67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅ.28ರಂದು ಆಯೋಜಿಸಿ ನಾಡಗೀತೆ ಸೇರಿದಂತೆ ನಾಡು ನುಡಿಯ ಶ್ರೇಷ್ಠತೆ ಸಾರುವ ಐದು ಗೀತೆಗಳ ಸಾಮೂಹಿಕ ಗಾಯನ ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಬೆಂಗಳೂರು (ಅ.20): 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅ.28ರಂದು ಆಯೋಜಿಸಿ ನಾಡಗೀತೆ ಸೇರಿದಂತೆ ನಾಡು ನುಡಿಯ ಶ್ರೇಷ್ಠತೆ ಸಾರುವ ಐದು ಗೀತೆಗಳ ಸಾಮೂಹಿಕ ಗಾಯನ ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಇಲಾಖೆ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಅ.28ರ ಬೆಳಗ್ಗೆ 11 ಗಂಟೆಗೆ ‘ನನ್ನ ನಾಡು-ನನ್ನ ಹಾಡು’ ಸಮೂಹ ಗೀತ ಗಾಯನ ಏರ್ಪಡಿಸಿ ಮೊದಲು ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಗಾಯನ ನಡೆಸಬೇಕು. ನಂತರ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’, ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಡಾ.ಡಿ.ಎಸ್. ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’, ನಾಡೋಜ ಡಾ.ಚೆನ್ನವೀರ ಕಣವಿ ಅವರ ‘ವಿಶ್ವವಿನೂತನ ವಿದ್ಯಾಚೇತನ’, ಡಾ.ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಗೀತೆಗಳನ್ನು ಹಾಡುವ ಮೂಲಕ ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವ ಹಾಗೂ ಅದರ ಶ್ರೇಷ್ಠತೆಯನ್ನು ಸಾರಬೇಕು ಎಂದು ತಿಳಿಸಿದೆ.
Koti Kanta Gayana: ಅ.28ಕ್ಕೆ ಕೋಟಿ ಕಂಠದಲ್ಲಿ ಕನ್ನಡ ಗೀತೆ ಗಾಯನ: ಸಚಿವ ಸುನಿಲ್ ಕುಮಾರ್
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಸಾರ್ವಜನಿಕರು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಈ ಗೀತೆಗಳನ್ನು ಹಾಡುವ ಧಾಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯುಟ್ಯೂಬ್ ಚಾನೆಲ್ ಲಿಂಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆ ಧಾಟಿಯಲ್ಲಿ ಗೀತ ಗಾಯನ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಏಕಕಾಲದಲ್ಲಿ ‘ಕೋಟಿ ಕಂಠ ಗಾಯನ’: 67ನೇ ಕರ್ನಾಟಕ ರಾಜ್ಯೋತ್ಸವ ಸಲುವಾಗಿ ಅ.28ರಂದು ‘ನನ್ನ ನಾಡು-ನನ್ನ ಹಾಡು’ ಕೋಟಿ ಕಂಠ ಗಾಯನ ಕೇವಲ ಕರ್ನಾಟಕ ಮಾತ್ರವಲ್ಲ ಜಗತ್ತಿನಾದ್ಯಂತ ಏಕಕಾಲದಲ್ಲಿ ಮೊಳಗಲಿದೆ. ಕಳೆದ ಬಾರಿ ಮಾತಾಡ್ ಮಾತಾಡ್ ಕನ್ನಡ ಘೋಷವಾಕ್ಯದೊಂದಿಗೆ ಲಕ್ಷ ಕಂಠ ಗಾಯನ ಕಾರ್ಯಕ್ರಮ ನಡೆದಿತ್ತು. ಈ ಬಾರಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಕೇವಲ ಕರ್ನಾಟಕ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಕೇಳಿಬರಲಿದೆ. ನಾಡು, ಗಡಿನಾಡಿನ ಹಾಗೂ ದೇಶ, ವಿದೇಶದ ಕನ್ನಡಿಗರು ಕೋಟಿ ಕಂಠ ಗಾಯನಕ್ಕೆ ದನಿಗೂಡಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಕೋಟಿ ಕಂಠ ಗಾಯನ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 11 ಗಂಟೆಗೆ ಏಕಕಾಲಕ್ಕೆ ಕೋಟಿ ಕಂಠಗಳಿಂದ ಕನ್ನಡದ ಆಯ್ದ ಆರು ಗೀತೆಗಳ ಗಾಯನ ಏರ್ಪಡಲಿದೆ. ಈ ಬಗ್ಗೆ ದೇಶ, ವಿದೇಶಗಳಲ್ಲೂ ಕನ್ನಡಿಗರ ಸಂಘಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಅವರೆಲ್ಲರೂ ಸಭೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕನ್ನಡ ಇತಿಹಾಸದಲ್ಲಿ ಅಚ್ಚಳಿಯದ ಕಾರ್ಯಕ್ರಮವಾಗಿ ಇದು ದಾಖಲಾಗಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಧಿಕಾರಿಗಳು, ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಜನತೆ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಚಿವ ಸುನಿಲ್ ಕುಮಾರ್ ಆಶಿಸಿದರು.
ದೇಗುಲಗಳಲ್ಲಿ ದೀಪಾವಳಿ ದಿನ ಸರ್ಕಾರಿ ಗೋಪೂಜೆ!
ದ.ಕ.ದಲ್ಲಿ 7 ಲಕ್ಷ ಕಂಠ ಗಾಯನ: ಒಟ್ಟು 10 ಸಾವಿರ ಕಡೆಗಳಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಯಲಿದ್ದು, 50 ಕಡೆ ಮಾದರಿ ಕಾರ್ಯಕ್ರಮಕ್ಕೆ ಉದ್ದೇಶಿಸಲಾಗಿದೆ. ದ.ಕ.ಜಿಲ್ಲೆಯಲ್ಲಿ 7 ಲಕ್ಷ ಮಂದಿಯ ಕಂಠ ಗಾಯನ ಏರ್ಪಡಿಸುವ ಗುರಿ ಹೊಂದಲಾಗಿದೆ. ಒಂದು ಕಾರ್ಯಕ್ರಮದಲ್ಲಿ ಕನಿಷ್ಠ 100 ಮಂದಿ ಇರುವಂತೆ ನೋಡಿಕೊಳ್ಳಬೇಕು. ದ.ಕ.ಜಿಲ್ಲೆಯ ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್ ಮತ್ತು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅರ್ಧ ಗಂಟೆ ಮೊದಲೇ ಎಲ್ಲರೂ ಸ್ಥಳದಲ್ಲಿ ಹಾಜರಿದ್ದು ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭಿಸಬೇಕು. ಸುಮಾರು 30 ನಿಮಿಷಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದರು.