈಯರ್‌ಗಳು, ಕ್ಲೀನರ್, ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿಯ ವ್ಯಾಪಾರಿಗಳು, ಕ್ಷೌರಿಕರು, ದರ್ಜಿಗಳು, ಕುಶಲ ಕರ್ಮಿಗಳು, ಹಮಾಲಿಗಳು, ಗುಜರಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅಥವಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ಮಾತೂ ಆಡಿಲ್ಲ. ಎಲ್ಲ ವರ್ಗದ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಇದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೀಗಾಗಿ ಶೀಘ್ರದಲ್ಲೇ ಕಾಂಗ್ರೆಸ್ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಅಸಂಘಟಿತ ಕಾರ್ಮಿಕರ ನೆರವಿಗೆ ಧಾವಿಸುವಂತೆ ಮನವಿ ಮಾಡುವುದಾಗಿ ಹೇಳಿದರು.
ಮಾಲ್‌ಗಳ ವ್ಯಾಪಾರಿಗಳಿಗೆ ಬಾಡಿಗೆ ವಿನಾಯಿತಿ
ಕೊರೋನಾ ಪರಿಸ್ಥಿತಿ ನಿರ್ವಹಣೆ, ಜನ ಸಾಮಾನ್ಯರಿಗೆ ಪರಿಹಾರ ತಲುಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ. ಈ ಎರಡೂ ಸರ್ಕಾರಗಳು ವೃತ್ತಿಪರ ವರ್ಗದ ಕಾರ್ಮಿಕರ ಬಗ್ಗೆ ಚಕಾರ ಎತ್ತದೆ ಸಂಪೂರ್ಣ ಕಡೆಗಣಿಸಿವೆ. ರಾಜ್ಯದಲ್ಲಿ 1.63 ಕೋಟಿ ಅಸಂಘಟಿತ ಕಾರ್ಮಿಕರಿದ್ದು, ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಈವರೆಗೂ ಒಂದು ಪೈಸೆ ಪರಿಹಾರ ನೀಡಿಲ್ಲ. ದುಡಿಮೆ ಇಲ್ಲದೆ ಈ ಕಾರ್ಮಿಕರ ಬದುಕು ಏನಾಗಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.